Published : Sep 24 2025, 09:11 AM IST
Ayodhya mosque construction project: ಸುಪ್ರೀಂ ಕೋರ್ಟ್ ಆದೇಶದಂತೆ ಅಯೋಧ್ಯೆಯ ಧನ್ನೀಪುರ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಲಾದ ಬೃಹತ್ ಮಸೀದಿ ಯೋಜನೆಗೆ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ಅನುಮತಿ ನಿರಾಕರಿಸಿದೆ. .
ನಿರಾಕ್ಷೇಪಣಾ ಪತ್ರ
ಧ್ವಂಸಗೊಂಡ ಬಾಬ್ರಿ ಮಸೀದಿಗೆ ಪರಿಹಾರಾರ್ಥವಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ಅಯೋಧ್ಯೆಯ ಧನ್ನೀಪುರ ಗ್ರಾಮದಲ್ಲಿ ಬೃಹತ್ ಮಸೀದಿ ನಿರ್ಮಿಸುವ ಯೋಜನೆಗೆ ಸಂಕಷ್ಟ ಎದುರಾಗಿದೆ. ಸರ್ಕಾರದ ವಿವಿಧ ಇಲಾಖೆಗಳು ನಿರಾಕ್ಷೇಪಣಾ ಪತ್ರ (ಎನ್ಒಸಿ) ನೀಡದ ಕಾರಣ, ಮಸೀದಿ ನಿರ್ಮಾಣ ಯೋಜನೆಗೆ ಅನುಮತಿ ನೀಡಲು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ (ಎಡಿಎ) ನಿರಾಕರಿಸಿದೆ.
ಧನ್ನೀಪುರ ಗ್ರಾಮದಲ್ಲಿ ಮಸೀದಿ ನಿರ್ಮಾಣಕ್ಕೆ ಜಾಗ
ಅಯೋಧ್ಯೆ ರಾಮಮಂದಿರ-ಬಾಬ್ರಿ ಮಸೀದಿ ವಿವಾದ ಇತ್ಯರ್ಥ ವೇಳೆ ಮಸೀದಿ ನಿರ್ಮಾಣಕ್ಕೆಂದೇ ಸುನ್ನಿ ವಕ್ಫ್ ಬೋರ್ಡ್ಗೆ 5 ಎಕ್ರೆ ಭೂಮಿ ನೀಡುವಂತೆ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನ.9, 2019ರಂದು ನಿರ್ದೇಶನ ನೀಡಿತ್ತು. ಅದರಂತೆ ಆ.3, 2020ರಂದು ಜಿಲ್ಲಾಧಿಕಾರಿ ಅನುಜ್ ಕುಮಾರ್ ಝಾ ಅವರು ಅಯೋಧ್ಯೆಯಿಂದ 25 ಕಿ.ಮೀ. ದೂರದ ಧನ್ನೀಪುರ ಗ್ರಾಮದಲ್ಲಿ ಮಸೀದಿ ನಿರ್ಮಾಣಕ್ಕೆಂದು ಜಾಗ ನೀಡಿದ್ದರು
ಅರ್ಜಿ ತಿರಸ್ಕರಿಸಿದ ಎಡಿಎ
ಜೂ.23, 2021ರಲ್ಲಿ ಮಸೀದಿ, ಆಸ್ಪತ್ರೆ ನಿರ್ಮಾಣ ಸಂಬಂಧ ಟ್ರಸ್ಟ್ ಅರ್ಜಿ ಸಲ್ಲಿಸಿದ್ದು, ಆ ಅರ್ಜಿಯನ್ನು ಸೆ.16ರಂದು ಎಡಿಎ ತಿರಸ್ಕರಿಸಿದೆ. ಲೋಕೋಪಯೋಗಿ ಇಲಾಖೆ, ಪರಿಸರ ನಿಯಂತ್ರಣ ಹಾಗೂ ನಾಗರಿಕ ವಿಮಾನಯಾನ, ನೀರಾವರಿ, ಕಂದಾಯ ಇಲಾಖೆ, ಮುನ್ಸಿಪಲ್ ಕಾರ್ಪೊರೇಷನ್, ಅಗ್ನಿಶಾಮಕ ದಳದಿಂದ ನಿರಾಕ್ಷೇಪಣಾ ಪತ್ರ ಸಿಗದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಟ್ರಸ್ಟ್ಗೆ ಬರೆದ ಪತ್ರದಲ್ಲಿ ಎಡಿಎ ತಿಳಿಸಿದೆ.
ಮಸೀದಿ ಟ್ರಸ್ಟ್ನ ಕಾರ್ಯದರ್ಶಿ ಅತಾರ್ ಹುಸೇನ್
ಈ ಕುರಿತು ಪ್ರತಿಕ್ರಿಯಿಸಿರುವ ಮಸೀದಿ ಟ್ರಸ್ಟ್ನ ಕಾರ್ಯದರ್ಶಿ ಅತಾರ್ ಹುಸೇನ್ ಅವರು, ‘ಸುಪ್ರೀಂ ಕೋರ್ಟ್ ಮಸೀದಿ ನಿರ್ಮಾಣಕ್ಕೆ ಜಾಗ ಕೊಡಿಸಿದೆ. ಇದೀಗ ಸರ್ಕಾರ ಯಾವ ಕಾರಣಕ್ಕೆ ನಿರಕ್ಷೇಪಣಾ ಪತ್ರ ನೀಡಿಲ್ಲ, ಮಸೀದಿ ನಿರ್ಮಾಣ ಯೋಜನೆಯನ್ನು ಯಾಕೆ ಪ್ರಾಧಿಕಾರ ತಿರಸ್ಕರಿಸಿದೆ ಎಂಬುದು ತಿಳಿಯುತ್ತಿಲ್ಲ’ ಎಂದು ಹೇಳಿದ್ದಾರೆ.