
ಲಕ್ನೋ: ಆಶ್ರಮದಲ್ಲಿ 17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸ್ವಾಮಿ ಚೈತನ್ಯಾನಂದ ಸರಸ್ವತಿ (Swami Chaitanyananda Saraswati) ಎಂಬಾತನನ್ನು ಪೊಲೀಸರು ಉತ್ತರಪ್ರದೇಶದ ಆಗ್ರಾದಲ್ಲಿ (Agra) ಬಂಧಿಸಿದ್ದಾರೆ. ಅವರ ವಿರುದ್ಧ ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ, ಬಲವಂತದ ದೈಹಿಕ ಸಂಪರ್ಕ ನಡೆಸಿದ ಆರೋಪಗಳಿವೆ.
ದೆಹಲಿಯ (Delhi) ಶಾರದಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್ನ ನಿರ್ವಹಣಾ ಸಮಿತಿಯ ಸದಸ್ಯರಾಗಿರುವ ಆರೋಪಿಯು ಈ ಪ್ರಕರಣ ಬೆಳಕಿಗೆ ಬಂದ ಬಳಿಕ ತಲೆಮರೆಸಿಕೊಂಡಿದ್ದರು. ಇವರ ವಿರುದ್ಧ 2009 ಮತ್ತು 2016 ರಲ್ಲಿ ಸಹ ಎರಡು ಲೈಂಗಿಕ ಕಿರುಕುಳದ ದೂರು ದಾಖಲಾಗಿದ್ದವು. ಸ್ವಾಮೀಜಿ, ವಿದ್ಯಾರ್ಥಿಗಳನ್ನು ತಮ್ಮ ಕೋಣೆಗೆ ಕರೆಸಿಕೊಂಡು ಉಚಿತ ವಿದೇಶ ಪ್ರವಾಸಗಳ ಆಮಿಷ ಒಡ್ಡಿ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದರು. ಮಹಿಳಾ ಹಾಸ್ಟೆಲ್ನಲ್ಲಿ ರಹಸ್ಯವಾಗಿ ಕ್ಯಾಮೆರಾಗಳನ್ನು ಅಳವಡಿಸಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಆರೋಪಗಳು ಹೊರಬಿದ್ದ ನಂತರ, ಆಶ್ರಮದ ಆಡಳಿತ ಮಂಡಳಿ ಚೈತನ್ಯಾನಂದರನ್ನು ಅವರ ಹುದ್ದೆಯಿಂದ ಹೊರಹಾಕಿತ್ತು.
ವಿದ್ಯಾರ್ಥಿನಿಯರ ದೂರು ಏನು?
ಸ್ವಾಮಿ ಚೈತನ್ಯಾನಂದ ಸರಸ್ವತಿ ಪಾರ್ಥ ಸಾರಥಿ, ಇಡಬ್ಲ್ಯೂಎಸ್ ವಿದ್ಯಾರ್ಥಿವೇತನದಡಿಯಲ್ಲಿ ಪಿಜಿಡಿಎಂ ಕೋರ್ಸ್ಗಳನ್ನು ಕಲಿಯುತ್ತಿರುವ ಮಹಿಳಾ ವಿದ್ಯಾರ್ಥಿಗಳಿಗೆ ಅಶ್ಲೀಲ ಭಾಷೆಯನ್ನು ಬಳಸಿ ನಿಂದಿಸುತ್ತಿದ್ದರು, ಮತ್ತು ವಾಟ್ಸಪ್ನಲ್ಲಿ ಅಶ್ಲೀಲ ಸಂದೇಶಗಳನ್ನ ಕಳಿಸುತ್ತಿದ್ದರು. ಅಲ್ಲದೇ ದೈಹಿಕ ಸಂಪರ್ಕಕ್ಕೂ ಪ್ರಯತ್ನಿಸಿದ್ದರು. ಸಂಸ್ಥೆಯಲ್ಲಿನ ಕೆಲ ಮಹಿಳಾ ಅಧ್ಯಾಪಕರು ಹಾಗೂ ಆಡಳಿತಾಧಿಕಾರಿಗಳು ಅವರ ಬೇಡಿಕೆ ಈಡೇರಿಸುವಂತೆ ಮಹಿಳಾ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುತ್ತಿದ್ದರು. ಇದರಿಂದಾಗಿ ಸಾಕಷ್ಟು ಮಾನಸಿಕ ಹಾಗೂ ದೈಹಿಕ ಹಿಂಸೆ ಅನುಭವಿಸಿದ್ದಾರೆ ಎಂದು ವಿದ್ಯಾರ್ಥಿನಿಯರು ದೂರಿನಲ್ಲಿ ತಿಳಿಸಿದ್ದರು.
ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ದೆಹಲಿ ಪೊಲೀಸರು, 32 ವಿದ್ಯಾರ್ಥಿನಿಯರ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಈ ಪೈಕಿ 17 ಮಂದಿ ತಮ್ಮ ಮೇಲೆ ನಿಂದನೆಯ ಭಾಷೆ ಬಳಸಿದ್ದಾರೆ, ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾರೆಂದು ಹೇಳಿಕೊಂಡಿದ್ದಾರೆ. ಇದಕ್ಕೆ ನಾವು ವಿರೋಧ ಮಾಡಿದಾಗ ಕೆಲ ಮಹಿಳಾ ಅಧ್ಯಾಪಕರು ಹಾಗೂ ಆಡಳಿತಾಧಿಕಾರಿಗಳು ಸಹಕರಿಸುವಂತೆ ನಮ್ಮ ಮೇಲೆ ಒತ್ತಡ ಹೇರುತ್ತಿದ್ದರು. ಇದು ಒಂದು ದಿನದ ಸಮಸ್ಯೆಯಲ್ಲ ದೀರ್ಘಕಾಲದ ಸಮಸ್ಯೆ ಎಂದು ಹೇಳಿಕೊಂಡಿರುವುದಾಗಿ ದೆಹಲಿ ಪೊಲೀಸರು ಹೇಳಿದ್ದರು.