ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರ ಮುಸ್ಲಿಂ ಸ್ನೇಹಿತರೊಬ್ಬರು ಮತ್ತೆ ಸುದ್ದಿಗೆ ಬಂದಿದ್ದಾರೆ. ಅಬ್ಬಾಸ್ ರಾಮ್ಸಾದ್ ಬಗ್ಗೆ ಮಾಹಿತಿ ಇಲ್ಲಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) 75ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಸೆಪ್ಟೆಂಬರ್ 17 ರಂದು ದೇಶದೆಲ್ಲೆಡೆ ಅವರ ಹುಟ್ಟುಹಬ್ಬ ಆಚರಣೆ ಮಾಡಲಾಗಿದೆ. ದೇಶ – ವಿದೇಶದಿಂದ ಶುಭಾಶಯಗಳ ಸುರಿಮಳೆ ಹರಿದು ಬಂದಿದೆ. ಮೋದಿ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಬಾಲ್ಯ, ಅವರ ಹವ್ಯಾಸ, ಅವರ ಆರೋಗ್ಯ ಸೇರಿದಂತೆ ರಾಜಕೀಯ ಜೀವನದ ಬಗ್ಗೆ ತಿಳಿಯಲು ಎಲ್ಲರೂ ಆಸಕ್ತಿ ತೋರ್ತಿದ್ದಾರೆ. ಈ ಮಧ್ಯೆ ನರೇಂದ್ರ ಮೋದಿ ಅವರ ಮನೆಯಲ್ಲಿ ವಾಸವಾಗಿದ್ದ ಅಬ್ಬಾಸ್ ರಾಮ್ಸಾದಾ (Abbas Ramsada) ಮತ್ತೆ ಚರ್ಚೆಗೆ ಬಂದಿದ್ದಾರೆ. ವಡ್ನಗರದ ಮೋದಿ ಮನೆಯಲ್ಲಿ ಅಬ್ಬಾಸ್ ರಾಮ್ಸಾದ್ ವಾಸವಾಗಿದ್ದರು.
ಅಬ್ಬಾಸ್ ರಾಮ್ಸಾದ್ ಯಾರು ? : ಅಬ್ಬಾಸ್ ರಾಮ್ಸಾದ್, ಮೋದಿ ಅವರ ತಂದೆ ದಾಮೋದರ್ದಾಸ್ ಮೋದಿ ಅವರ ಸ್ನೇಹಿತ ಮಿಯಾನ್ಭಾಯ್ ಅವರ ಮಗ. ಮಿಯಾನ್ಭಾಯ್ ಸಾವಿನ ನಂತ್ರ ಮೋದಿ ತಂದೆ, ಅಧ್ಯಯನಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಲು ಯುವ ಅಬ್ಬಾಸ್ ಅವರನ್ನು ತಮ್ಮೊಂದಿಗೆ ಇರಿಸಿಕೊಂಡಿದ್ರು.
ಅಬ್ಬಾಸ್ ರಾಮ್ಸಾದ್ ಹೆಸರು ಬೆಳಕಿಗೆ ಬಂದಿದ್ದು ಯಾವಾಗ? : ಪ್ರಧಾನಿ ಮೋದಿ ತಮ್ಮ ತಾಯಿ ಹೀರಾಬೆನ್ ಅವರ 100 ನೇ ಹುಟ್ಟುಹಬ್ಬ ಸಮಯದಲ್ಲಿ, 2022 ರಲ್ಲಿ ಬ್ಲಾಗ್ ಬರೆದ ನಂತ್ರ ಅಬ್ಬಾಸ್ ಹೆಸರು ಬೆಳಕಿಗೆ ಬಂದಿತ್ತು. ಪೋಸ್ಟ್ನಲ್ಲಿ, ಅವರು ತಮ್ಮ ಬಾಲ್ಯದ ವೈಯಕ್ತಿಕ ಕಥೆಗಳನ್ನು ಹಂಚಿಕೊಂಡಿದ್ದರು. ಹತ್ತಿರದ ಹಳ್ಳಿಯಿಂದ ಬಂದ ತಮ್ಮ ತಂದೆಯ ಆಪ್ತ ಸ್ನೇಹಿತನ ಮಗ ಅಬ್ಬಾಸ್ ಅವರ ಬಗ್ಗೆ ಒಂದು ಕಥೆ ಇದ್ರಲ್ಲಿ ಸೇರಿತ್ತು. ಅಪ್ಪನ ಆಪ್ತ ಸ್ನೇಹಿತ ಮಿಯಾನ್ಭಾಯ್ ಅಕಾಲಿಕ ಮರಣದ ನಂತ್ರ, ತಂದೆ ತಮ್ಮ ಸ್ನೇಹಿತನ ಮಗ ಅಬ್ಬಾಸ್ ಅವರನ್ನು ನಮ್ಮ ಮನೆಗೆ ಕರೆತಂದ್ರು. ಅಬ್ಬಾಸ್, ನಮ್ಮೊಂದಿಗೆ ಬೆಳೆದ್ರು. ಅಧ್ಯಯನ ಪೂರ್ಣಗೊಳಿಸಿದ್ರು. ತಾಯಿ ನಮ್ಮೆಲ್ಲರಂತೆ ಅಬ್ಬಾಸ್ ಅವರನ್ನು ಪ್ರೀತಿಯಿಂದ ಕಾಳಜಿಯಿಂದ ನೋಡಿಕೊಂಡಿದ್ರು ಎಂದು ಮೋದಿ ಬ್ಲಾಗ್ಪೋಸ್ಟ್ನಲ್ಲಿ ಬರೆದಿದ್ದರು. ಪ್ರತಿ ವರ್ಷ ಈದ್ನಲ್ಲಿ, ನೆಚ್ಚಿನ ಭಕ್ಷ್ಯಗಳನ್ನು ತಾಯಿ ತಯಾರಿಸುತ್ತಿದ್ದರು. ಹಬ್ಬದ ಸಂದರ್ಭಗಳಲ್ಲಿ, ನೆರೆಹೊರೆಯ ಮಕ್ಕಳು ನಮ್ಮ ಮನೆಗೆ ಬಂದು ತಾಯಿ ಸಿದ್ಧತೆಪಡಿಸಿದ ವಿಶೇಷ ಅಡುಗೆಯ ಸವಿ ಸವಿಯುತ್ತಿದ್ದರು ಎಂಬುದನ್ನೂ ಮೋದಿ ಬ್ಲಾಗ್ ನಲ್ಲಿ ಬರೆದಿದ್ದರು.
ಈಗ ಅಬ್ಬಾಸ್ ಎಲ್ಲಿದ್ದಾರೆ? : ವಡ್ನಗರ ಬಳಿಯ ಕೆಸಿಂಪಾ ಗ್ರಾಮದ ಅಬ್ಬಾಸ್, ಕೆಸಿಂಪಾದಲ್ಲಿ ಐದನೇ ತರಗತಿ ಪೂರ್ಣಗೊಳಿಸಿದ್ದರು. ಆ ನಂತ್ರ ವಡ್ನಗರಕ್ಕೆ ಬಂದು, ಮೋದಿ ಕುಟುಂಬದ ಜೊತೆ ವಾಸಮಾಡಿ ತಮ್ಮ ಶಿಕ್ಷಣ ಮುಂದುವರೆಸಿದ್ದರು. ಅಬ್ಬಾಸ್ ಹಲವಾರು ವರ್ಷಗಳ ಕಾಲ ಮೋದಿ ಕುಟುಂಬದ ಜೊತೆಗಿದ್ದರು. ಮೋದಿ ಕಿರಿಯ ಸಹೋದರ ಪಂಕಜ್ ಮೋದಿ ಹಾಗೂ ಅಬ್ಬಾಸ್ ಒಂದೇ ಕ್ಲಾಸ್ ನಲ್ಲಿದ್ದರು. ಇಬ್ಬರೂ 1973-74ರಲ್ಲಿ ಅಬ್ಬಾಸ್ ತಮ್ಮ ಮೆಟ್ರಿಕ್ಯುಲೇಷನ್ (ಎಸ್ಎಸ್ಸಿ) ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಸರ್ಕಾರಿ ಕೆಲ್ಸ ಗಿಟ್ಟಿಸಿಕೊಂಡಿದ್ದರು. ಈ ಸಮಯದಲ್ಲಿ ಮೋದಿ ವಡ್ನಗರ ಬಿಟ್ಟು ಅಹಮದಾಬಾದ್ ಗೆ ಶಿಫ್ಟ್ ಆಗಿದ್ದರು. ಪ್ರಧಾನಿ ಸಹೋದರ ಪಂಕಜ್ ಮೋದಿ ಮತ್ತು ಅಬ್ಬಾಸ್ ಮಾಹಿತಿ ಇಲಾಖೆಯಲ್ಲಿ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಕೆಲ್ಸ ಪಡೆದರು. ಮೆಟ್ರಿಕ್ಯುಲೇಷನ್ ಮುಗಿಸಿ ಅಬ್ಬಾಸ್ ಮೋದಿ ಮನೆಯನ್ನು ಬಿಟ್ಟಿದ್ದರು. 2022 ರಲ್ಲಿ ಸರ್ಕಾರಿ ಕೆಲ್ಸದಿಂದ ನಿವೃತ್ತರಾದ ಅಬ್ಬಾಸ್ ನಂತ್ರ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ತಮ್ಮ ಕಿರಿಯ ಮಗನೊಂದಿಗೆ ವಾಸ ಮಾಡ್ತಿದ್ದಾರೆ. ಅವರು ಮೋದಿ ಕುಟುಂಬಕ್ಕೆ ಸಂಬಂಧಿಸಿದಂತೆ ಪುಸ್ತಕವೊಂದನ್ನು ಬರೆದಿದ್ದು, ಅದ್ರಲ್ಲಿ ಮೋದಿ ಬಗ್ಗೆ ಜೊತೆಗೆ ಹೀರಾಬೆನ್ ತಮ್ಮನ್ನು ಸ್ವಂತ ಮಕ್ಕಳಂತೆ ನೋಡಿಕೊಂಡ್ರು ಎಂಬುದನ್ನು ಬರೆದಿದ್ದಾರೆ. ಅಬ್ಬಾಸ್ ಹಿರಿಯ ಮಗ ಇನ್ನೂ ಗುಜರಾತ್ ನ, ಮೆಹ್ಸಾನಾ ಜಿಲ್ಲೆಯ ಖೇರಾಲು ತಹಸಿಲ್ನಲ್ಲಿ ವಾಸಿಸುತ್ತಿದ್ದಾರೆ.