
ಕುಂದಾಪುರ, ಸೆ 13 : ಕಮಲಶಿಲೆ ಸಿದ್ದಾಪುರ ಮುಖ್ಯ ರಸ್ತೆಯ ತಾರೆಕುಡ್ಡು ಬಳಿ ಕಮಲಶಿಲೆಯಿಂದ ನೆಲ್ಲಿಕಟ್ಟೆಯ ಕಡೆಗೆ ಚಲಿಸುತ್ತಿದ್ದ ಬೈಕಿಗೆ ಕಡವೆಯೊಂದು ಅಡ್ಡ ಬಂದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿದ್ದು, ಸಹ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ.
ಶ್ರೇಯಸ್ ಮೊಗವೀರ ನೆಲ್ಲಿಕಟ್ಟೆ (22) ಮೃತಪಟ್ಟ ಯುವಕ. ಪಡುವಾಲೂರರು ನಿವಾಸಿ ವಿಠಲ ಅವರ ಪುತ್ರ ವಿಪ್ಪೇಶ್ (19) ಗಂಭೀರವಾಗಿ ಗಾಯಗೊಂಡಿದ್ದು, ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ನೇಹಿತರಾಗಿದ್ದ ಅವರಿಬ್ಬರೂ ಕಮಲಶಿಲೆ ದೇವಸ್ಥಾನಕ್ಕೆ ತೆರಳಿ ವಾಪಸಾಗುತ್ತಿರುವಾಗ ತಾರೆಕೊಡ್ಲು ಬಳಿ ಏಕಾಏಕಿ ದೊಡ್ಡ ಕಡೆವೆಯು ಬೈಕಿಗೆ ಅಡ್ಡ ಬಂದಿದ್ದು, ಬೈಕ್ ಅದಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಯಿತು. ಬೈಕ್ ನಜ್ಜು ನುಜ್ಜಾಗಿದೆ. ಕಡವೆ ಕೂಡ ಸ್ಥಳದಲ್ಲೇ ಮೃತಪಟ್ಟಿದೆ. ನೆಲ್ಲಿಕಟ್ಟೆ ಸುರೇಶ ಮೊಗವೀರ ಹಾಗೂ ಯಶೋದಾ ಮೊಗವೀರ ದಂಪತಿಯ ಇಬ್ಬರು ಮಕ್ಕಳಲ್ಲಿ ಶ್ರೇಯಸ್ ಕಿರಿಯ ಪುತ್ರ. ಹಿರಿಯ ಪುತ್ರಿಗೆ ಮದುವೆಯಾಗಿದೆ. ಶ್ರೇಯಸ್ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದು, ಇತ್ತೀಚೆಗೆ ಊರಿಗೆ ಬಂದಿದ್ದರು.
ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ವಂಡ್ರೆ ಬ್ಲಾಕ್ ಕಾಂಗ್ರೆಸ್ ಆಧ್ಯಕ್ಷ ಪ್ರದೀಪ ಕುಮಾರ ಶೆಟ್ಟಿ ಗುಡಿಬೆಟ್ಟು, ಡಿಎಫ್ಒ ಗಣಪತಿ, ಆರ್ಎಫ್ಒ ಜ್ಯೋತಿ ಮೊದಲಾದವರು ಶ್ರೇಯಸ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.