ರಾಯಚೂರು: ಇಲ್ಲಿನ (Raichur) ದೇವದುರ್ಗ ತಾಲೂಕಿನ ಕೆ.ಇರಬಗೇರಾ ಗ್ರಾಮದಲ್ಲಿ ಒಂದೇ ಮನೆಯ ಮೂವರು ಯುವತಿಯರು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪೊಲೀಸರ ತನಿಖೆಯಲ್ಲಿ ನಿಗೂಢವಾಗಿದ್ದ ಕಾರಣ ಬಯಲಾಗಿದೆ. ಯುವತಿಯರು ತಾವು ಪ್ರೀತಿಸಿದವರನ್ನು (Love) ಮದುವೆಯಾಗಲು ಮನೆಯಲ್ಲಿ ಒಪ್ಪುವುದಿಲ್ಲ ಎಂದು ಒಟ್ಟಾಗಿ ಆತ್ಮಹತ್ಯೆಗೆ ಯತ್ನಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಗ್ರಾಮದ ಒಂದೇ ಮನೆಯ ಮೂವರು ಯುವತಿಯರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕ್ರಿಮಿನಾಶಕ ಸೇವಿಸಿ ಬಳಿಕ ಬಾವಿಗೆ ಹಾರಿದ್ದ ಇಬ್ಬರು ಯುವತಿಯರಲ್ಲಿ ರೇಣುಕಾ (17) ಸಾವನ್ನಪ್ಪಿದ್ದಾಳೆ. ಹತ್ತಿ ಹೊಲಕ್ಕೆ ಕೆಲಸಕ್ಕೆ ಹೋಗಿದ್ದ ವೇಳೆ ಮೂವರು ಯುವತಿಯರು ಕ್ರಿಮಿನಾಶಕ ಸೇವಿಸಿದ್ದರು. ಇನ್ನೂ ಹದಿನೈದೇ ದಿನದಲ್ಲಿ ರೇಣುಕಾ ನಿಶ್ಚಿತಾರ್ಥ ಮಾಡಲು ನಿರ್ಧರಿಸಲಾಗಿತ್ತು ಎಂದು ತಿಳಿದು ಬಂದಿದೆ.
ಇನ್ನೋರ್ವ ಯುವತಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾಳೆ. ಕ್ರಿಮಿನಾಶಕ ಸೇವನೆಯಿಂದ ತೀವ್ರ ಅಸ್ವಸ್ಥಗೊಂಡಿರುವ ಮತ್ತೋರ್ವ ಯುವತಿಯ ಪರಸ್ಥಿತಿ ಗಂಭೀರವಾಗಿದ್ದು, ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ಮೂವರು ಯುವತಿಯರು ಸಂಬಂಧಿಕರಾದ್ರೂ ಸ್ನೇಹಿತೆಯರಂತೆ ಬಹಳ ಅನ್ಯೂನ್ಯವಾಗಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ರೇಣುಕಾ ಪೋಷಕರು, ಇನ್ನಿಬ್ಬರು ಯುವತಿಯರು ಸೇರಿ ತಮ್ಮ ಮಗಳಿಗೆ ವಿಷ ಕುಡಿಸಿ ಬಾವಿಗೆ ತಳ್ಳಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮೂವರು ಯುವತಿಯರ ಪ್ರೇಮ ಪ್ರಕರಣವೇ ಘಟನೆಗೆ ಕಾರಣ ಅನ್ನೋದು ಬಯಲಾಗಿದೆ. ಮನೆಯಲ್ಲಿ ತಮ್ಮ ಪ್ರೀತಿಗೆ ಒಪ್ಪಲ್ಲ, ತಾವು ಪ್ರೀತಿಸಿದವರೊಂದಿಗೆ ಮದುವೆಗೆ ಸಮ್ಮತಿ ಸೂಚಿಸಲ್ಲ ಎಂದು ಯುವತಿಯರು ಒಟ್ಟಾಗಿ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದ್ದರು ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ತಿಳಿಸಿದ್ದಾರೆ.
ರೇಣುಕಾ ಸಾವನ್ನಪ್ಪಿದ ಹಿನ್ನೆಲೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ