
ಕೋಲಾರ: 2023ರ ಮಾಲೂರು ಕ್ಷೇತ್ರದ ಮತ ಮರು ಎಣಿಕೆ ನಡೆಸುವಂತೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನಾಲ್ಕು ವಾರದ ಒಳಗೆ ಮರು ಎಣಿಕೆ ಮಾಡಿ, ಹೊಸದಾಗಿ ಚುನಾವಣಾ ಫಲಿತಾಂಶ ಪ್ರಕಟಿಸುವಂತೆ ಕೋರ್ಟ್ ಆದೇಶದಲ್ಲಿ ತಿಳಿಸಿದೆ. ಮಾಲೂರು ಶಾಸಕ ನಂಜೇಗೌಡ ಆಯ್ಕೆಯನ್ನು ಅಸಿಂಧುಗೊಳಿಸಲಾಗಿದೆ.
ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನಂಜೇಗೌಡ ಪರ ವಕೀಲರು ಆದೇಶವನ್ನು 30 ದಿನಗಳ ಕಾಲ ಅಮಾನತಿನಲ್ಲಿಡುವಂತೆ ಮನವಿ ಮಾಡಿದರು. ಈ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ (Assembly Election) ಕಾಂಗ್ರೆಸ್ ಅಭ್ಯರ್ಥಿ ಕೆ.ವೈ ನಂಜೇಗೌಡ ಅವರು 248 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇದನ್ನ ಪ್ರಶ್ನಿಸಿ ಮತ ಮರು ಎಣಿಕೆಗೆ ಕೋರಿ ಬಿಜೆಪಿ ಅಭ್ಯರ್ಥಿ ಕೆ.ಎಸ್ ಮಂಜುನಾಥಗೌಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ಅಗತ್ಯ ದಾಖಲಾತಿ ನೀಡುವಂತೆ ಕೇಳಿತ್ತು. ಜಿಲ್ಲಾಧಿಕಾರಿಗಳು ಸ್ಟ್ರಾಂಗ್ ರೂಮ್‌ನಲ್ಲಿದ್ದ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಿದ್ದರು. ಕಳೆದ 2 ವರ್ಷದಿಂದ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆದಿತ್ತು.