
ನವದೆಹಲಿ: ದೀಪಾವಳಿ (Deepavali) ಸನಿಹವಾಗುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಮತ್ತೆ ವಾಯು ಮಾಲಿನ್ಯದ (Pollution) ಆತಂಕ ಶುರುವಾಗಿದೆ. ಈ ನಡುವೆ ಈ ಬಗ್ಗೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದ್ದು, ದೆಹಲಿ – ಎನ್‌ಸಿಆರ್‌ನಲ್ಲಿ ಎಲ್ಲಾ ರೀತಿಯ ಪಟಾಕಿಗಳ (Firecrackers) ಮಾರಾಟವನ್ನು ನಿಷೇಧಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ಪೀಠವು, ಕೇಂದ್ರ ಸರ್ಕಾರವು ರಾಷ್ಟ್ರವ್ಯಾಪಿ ಪಟಾಕಿಗಳ ಮಾರಾಟ ಮತ್ತು ತಯಾರಿಕೆಯ ಮೇಲೆ ಸಂಪೂರ್ಣ ನಿಷೇಧ ಹೇರಲು ಸಾಧ್ಯವಿಲ್ಲ ಎಂದು ಹೇಳಿತು.
ಸುಪ್ರೀಂಕೋರ್ಟ್ (Supreme Court) ದೆಹಲಿಯಲ್ಲಿ ಪಟಾಕಿ ತಯಾರಕರಿಗೆ ಹಸಿರು ಪಟಾಕಿಗಳನ್ನು ತಯಾರಿಸಲು ಅನುಮತಿ ನೀಡಿತು. ಆದಾಗ್ಯೂ, ಮುಂದಿನ ಆದೇಶದವರೆಗೆ ಈ ಪಟಾಕಿಗಳನ್ನು ದೆಹಲಿ-ಎನ್‌ಸಿಆರ್‌ನಲ್ಲಿ ಮಾರಾಟ ಮಾಡಬಾರದು ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ಹಸಿರು ಪಟಾಕಿ ಪ್ರಮಾಣಪತ್ರ ಹೊಂದಿರುವ ತಯಾರಕರು ಮಾತ್ರ ಪಟಾಕಿಗಳನ್ನು ತಯಾರಿಸಬೇಕು ಎಂಬ ಷರತ್ತನ್ನು ನ್ಯಾಯಾಲಯ ವಿಧಿಸಿದೆ. ಈ ಪ್ರಮಾಣಪತ್ರವನ್ನು NEERI ಮತ್ತು PESOನಂತಹ ಅಧಿಕೃತ ಏಜೆನ್ಸಿಗಳು ನೀಡಬೇಕು ಎಂದು ಹೇಳಿದೆ.
ದೆಹಲಿ-ಎನ್‌ಸಿಆರ್‌ನಲ್ಲಿ ಯಾವುದೇ ಪಟಾಕಿಗಳನ್ನು ಮಾರಾಟ ಮಾಡುವುದಿಲ್ಲ ಎಂದು ಪಟಾಕಿ ತಯಾರಕರು ಲಿಖಿತ ಭರವಸೆ ನೀಡಬೇಕಾಗುತ್ತದೆ. ದೀಪಾವಳಿಯ ಸಮಯದಲ್ಲಿ ಈ ಪ್ರದೇಶದಲ್ಲಿ ಮಾಲಿನ್ಯದ ಮಟ್ಟವು ಗಮನಾರ್ಹವಾಗಿ ಹೆಚ್ಚಾಗುವುದರಿಂದ ನ್ಯಾಯಲಯ ಈ ಷರತ್ತು ವಿಧಿಸಿದೆ. ಈ ವಿಷಯದ ಕುರಿತು ಮುಂದಿನ ವಿಚಾರಣೆಯಲ್ಲಿ, ಮಾರಾಟವನ್ನು ತಡೆಯಲು ಮುಂದಿನ ಹಂತದಲ್ಲಿ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಸುಪ್ರೀಂಕೋರ್ಟ್ ನಿರ್ಧರಿಸಲಿದೆ.