Published : Sep 28 2025, 07:06 PM IST

ಬೆಂಗಳೂರಿನ ಹುಳಿಮಾವು ಬಳಿ, ಅಡಿಕೆ ವ್ಯಾಪಾರಿಗೆ ಸೇರಿದ 1 ಕೋಟಿಗೂ ಹೆಚ್ಚು ಹಣವನ್ನು ಚಲಿಸುತ್ತಿದ್ದ ಕಾರಿನಿಂದಲೇ ದರೋಡೆ ಮಾಡಲಾಗಿತ್ತು. ವಿಷಯ ತಿಳಿದ ಹುಳಿಮಾವು ಪೊಲೀಸರು, ಕೇವಲ 15 ನಿಮಿಷಗಳ ಮಿಂಚಿನ ಕಾರ್ಯಾಚರಣೆಯಲ್ಲಿ ಎಂಟು ಮಂದಿ ಆರೋಪಿಗಳನ್ನು ಬಂಧಿಸಿ, ಸಂಪೂರ್ಣ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು (ಸೆ. 28): ಚಲಿಸುತ್ತಿದ್ದ ಕಾರಿನಿಂದಲೇ ಅಡಿಕೆ ವ್ಯಾಪಾರಿಗೆ ಸೇರಿದ 1 ಕೋಟಿಗೂ ಹೆಚ್ಚು ಹಣವನ್ನು ದರೋಡೆ ಮಾಡಿದ್ದ ಎಂಟು ಮಂದಿಯ ಒಂದು ದೊಡ್ಡ ಗ್ಯಾಂಗ್ ಅನ್ನು ಬೆಂಗಳೂರಿನ ಹುಳಿಮಾವು ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಕೃತ್ಯ ನಡೆದ ಕೇವಲ 15 ನಿಮಿಷದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕ್ಷಿಪ್ರ ಕಾರ್ಯಚರಣೆಯಿಂದಾಗಿ ದರೋಡೆ ಆಗಿದ್ದ ಸಂಪೂರ್ಣ ಹಣ ಪೊಲೀಸರ ಕೈಸೇರಿದೆ. ಬಂಧಿತ ಆರೋಪಿಗಳನ್ನು ನರಸಿಂಹ, ಜೀವನ್, ಕಿಶೋರ್, ವೆಂಕಟರಾಜು, ಚಂದ್ರ ಅಲಿಯಾಸ್ ಚಂದಿರನ್, ಕುಮಾರ್, ರವಿಕಿರಣ್, ಮತ್ತು ನಮನ್ ಎಂದು ಗುರುತಿಸಲಾಗಿದೆ.
ದರೋಡೆಯ ವಿವರ:
ಅರಸೀಕೆರೆ ಮೂಲದ ಮೋಹನ್ ಎಂಬ ಅಡಿಕೆ ವ್ಯಾಪಾರಿಗೆ ಸೇರಿದ ಒಟ್ಟು ₹1 ಕೋಟಿ 1 ಲಕ್ಷ ಹಣ ದರೋಡೆಯಾಗಿದೆ. ಮೋಹನ್ ಅವರ ಕೆಲಸಗಾರನಾದ ಹೇಮಂತ್ ಎಂಬಾತ, ಮೋಹನ್ಗಾಗಿ ಹಣವನ್ನು ಸಂಗ್ರಹಿಸಲು ಹುಳಿಮಾವು ಸಮೀಪದ ಅಕ್ಷಯನಗರಕ್ಕೆ ಬಂದಿದ್ದನು. ನಿನ್ನೆ ಸಂಜೆ 5.30ರ ಸುಮಾರಿಗೆ, ಹೇಮಂತ್ ಮತ್ತು ಮೋಟರಾಮ್ ಎಂಬುವರು ಹಣವನ್ನು ಮೋಟರಾಮ್ ಅವರ ಕಾರಿನಲ್ಲಿ ಹಣ ಸಂಗ್ರಹಿಸುತ್ತಿದ್ದರು. ಅದೇ ಸಮಯದಲ್ಲಿ, ಬೈಕ್ಗಳಲ್ಲಿ ಏಕಕಾಲಕ್ಕೆ ನುಗ್ಗಿದ 8 ಮಂದಿ ದರೋಡೆಕೋರರ ಗ್ಯಾಂಗ್, ಹೇಮಂತ್ ಮತ್ತು ಮೋಟರಾಮ್ಗೆ ಬೆದರಿಸಿ, ಹಣವಿದ್ದ ಕಾರಿನ ಸಮೇತ ಅದನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
15 ನಿಮಿಷದಲ್ಲಿ ಯಶಸ್ವಿ ಬಂಧನ:
ದರೋಡೆಕೋರರು ಕಾರಿನೊಂದಿಗೆ ಪರಾರಿಯಾಗುತ್ತಿದ್ದಂತೆ, ಸ್ಥಳೀಯರು ಕೂಡಲೇ ಹುಳಿಮಾವು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಕೂಡಲೇ ಎಚ್ಚೆತ್ತ ಹುಳಿಮಾವು ಠಾಣೆಯ ಇನ್ಸ್ಪೆಕ್ಟರ್ ಮತ್ತು ಅವರ ತಂಡ ತಕ್ಷಣವೇ ಕಾರ್ಯಾಚರಣೆಗೆ ಇಳಿದು, ನಗರದಾದ್ಯಂತ ತೀವ್ರ ಶೋಧ ನಡೆಸಿತು. ಪೊಲೀಸರ ತಂಡ ತಂತ್ರಜ್ಞಾನ ಮತ್ತು ಕ್ಷಿಪ್ರ ಕಾರ್ಯತಂತ್ರವನ್ನು ಬಳಸಿ, ದರೋಡೆಕೋರರು ಹೆಚ್ಚು ದೂರ ಹೋಗುವ ಮುನ್ನವೇ ಅವರನ್ನು ಸುತ್ತುವರಿಯುವಲ್ಲಿ ಯಶಸ್ವಿಯಾಗಿದೆ. ಕೇವಲ 15 ನಿಮಿಷಗಳ ಅಂತರದಲ್ಲಿ ಎಂಟು ಮಂದಿ ಆರೋಪಿಗಳನ್ನು ಬಂಧಿಸಿ, ದರೋಡೆಗೆ ಬಳಸಿದ್ದ ಬೈಕ್ಗಳು, ದರೋಡೆ ಮಾಡಿದ್ದ ಸಂಪೂರ್ಣ ಹಣ ಮತ್ತು ಕಾರನ್ನು ವಶಪಡಿಸಿಕೊಂಡಿದ್ದಾರೆ.
ದರೋಡೆಕೋರರ ತಂಡವು ಈ ಕೃತ್ಯವನ್ನು ಪೂರ್ವಯೋಜಿತವಾಗಿ ಮಾಡಿರುವ ಸಾಧ್ಯತೆ ಇದ್ದು, ಅಡಿಕೆ ವ್ಯಾಪಾರಿಯ ಹಣದ ಚಲನೆಯ ಬಗ್ಗೆ ನಿಖರ ಮಾಹಿತಿ ಪಡೆದಿದ್ದರೇ ಎಂಬ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಹುಳಿಮಾವು ಪೊಲೀಸ್ ತಂಡದ ಕ್ರಮಕ್ಕೆ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಘಟನೆ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.