
ಮಂಗಳೂರು: ನಕಲಿ ದಾಖಲೆಗಳ ಆಧಾರದ ಮೇಲೆ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಜಾಮೀನು ಕೊಡಿಸುತ್ತಿದ್ದ ಸಂಘಟಿತ ವಂಚನಾ ಜಾಲವೊಂದು ಸಿಸಿಬಿ (ಸಿಸಿಟಿ ಕ್ರೈಂ ಬ್ರಾಂಚ್) ಪೊಲೀಸರು ಕಾರ್ಯಾಚರಣೆಯಲ್ಲಿ ಬಯಲಾಗಿದ್ದು, ಈ ಸಂಬಂಧ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಕೆಲವರು ನಕಲಿ ಆಧಾರ್ ಕಾರ್ಡ್ ಹಾಗೂ ಪಹಣಿ ಪತ್ರಗಳನ್ನು ತಯಾರಿಸಿ, ನೈಜ ದಾಖಲೆಗಳೆಂದು ನಂಬಿಸಿ ನ್ಯಾಯಾಲಯಗಳ ಮುಂದೆ ಜಾಮೀನುದಾರರಾಗಿ ಹಾಜರಾಗಿ ಆರೋಪಿಗಳಿಗೆ ಜಾಮೀನು ಕೊಡಿಸುತ್ತಿದ್ದರು ಎಂಬ ಮಾಹಿತಿ ಸೆ.9 ರಂದು ಸಿಸಿಬಿ ಪೊಲೀಸರಿಗೆ ಬಂದಿತ್ತು. ಈ ಕುರಿತು ಕಾರ್ಯಾಚರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಬ್ದುಲ್ ರೆಹಮಾನ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಅವನು ನಕಲಿ ದಾಖಲೆಗಳನ್ನು ಬಳಸಿ ಆರೋಪಿಗಳಿಗೆ ನ್ಯಾಯಾಲಯದಿಂದ ಜಾಮೀನು ನೀಡಲು ಸಹಾಯ ಮಾಡಿದ್ದ ವಿಚಾರವು ದೃಢಪಟ್ಟಿದೆ. ಈ ಪ್ರಕರಣದ ಅನ್ವಯ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 81/2025ರಲ್ಲಿ ವಿವಿಧ ಐಪಿಸಿ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ. ಅಬ್ದುಲ್ ರೆಹಮಾನ್ ನೀಡಿದ ಮಾಹಿತಿಯಂತೆ, ನಕಲಿ ದಾಖಲೆ ತಯಾರಿಕೆಯಲ್ಲಿ ಸಹಕರಿಸುತ್ತಿದ್ದ ನಿಶಾಂತ್ ಕುಮಾರ್ ಎಂಬಾತನನ್ನು ಸಹ ಪೊಲೀಸರು ಬಂಧಿಸಿ ಕಸ್ಟಡಿಗೆ ಪಡೆದಿದ್ದಾರೆ.
ಇಬ್ಬರೂ ಆರೋಪಿಗಳು ನಕಲಿ ಆಧಾರ್ ಕಾರ್ಡ್‌ನಲ್ಲಿ ತಮ್ಮ ಫೋಟೋಗಳನ್ನು ಬಳಸಿ ಅಸಲಿ ವ್ಯಕ್ತಿಗಳಂತೆ ನ್ಯಾಯಾಲಯದ ಮುಂದೆ ಹಾಜರಾಗಿ, ಎರಡು ಪ್ರಮುಖ ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳಿಗೆ ಜಾಮೀನು ಕೊಡಿಸಿದ್ದನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ತನಿಖೆಯಲ್ಲಿ ಮತ್ತಿಬ್ಬರು ಪ್ರಮುಖ ಆರೋಪಿಗಳು ಪತ್ತೆಯಾಗಿದ್ದಾರೆ.
ಬಂಧಿತ ಆರೋಪಿಗಳ ವಿವರ: ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಬ್ದುಲ್ ರೆಹಮಾನ್ (46), ನಿಶಾಂತ್ ಕುಮಾರ್ (28), ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿತಿನ್ ಕುಮಾರ್ (31), ಹಸನ್ ರಿಯಾಝ್ (46), ಮಹಮ್ಮದ್ ಹನೀಫ್ (39) ಬಂಧಿತರು.
ಇವರಲ್ಲಿ ನಿತಿನ್ ಕುಮಾರ್ ಎಂಬಾತ ಗಣೇಶ್ ಕೆ. ಸಾಲ್ಯಾನ್ ಎಂಬ ನಕಲಿ ಹೆಸರಿನಲ್ಲಿ, ಹಸನ್ ರಿಯಾಝ್ ಎ.ಎಂ. ಎಂಬಾತ ಹಮೀದ್ ಎಂಬ ಹೆಸರಿನಲ್ಲಿ ಜಾಮೀನು ನೀಡಿದ್ದರೆ, ಹನೀಫ್ ಸಹ ನಕಲಿ ದಾಖಲೆಗಳ ಸಹಾಯದಿಂದ ನ್ಯಾಯಾಲಯದಲ್ಲಿ ವಂಚನೆ ನಡೆಸಿದ್ದನು. ಈ ವಂಚನಾ ಜಾಲದಲ್ಲಿ ಇನ್ನೂ ಹಲವಾರು ವ್ಯಕ್ತಿಗಳು ಭಾಗಿಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರೆದಿದೆ.
ಈ ಮಹತ್ವದ ಕಾರ್ಯಾಚರಣೆಯನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾರ್ಗದರ್ಶನದಲ್ಲಿ, ಉಪ ಆಯುಕ್ತರು (ಕಾನೂನು ಹಾಗೂ ಸುವ್ಯವಸ್ಥೆ) ಮಿಥುನ್ ಹೆಚ್.ಎನ್ ಹಾಗೂ ಉಪ ಆಯುಕ್ತರು (ಅಪರಾಧ ಮತ್ತು ಸಂಚಾರ) ಕೆ. ರವಿಶಂಕರ್, ಕೆಎಸ್‌ಪಿಎಸ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.