ಪ್ಯಾಲೆಸ್ತೀನ್ ಸಮಸ್ಯೆಯನ್ನು ಶಾಂತಿಯುತ ಮಾರ್ಗಗಳ ಮೂಲಕ ಪರಿಹರಿಸುವುದು ಮತ್ತು ದ್ವಿರಾಷ್ಟ್ರ ಪರಿಹಾರವನ್ನು ಮುನ್ನಡೆಸುವ ‘ನ್ಯೂಯಾರ್ಕ್ ಘೋಷಣೆ’ಯನ್ನು ಬೆಂಬಲಿಸುವ ನಿರ್ಣಯವನ್ನು ಭಾರತ ಶುಕ್ರವಾರ (ಸೆ.12) ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಬೆಂಬಲಿಸಿದೆ.
ಫ್ರಾನ್ಸ್ ಮಂಡಿಸಿದ ನಿರ್ಣಯದ ಪರವಾಗಿ 142 ಮತಗಳು, ವಿರುದ್ದ 10 ಮತಗಳು ಬಿದ್ದಿವೆ. 12 ರಾಷ್ಟ್ರಗಳು ಮತದಾನದಿಂದ ದೂರ ಉಳಿದಿವೆ. ಹೆಚ್ಚು ಮತಗಳು ಪರ ಬಿದ್ದಿರುವುದರಿಂದ ನಿರ್ಣಯ ಅಂಗೀಕಾರಗೊಂಡಿದೆ. ಅಮೆರಿಕ, ಇಸ್ರೇಲ್, ಅರ್ಜೆಂಟೀನಾ ಮತ್ತು ಹಂಗೇರಿ ನಿರ್ಣಯ ವಿರೋಧಿಸಿದ ರಾಷ್ಟ್ರಗಳಲ್ಲಿ ಸೇರಿವೆ.
‘ಪ್ಯಾಲೆಸ್ತೀನ್ ಸಮಸ್ಯೆಗಳ ಶಾಂತಿಯುತ ಇತ್ಯರ್ಥ ಮತ್ತು ದ್ವಿರಾಷ್ಟ್ರ ಪರಿಹಾರದ ಅನುಷ್ಠಾನದ ಕುರಿತು ನ್ಯೂಯಾರ್ಕ್ ಘೋಷಣೆಯ ಅನುಮೋದನೆ’ ಎಂಬ ಔಪಚಾರಿಕ ಶೀರ್ಷಿಕೆಯ ನಿರ್ಣಯವನ್ನು ಜುಲೈನಲ್ಲಿ ಫ್ರಾನ್ಸ್ ಮತ್ತು ಸೌದಿ ಅರೇಬಿಯಾ ಸಹ-ಅಧ್ಯಕ್ಷತೆಯಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆದ ಉನ್ನತ ಮಟ್ಟದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮುನ್ನೆಲೆಗೆ ತರಲಾಗಿತ್ತು.
ನಿರ್ಣಯದ ಪ್ರಕಾರ, ಗಾಝಾದಲ್ಲಿನ ಯುದ್ಧವನ್ನು ಕೊನೆಗೊಳಿಸಲು, ದ್ವಿರಾಷ್ಟ್ರ ಪರಿಹಾರದ ಪರಿಣಾಮಕಾರಿ ಅನುಷ್ಠಾನದ ಆಧಾರದ ಮೇಲೆ ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದ ನ್ಯಾಯಯುತ, ಶಾಂತಿಯುತ ಮತ್ತು ಶಾಶ್ವತ ಇತ್ಯರ್ಥವನ್ನು ಸಾಧಿಸಲು ಮತ್ತು ಪ್ಯಾಲೆಸ್ತೀನಿಯರು, ಇಸ್ರೇಲಿಗಳು ಹಾಗೂ ಆ ಪ್ರದೇಶದ ಎಲ್ಲಾ ಜನರಿಗೆ ಉತ್ತಮ ಭವಿಷ್ಯವನ್ನು ನಿರ್ಮಿಸಲು ಸಾಮೂಹಿಕ ಕ್ರಮ ಕೈಗೊಳ್ಳಲು ರಾಷ್ಟ್ರಗಳು ಒಪ್ಪಿಕೊಂಡಿವೆ.
ಸಾರ್ವಭೌಮ ಮತ್ತು ಕಾರ್ಯಸಾಧ್ಯವಾದ ಪ್ಯಾಲೆಸ್ತೀನ್ ರಾಷ್ಟ್ರದ ಮಾನ್ಯತೆ ಸೇರಿದಂತೆ ದ್ವಿರಾಷ್ಟ್ರ ಪರಿಹಾರಕ್ಕೆ ಸ್ಪಷ್ಟವಾದ ಸಾರ್ವಜನಿಕ ಬದ್ಧತೆಯನ್ನು ಹೊರಡಿಸಲು ನಿರ್ಣಯದ ಮೂಲಕ ಇಸ್ರೇಲ್ಗೆ ರಾಷ್ಟ್ರಗಳು ಒತ್ತಾಯಿಸಿವೆ.
ಪ್ಯಾಲೆಸ್ತೀನಿಯರ ವಿರುದ್ಧದ ಹಿಂಸಾಚಾರ ಮತ್ತು ಪ್ರಚೋದನೆಯನ್ನು ತಕ್ಷಣವೇ ಕೊನೆಗೊಳಿಸಬೇಕು. ಪೂರ್ವ ಜೆರುಸಲೆಮ್ ಸೇರಿದಂತೆ ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶದಲ್ಲಿನ ಎಲ್ಲಾ ವಸಾಹತು, ಭೂಕಬಳಿಕೆ ಮತ್ತು ಸ್ವಾಧೀನ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸಬೇಕು. ಯಾವುದೇ ಸ್ವಾಧೀನ ಯೋಜನೆ ಅಥವಾ ವಸಾಹತು ನೀತಿಯನ್ನು ಸಾರ್ವಜನಿಕವಾಗಿ ತ್ಯಜಿಸಬೇಕು ಮತ್ತು ವಸಾಹತುಗಾರರ ಹಿಂಸಾಚಾರವನ್ನು ಕೊನೆಗೊಳಿಸಬೇಕು ಎಂದು ನಿರ್ಣಯ ಇಸ್ರೇಲ್ಗೆ ಅಗ್ರಹಿಸಿದೆ.
ನಿರ್ಣಯವು ‘ಪ್ಯಾಲೆಸ್ತೀನ್ ಜನರ ಸ್ವ-ನಿರ್ಣಯದ ಹಕ್ಕಿಗೆ ಬೆಂಬಲ’ವನ್ನು ಪುನರುಚ್ಚರಿಸಿದೆ. ಇತ್ತೀಚಿನ ಬೆಳವಣಿಗೆಗಳು ಮತ್ತೊಮ್ಮೆ, ಎಂದಿಗಿಂತಲೂ ಹೆಚ್ಚಾಗಿ, ಭಯಾನಕ ಮಾನವ ಸಾವುನೋವು ಮತ್ತು ಮಧ್ಯಪ್ರಾಚ್ಯ ಸಂಘರ್ಷದ ನಿರಂತರತೆಯ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಗಂಭೀರ ಪರಿಣಾಮಗಳನ್ನು ಎತ್ತಿ ತೋರಿಸಿವೆ ಎಂದು ನಿರ್ಣಯ ಹೇಳಿದೆ.
ದ್ವಿರಾಷ್ಟ್ರ ಪರಿಹಾರ ಮತ್ತು ಬಲವಾದ ಅಂತಾರಾಷ್ಟ್ರೀಯ ಖಾತರಿಗಳ ಕಡೆಗೆ ನಿರ್ಣಾಯಕ ಕ್ರಮಗಳ ಕೊರತೆಯಿಂದ ಸಂಘರ್ಷವು ಹೆಚ್ಚಾಗುತ್ತದೆ ಮತ್ತು ಪ್ರಾದೇಶಿಕ ಶಾಂತಿ ಅಸ್ಪಷ್ಟವಾಗಿ ಉಳಿಯುತ್ತದೆ.
ಗಾಝಾ ಪ್ಯಾಲೆಸ್ತೀನ್ ರಾಷ್ಟ್ರದ ಅವಿಭಾಜ್ಯ ಅಂಗವಾಗಿದೆ. ಅದನ್ನು ಪಶ್ಚಿಮ ದಂಡೆಯೊಂದಿಗೆ ಏಕೀಕರಿಸಲ್ಪಡಬೇಕು. ಯಾವುದೇ ಆಕ್ರಮಣ, ಮುತ್ತಿಗೆ, ಪ್ರಾದೇಶಿಕ ಕಡಿತ ಅಥವಾ ಬಲವಂತದ ಸ್ಥಳಾಂತರ ಇರಬಾರದು ಎಂದು ನಿರ್ಣಯ ಹೇಳಿದೆ.