
ಕೆನಡಾ ಸರ್ಕಾರವು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಅನ್ನು ಕ್ರಿಮಿನಲ್ ಕೋಡ್ ಅಡಿಯಲ್ಲಿ ಭಯೋತ್ಪಾದಕ ಗಂಪು ಎಂದು ಘೋಷಿಸಿದೆ.
ಈ ಕ್ರಮವು ಕೆನಡಿಯನ್ನರು ಬಿಷ್ಣೋಯ್ ಗ್ಯಾಂಗ್‌ಗೆ ಹಣಕಾಸು ಮತ್ತು ಇತರ ವಸ್ತುಗಳ ಬೆಂಬಲ ಒದಗಿಸುವುದನ್ನು ತಡೆಯಲಿದೆ. ಸರ್ಕಾರ ಬಿಷ್ಣೋಯ್ ಗ್ಯಾಂಗ್‌ಗೆ ಸೇರಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಅದರ ಅಂಗಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಆರೋಪಗಳನ್ನು ಹೊರಿಸಲು ಅನುವು ಮಾಡಿಕೊಡಲಿದೆ.
ಬಿಷ್ಣೋಯ್ ಗ್ಯಾಂಗ್ ಅನ್ನು ಭಯೋತ್ಪಾದಕ ಗಂಪು ಎಂದು ಘೋಷಿಸಿರುವುದರಿಂದ ಹಿಂಸೆ ಮತ್ತು ಬೆದರಿಕೆಯ ಮೂಲಕ ಭಯವನ್ನು ಹುಟ್ಟಿಸಿರುವ ಗುಂಪಿನ ವಿರುದ್ಧ ಹೋರಾಡಲು ಕಾನೂನು ಜಾರಿ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ದೊರೆಯಲಿದೆ ಎಂದು ಕೆನಡಾ ಸರ್ಕಾರದ ಸಾರ್ವಜನಿಕ ಸುರಕ್ಷತಾ ಸಚಿವ ಗ್ಯಾರಿ ಆನಂದಸಂಗರೀ ಹೇಳಿದ್ದಾರೆ.
ಬಿಷ್ಣೋಯ್ ಗ್ಯಾಂಗ್ ರಾಜಸ್ಥಾನದಲ್ಲಿ ಹುಟ್ಟಿಕೊಂಡ ಒಂದು ಅಂತಾರಾಷ್ಟ್ರೀಯ ಸಿಂಡಿಕೇಟ್ ಆಗಿದ್ದು, ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಇದರ ನೇತೃತ್ವ ವಹಿಸಿದ್ದಾನೆ.
ಬ್ರಿಟಿಷ್ ಕೊಲಂಬಿಯಾ, ಒಂಟಾರಿಯೊ ಮತ್ತು ಆಲ್ಬರ್ಟಾದಲ್ಲಿ ಸಕ್ರಿಯವಾಗಿರುವ ಈ ಗ್ಯಾಂಗ್, 2023ರಿಂದ 50ಕ್ಕೂ ಹೆಚ್ಚು ಹಿಂಸಾತ್ಮಕ ಘಟನೆಗಳಲ್ಲಿ ಭಾಗಿಯಾಗಿದೆ. ಪಂಜಾಬಿ ಸಂಗೀತಗಾರ ಎಪಿ ಧಿಲ್ಲೋನ್ ಮತ್ತು ಗಿಪ್ಪಿ ಗ್ರೆವಾಲ್ ಅವರ ಮನೆಗಳ ಮೇಲೆ ಬಾಂಬ್ ದಾಳಿ, ಈ ಆಗಸ್ಟ್‌ನಲ್ಲಿ ಹಾಸ್ಯನಟ ಕಪಿಲ್ ಶರ್ಮಾ ಅವರ ಸರ್ರೆ ಕೆಫೆಯಲ್ಲಿ ನಡೆದ ಗುಂಡಿನ ದಾಳಿ ಮತ್ತು ದಕ್ಷಿಣ ಏಷ್ಯಾದ ಸಮುದಾಯಗಳನ್ನು ಗುರಿಯಾಗಿಸಿಕೊಂಡ ವ್ಯಾಪಕವಾದ ಸುಲಿಗೆ ದಂಧೆಗಳು ಇದರಲ್ಲಿ ಸೇರಿವೆ.
ಹಲವು ರಾಜಕೀಯ ನಾಯಕರು ಮತ್ತು ಸಮುದಾಯಗಳಿಂದ ಒತ್ತಡ ಬಂದ ನಂತರ ಕೆನಡಾ ಸರ್ಕಾರ ಬಿಷ್ಣೋಯ್ ಗ್ಯಾಂಗ್ ಭಯೋತ್ಪಾದಕ ಗುಂಪು ಎಂದು ಘೋಷಿಸಿದೆ.
ಬ್ರಿಟಿಷ್ ಕೊಲಂಬಿಯಾದ ಮುಖ್ಯಮಂತ್ರಿ ಡೇವಿಡ್ ಈಬಿ ಕಳೆದ ಜೂನ್‌ನಲ್ಲಿ ಪ್ರಧಾನಮಂತ್ರಿ ಮಾರ್ಕ್ ಕಾರ್ನಿಗೆ ಬಿಷ್ಣೋಯ್ ಗ್ಯಾಂಗ್‌ನ್ನು ‘ಭಯೋತ್ಪಾದಕ ಗುಂಪು’ ಎಂದು ಘೋಷಿಸಲು ಒತ್ತಾಯಿಸಿದ್ದರು. “ಈ ಗುಂಪು ನಮ್ಮ ನೆಲದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದೆ” ಎಂದು ಅವರು ಹೇಳಿದ್ದರು. ಜುಲೈನಲ್ಲಿ ಆಲ್ಬರ್ಟಾದ ಮುಖ್ಯಮಂತ್ರಿ ಡಾನಿಯಲ್ ಸ್ಮಿತ್ ಕೂಡ ಇದೇ ಬೇಡಿಕೆ ಮುಂದಿಟ್ಟಿದ್ದರು. ನಂತರ, ಬ್ರಾಂಪ್ಟನ್ ಮೇಯರ್ ಪ್ಯಾಟ್ರಿಕ್ ಬ್ರೌನ್ ಮತ್ತು ಸರ್ರೆ ಮೇಯರ್ ಬ್ರೆಂಡಾ ಲಾಕ್ ಕೂಡ ಬಿಷ್ಣೋಯ್ ಗ್ಯಾಂಗ್ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.
ಕಳೆದ ಆಗಸ್ಟ್‌ನಲ್ಲಿ, ಕೆನಡಾದ ಕನ್ಸರ್ವೇಟಿವ್ ಪಕ್ಷದ ನಾಯಕ ಪಿಯರೆ ಪೊಯಿಲಿವ್ರೆ ಅವರು ಬಿಷ್ಣೋಯ್ ಗ್ಯಾಂಗ್ ವಿರುದ್ದ ಹೇಳಿಕೆ ಕೊಟ್ಟಿದ್ದರು. ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು. ಎನ್‌ಡಿಪಿ ಸಂಸದರೂ ಇದಕ್ಕೆ ಬೆಂಬಲ ಕೊಟ್ಟಿದ್ದರು. ಆಗಸ್ಟ್ 11 ರಂದು, ಶಾಡೋದ ಸಾರ್ವಜನಿಕ ಸುರಕ್ಷತೆಯ ಮಂತ್ರಿ ಫ್ರಾಂಕ್ ಕಪುಟೊ ಬಿಷ್ಣೋಯ್ ಗ್ಯಾಂಗ್ ವಿರುದ್ದ ಕ್ರಮಕ್ಕೆ ಔಪಚಾರಿಕವಾಗಿ ಮನವಿ ಮಾಡಿದ್ದರು.
ಅಕ್ಟೋಬರ್ 2024ರಲ್ಲಿ, ಕೆನಡಾದ ಪೊಲೀಸ್ ಮುಖ್ಯಸ್ಥ ಮೈಕ್ ಡುಹೆಮೆ ಬಿಷ್ಣೋಯ್ ಗ್ಯಾಂಗ್‌ನ ಕೆಲವು ಕೃತ್ಯಗಳು ಸರ್ಕಾರಿ ಪ್ರಾಯೋಜಿತ ಎಂದು ಭಾರತದ ಕಡೆಗೆ ಬೊಟ್ಟು ಮಾಡಿದ್ದರು. ಈ ಆರೋಪಕ್ಕೆ ಉದಾಹರಣೆಯಾಗಿ ಜೂನ್ 2023ರಲ್ಲಿ ಸರ್ರೆಯಲ್ಲಿ ನಡೆದ ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್‌ನ ಕೊಲೆಯನ್ನು ಅವರು ಉಲ್ಲೇಖಿಸಿದ್ದರು. ಆದರೆ, ಭಾರತ ಸರ್ಕಾರ ಈ ಆರೋಪಗಳನ್ನು ತಳ್ಳಿಹಾಕಿತ್ತು. ಕೆನಡಾಕ್ಕೆ ಈ ಗ್ಯಾಂಗ್‌ನ ಬೆದರಿಕೆಗಳ ಬಗ್ಗೆ ಎಚ್ಚರಿಕೆ ನೀಡಿದ್ದೇವೆ ಮತ್ತು ಅವರ ಹಣಕಾಸಿನ ಹರಿವನ್ನು ತಡೆಯಲು ಸಹಾಯ ಮಾಡಿದ್ದೇವೆ ಎಂದು ಭಾರತ ಹೇಳಿತ್ತು.
ಬಿಷ್ಣೋಯ್ ಗ್ಯಾಂಗ್ ಅನ್ನು ‘ಭಯೋತ್ಪಾದಕ’ ಗುಂಪು ಎಂದು ಘೋಷಣೆ ಮಾಡಿರುವುದರಿಂದ ಪೊಲೀಸರಿಗೆ ಅಪರಾಧ ಕೃತ್ಯಗಳನ್ನು ತಡೆಯಲು ಹೆಚ್ಚು ಬಲ ಸಿಗಲಿದೆ ಎನ್ನಲಾಗಿದೆ. ಆದರೆ. ತಜ್ಞರು ಇದರಿಂದ ದೊಡ್ಡ ಬದಲಾವಣೆ ಆಗದಿರಬಹುದು ಎಂದು ಹೇಳಿದ್ದಾರೆ. ಟೊರೊಂಟೊ ಸನ್ ಪತ್ರಿಕೆ ಜೊತೆ ಮಾತನಾಡಿರುವಸೆಂಟರ್ ಫಾರ್ ಇಂಟರ್‌ನ್ಯಾಷನಲ್ ಗವರ್ನೆನ್ಸ್ ಇನ್ನೋವೇಷನ್‌ನ ತಜ್ಞ ವೆಸ್ಲಿ ವಾರ್ಕ್ “ಕೆನಡಾದಲ್ಲಿ ಅಪರಾಧದ ಬಗ್ಗೆ ಮಾಹಿತಿ ಸಂಗ್ರಹಿಸುವ ಸಾಮರ್ಥ್ಯ ಕಡಿಮೆ ಇದೆ, ಇದೇ ಮುಖ್ಯ ಸಮಸ್ಯೆ” ಎಂದಿದ್ದಾರೆ.
ಕೆನಡಾ ಮತ್ತು ಭಾರತದ ಸಂಬಂಧಗಳು ಜೂನ್ 2025ರ ಜಿ7 ಶೃಂಗಸಭೆಯ ನಂತರ ಸ್ವಲ್ಪ ಸುಧಾರಿಸುತ್ತಿರುವ ಸಂದರ್ಭದಲ್ಲಿ, ಬಿಷ್ಣೋಯ್ ಗ್ಯಾಂಗ್ ‘ಭಯೋತ್ಪಾದಕ’ ಗುಂಪು ಎಂದು ಘೋಷಿಸಲಾಗಿದೆ. ಜಿ7 ಶೃಂಗಸಭೆಯ ನಂತರ ಭಾರತ ಮತ್ತು ಕೆನಡಾ ತಮ್ಮ ರಾಯಭಾರಿಗಳನ್ನು ಮತ್ತೆ ನೇಮಿಸಿವೆ. ಭಾರತೀಯ ಅಧಿಕಾರಿಗಳು ಕೆನಡಾದ ಕ್ರಮದ ಇನ್ನೂ ಏನೂ ಹೇಳಿಲ್ಲ. ಆದರೆ. ಈ ಕ್ರಮವು ಲಾರೆನ್ಸ್ ಬಿಷ್ಣೋಯ್ ಗುಂಪಿನ ಸಹಾಯಕರಾದ ಗೋಲ್ಡಿ ಬ್ರಾರ್‌ನಂತಹವರನ್ನು ಭಾರತಕ್ಕೆ ವಾಪಸ್ ಕಳುಹಿಸುವ (ಎಕ್ಸ್‌ಟ್ರಾಡಿಷನ್) ಪ್ರಕರಣಗಳಲ್ಲಿ ಕೆನಡಾಕ್ಕೆ ಹೆಚ್ಚಿನ ಶಕ್ತಿ ನೀಡಬಹುದು ಎನ್ನಲಾಗಿದೆ.
ಕಳೆದ ವರ್ಷ, ಆರ್‌ಸಿಎಂಪಿ (ಕೆನಡಾ ಪೊಲೀಸ್) ಕರಣ್ ಬ್ರಾರ್ (ಗೋಲ್ಡಿ ಬ್ರಾರ್‌ಗೆ ಸಂಬಂಧವಿಲ್ಲ) ಮತ್ತು ಕರಣ್‌ಪ್ರೀತ್ ಸಿಂಗ್ ಎಂಬವರನ್ನು ಜೂನ್ 2023ರಲ್ಲಿ ಸರ್ರೆಯಲ್ಲಿ ನಡೆದ ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್‌ನ ಕೊಲೆಗೆ ಸಂಬಂಧಿಸಿದಂತೆ ಮೇ 2024ರಲ್ಲಿ ಬಂಧಿಸಿತ್ತು. ಈ ಇಬ್ಬರನ್ನೂ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸಂಬಂಧಿಸಿದವರೆಂದು ಆರ್‌ಸಿಎಂಪಿ ಗುರುತಿಸಿದೆ.
ಬಿಷ್ಣೋಯ್ ಗ್ಯಾಂಗ್‌ನ ಕೆನಡಾದ ಕಾರ್ಯಾಚರಣೆಗಳನ್ನು ಗೋಲ್ಡಿ ಬ್ರಾರ್ ಎಂಬ 29 ವರ್ಷದ ಗ್ಯಾಂಗ್‌ಸ್ಟರ್ ನಡೆಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ಈತ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ವಾಸಿಸುತ್ತಿದ್ದಾನೆ. ಗೋಲ್ಡಿ ಬ್ರಾರ್ 2017ರಲ್ಲಿ ವಿದ್ಯಾರ್ಥಿ ವೀಸಾದ ಮೂಲಕ ಭಾರತದಿಂದ ಪರಾರಿಯಾಗಿದ್ದು, ಲಾರೆನ್ಸ್ ಬಿಷ್ಣೋಯ್‌ನ ಪ್ರಮುಖ ಸಹಾಯಕ ಮತ್ತು ಸಾರ್ವಜನಿಕ ಮುಖವಾಗಿದ್ದಾನೆ. 2022ರಲ್ಲಿ ಪಂಜಾಬಿ ರ‍್ಯಾಪರ್ ಸಿದ್ಧು ಮೂಸೆ ವಾಲಾ ಕೊಲೆಗೆ ತಾನೇ ಜವಾಬ್ದಾರ ಎಂದು ಬ್ರಾರ್ ಸಾರ್ವಜನಿಕವಾಗಿ ಹೇಳಿಕೊಂಡಿದ್ದ ಅಂದಿನಿಂದ, ಕೆನಡಾದಲ್ಲಿ ಬೆದರಿಸಿ ಹಣ ಪಡೆಯುವುದು ಮತ್ತು ಗುರಿಯಿಟ್ಟ ಕೊಲೆಗಳನ್ನು ನಡೆಸುತ್ತಿದ್ದಾನೆ. ಆಗಾಗ್ಗೆ ಎನ್‌ಕ್ರಿಪ್ಟೆಡ್ ಆಪ್‌ಗಳನ್ನು ಬಳಸಿಕೊಂಡು ಜೈಲಿನಲ್ಲಿರುವ ಬಿಷ್ಣೋಯ್‌ನ ಜಾಲದೊಂದಿಗೆ ಸಂಪರ್ಕ ಸಾಧಿಸುತ್ತಿದ್ದಾನೆ ಎಂದು ವರದಿಗಳು ಹೇಳಿವೆ.
ಜೂನ್ 2025ರಲ್ಲಿ ಕೆಲವು ವರದಿಗಳು ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ನಡುವೆ ಜಗಳವಿದೆ ಎಂದು ಹೇಳಿದ್ದವು. ಆದರೂ, ಬ್ರಾರ್ ಇನ್ನೂ ವಿದೇಶದಲ್ಲಿ ವಾಸಿಸುವ ಜನರ ವ್ಯಾಪಾರಗಳನ್ನು ಗುರಿಯಾಗಿಸುವ ಬಿಷ್ಣೋಯ್‌ನ ಬೆದರಿಕೆಯಿಂದ ಹಣ ಪಡೆಯುವ ಜಾಲದೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಹೇಳಲಾಗ್ತಿದೆ.
ಈ ಗ್ಯಾಂಗ್ ಬ್ರಾಂಪ್ಟನ್‌ನ ‘ಬ್ರದರ್ಸ್ ಕೀಪರ್ಸ್’ ಎಂಬ ಸಣ್ಣ ಗುಂಪಿನೊಂದಿಗೂ ಸಂಪರ್ಕ ಹೊಂದಿದೆ. ಈ ಗುಂಪು ಪಂಜಾಬಿ ಸಂಗೀತಗಾರರು ಮತ್ತು ವ್ಯಾಪಾರಿಗಳ ವಿರುದ್ಧ ಬೆಂಕಿಯಿಡುವಿಕೆ ಮತ್ತು ಗುಂಡಿನ ದಾಳಿಗಳನ್ನು ಮಾಡಿದ ಆರೋಪ ಎದುರಿಸುತ್ತಿದೆ.