ಮಂಗಳೂರು, ಸೆ.16 : ಕರಾವಳಿಯಲ್ಲಿ ಕೆಂಪು ಕಲ್ಲು ತೆಗೆಯುವ ಕುರಿತಾಗಿ ಪ್ರತ್ಯೇಕ ನೀತಿ ರೂಪಿಸಲಾಗಿದ್ದು ಇದಕ್ಕೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದೆ. ಸದ್ಯದಲ್ಲೇ ಕಾನೂನು ಜಾರಿಗೆ ಬರಲಿದೆ. ಅಲ್ಲದೆ, ಇದೇ ವೇಳೆ 25 ಮಂದಿಗೆ ಕಲ್ಲು ತೆಗೆಯಲು ಪರವಾನಿಗೆಯನ್ನೂ ನೀಡಲಾಗಿದೆ ಎಂದು ವಿಧಾನಸಭೆ ಅಧ್ಯಕ್ಷ ಯುಟಿ ಖಾದರ್ ಹೇಳಿದ್ದಾರೆ.
ಸುದ್ದಿಗೋಷ್ಟಿ ನಡೆಸಿದ ಅವರು, ಕೆಂಪು ಕಲ್ಲು ತೆಗೆಯುವ ವಿಚಾರಕ್ಕೆ ಸಂಬಂಧಿಸಿ ಉಸ್ತುವಾರಿ ಸಚಿವರ ಜೊತೆಗೆ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಅದರಲ್ಲಿ ಕಲ್ಲು ವ್ಯಾಪಾರಸ್ಥರು, ಈ ಭಾಗದ ಶಾಸಕರು, ಅಧಿಕಾರಿಗಳು ಇದ್ದರು. ಕೆಂಪು ಕಲ್ಲು ತೆಗೆಯುವ ವಿಚಾರದಲ್ಲಿ ಮುಂದಕ್ಕೆ ಸಮಸ್ಯೆ ಆಗದಂತೆ ಮತ್ತು ಯಾವುದೇ ತೊಂದರೆ ಇಲ್ಲದೆ ಕೆಲಸ ಮಾಡುವಂತಾಗಲು ಕಾನೂನು ರೂಪಿಸಿದ್ದೇವೆ. ಸದ್ಯಕ್ಕೆ ಪರವಾನಗಿ ಕೇಳಿದ್ದ 50 ಮಂದಿಯಲ್ಲಿ 25 ಮಂದಿಗೆ ಪರವಾನಿಗೆ ಕೊಟ್ಟಿದ್ದೇವೆ. ಇಲ್ಲಿಗೆ ಸಮಸ್ಯೆ ಬಹುತೇಕ ಬಗೆಹರಿದಿದೆ ಎಂದು ಬಿಜೆಪಿಯವರಿಗೂ ಗೊತ್ತಿದೆ.
280 ಇದ್ದ ಸರ್ಕಾರಕ್ಕೆ ಕಟ್ಟಬೇಕಾದ ರಾಯಲ್ಟಿ ಹಣವನ್ನು ಬಹುತೇಕ 90 ರೂ.ಗೆ ಇಳಿಸಲಾಗಿದೆ. ಕೇರಳದಲ್ಲಿ ಕಡಿಮೆ ಇರುವುದರಿಂದ ಕಲ್ಲಿನ ವ್ಯಾಪಾರಿಗಳಿಗೆ ಸಮಸ್ಯೆಯಾಗಿತ್ತು. ಖಾಸಗಿ ಜಾಗದಲ್ಲಿ ಕಲ್ಲು ತೆಗೆಯಬೇಕಿದ್ದರೆ, ಇಂತಿಷ್ಟೇ ಆಳ ಹೋಗಬೇಕು, ಕೃಷಿ ಇಲಾಖೆ ಅನುಮತಿ ಬೇಕು ಎಂಬ ಮಾನದಂಡವನ್ನು ತೆಗೆದುಹಾಕಿದ್ದು ಕಂದಾಯ ಇಲಾಖೆಯ ಪರವಾನಗಿ ಪಡೆದರೆ ಮಾತ್ರ ಸಾಕು. ಆದರೆ ಕಲ್ಲು ತೆಗೆದ ಬಳಿಕ ಆ ಜಾಗವನ್ನು ಮುಚ್ಚಬೇಕು. ಮನೆ ಕಟ್ಟುವ ಉದ್ದೇಶಕ್ಕೆ ಮಾತ್ರ ಕಲ್ಲು ತೆಗೆಯಲು ಅವಕಾಶ ನೀಡಲಾಗಿದೆ. ಕೆಂಪು ಕಲ್ಲು ತೆಗೆಯೋರನ್ನು ಸಭೆಯಲ್ಲಿ ಇರಿಸಿಕೊಂಡೇ ಹೊಸ ನಿಯಮ ಮಾಡಲಾಗಿದೆ ಎಂದು ಖಾದರ್ ಹೇಳಿದರು.
ಕೆಂಪು ಕಲ್ಲು ವಿಚಾರದಲ್ಲಿ ಸರಕಾರದ ವೈಫಲ್ಯ ಖಂಡಿಸಿ ಬಿಜೆಪಿ ಪ್ರತಿಭಟನೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಖಾದರ್ ಅವರು, ಇದು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಎಲ್ಲರಿಗೂ ಪ್ರತಿಭಟನೆ ಮಾಡುವ ಹಕ್ಕಿದೆ. ಈ ವಿಷಯದಲ್ಲಿ ಸರಕಾರ ಹಾಗೂ ಪ್ರತಿಪಕ್ಷಗಳು ಏನು ಹೇಳುತ್ತಾರೆ ಎಂಬುದು ಅವರಿಗೆ ಬಿಟ್ಟಿದ್ದಾಗಿದೆ. ಆದರೆ, ಜನಸಾಮಾನ್ಯರಿಗೆ ಬೇಕಾಗುವ ಕೆಂಪುಕಲ್ಲು ವಿಚಾರದಲ್ಲಿ ಎದುರಾಗಿರುವ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಆಗಿದೆ ಎಂದರು.
ಸಿಆರ್‌ಝಡ್ ಮರಳು ವಿಚಾರದಲ್ಲಿ ಹಿಂದೆ ಆಸ್ಕರ್ ಫೆರ್ನಾಂಡೀಸ್ ಅವರು ಇದ್ದಾಗ ಕೇಂದ್ರದಲ್ಲಿ ಇಲಾಖಾ ಸಚಿವರ ಜತೆಗೆ ಚರ್ಚಿಸಿ ಪೂರಕ ಅನುಮತಿ ವ್ಯವಸ್ಥೆ ಕ್ಷಿಪ್ರವಾಗಿ ಕೈಗೊಳ್ಳುತ್ತಿದ್ದರು. ಆದರೆ ಬಳಿಕ ರಾಜ್ಯದಿಂದ ಹೋದ ಸಂಗತಿಗಳಿಗೆ ಕೇಂದ್ರದ ಅನುಮೋದನೆ ಸೂಕ್ತವಾಗಿ ದೊರೆಯುತ್ತಿಲ್ಲ. ಈ ಬಗ್ಗೆ ರಾಜ್ಯ ಸರಕಾರ ಹಾಗೂ ಕೇಂದ್ರದ ಜನಪ್ರತಿನಿಧಿಗಳು ಒತ್ತಡ ಹೇರಬೇಕಾಗಿದೆ ಎಂದು ಖಾದರ್ ಹೇಳಿದರು.