ಬಂಟ್ವಾಳ : ‘ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ನಮ್ಮ ಸಂವಿಧಾನ ಮತ್ತು ಸಂವಿಧಾನ ಪ್ರತಿಪಾದಿಸಿದ ಮೌಲ್ಯ ಮತ್ತು ಕಾನೂನುಗಳೇ ಅಂತಿಮವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಘನತೆ, ಗೌರವದ ಮತ್ತು ಸ್ವಾಭಿಮಾನದ ಬದುಕನ್ನ ಸಂವಿಧಾನ ಪ್ರತಿಪಾದಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ, ಮತ್ತು ವಾಕ್ ಸ್ವಾತಂತ್ರ್ಯವನ್ನು ಪ್ರತಿಯೊಬ್ಬ ನಾಗರಿಕನಿಗೂ ಖಾತ್ರಿಪಡಿಸಿದ ಸಂವಿಧಾನಕ್ಕೆ ವಿರುದ್ಧವಾಗಿ ಅನ್ಯಾಯವನ್ನು ಪ್ರಶ್ನಿಸಿದವರಿಗೆ ಇಲ್ಲಿನ ಅಧಿಕಾರಶಾಹಿಯು ಅನ್ಯಾಯವಾಗಿ ಪ್ರಕರಣ ದಾಖಲಿಸುವ ಮೂಲಕ ನಾಗರಿಕನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿದೆ. ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಅತೀ ಅಪಾಯ ಮತ್ತು ಮಾರಕವಾಗಿದೆ. ಇದನ್ನು ಬೀದಿ ಹೋರಾಟ ಮತ್ತು ಕಾನೂನು ಹೋರಾಟಗಳ ಮೂಲಕ ಎದುರಿಸಿ ನಾಗರಿಕರ ವಾಕ್ ಸ್ವಾತಂತ್ರ್ಯವನ್ನು ಸಂರಕ್ಷಿಸಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಕರೆ ನೀಡಿದರು
ಪಾಣೆಮಂಗಳೂರಿನ ಎಚ್ ಎಚ್ ಆಡಿಟೋರಿಯಂನಲ್ಲಿ SDPI ಬಂಟ್ವಾಳ ಕ್ಷೇತ್ರ ವತಿಯಿಂದ ನಡೆದ ‘ಬದಲಾವಣೆಗಾಗಿ ಕೊಡುಗೆ’ ಎಂಬ ಹೆಸರಿನಲ್ಲಿ ನಡೆದ ನಾಯಕರ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ನಾಯಕರನ್ನುದ್ದೇಶಿಸಿ ರಿಯಾಝ್ ಕಡಂಬು ಮಾತನಾಡಿದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಪಕ್ಷದ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಎಸ್ ‘ಸಂವಿಧಾನ ವಿರೋಧಿಗಳಾದ ಸಂಘಪರಿವಾರದ ಆದೇಶದಂತೆ ಆಡಳಿತ ನಡೆಸುವ ಬಿಜೆಪಿ ದೇಶದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಸರ್ವಾಧಿಕಾರ ಮತ್ತು ನಿರಂಕುಶವಾದವು ದೇಶದಲ್ಲಿ ಮೆರೆಯುತ್ತಿದೆ, ಸಂಘಪರಿವಾರದ ಕೋಮು ಮನಸ್ಥಿತಿಗಳು ಕಾಂಗ್ರೆಸ್ ಆಡಳಿತ ನಡೆಸುತ್ತಿರುವ ನಮ್ಮ ರಾಜ್ಯದಲ್ಲಿ ಕಾರ್ಯಾಂಗ ವ್ಯವಸ್ಥೆಯ ಆಳಕ್ಕೆ ಹೋಗಿ ಅಲ್ಪಸಂಖ್ಯಾತ ಮುಸ್ಲಿಮರ ಮೇಲೆ ಸಾಂಸ್ಥಿಕ ದಾಳಿ ನಡೆಸುತ್ತಿದೆ, ಅನ್ಯಾಯವನ್ನು ಪ್ರಶ್ನಿಸಿದವರಿಗೆ ನೋಟೀಸು , ಪ್ರಕರಣ ದಾಖಲಿಸುವ ಕೆಟ್ಟ ಸಂಪ್ರದಾಯಕ್ಕೆ ಪೊಲೀಸ್ ಇಲಾಖೆ ಮುನ್ನುಡಿ ಬರೆಯುತ್ತಿದೆ.ಇಂತಹ ಸುಳ್ಳು ಪ್ರಕರಣಗಳಿಂದ ನಮ್ಮ ಧ್ವನಿಯನ್ನು ಅಡಗಿಸಬಹುದು ಎಂದು ಅಧಿಕಾರಿಗಳು ಭಾವಿಸಿದ್ದರೆ ಅದನ್ನು ಅವರು ಮರೆಯುವುದು ಒಳ್ಳೆಯದು. ಯಾಕೆಂದರೆ SDPI ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನು ತನ್ನ ಕೊನೆಯ ಉಸಿರಿರುವವರೆಗೂ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾನೆ ಇದನ್ನು ಪ್ರಭುತ್ವ ಮತ್ತು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಸಭಾಧ್ಯಕ್ಷತೆ ಯನ್ನು ಕ್ಷೇತ್ರಾಧ್ಯಕ್ಷರಾದ ಶಾಹುಲ್ ಹಮೀದ್ ರವರು ವಹಿಸಿದರು. ಪ್ರಾಸ್ತಾವಿಕವಾಗಿ ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಮೂನಿಷ್ ಆಲಿ ಮಾತನಾಡಿದರು.
ಈ ಸಂದರ್ಭದಲ್ಲಿ SDPI ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ, ಮಂಗಳೂರು ಗ್ರಾಮಾಂತರ ಜಿಲ್ಲಾ ಕೋಶಾಧಿಕಾರಿ ರಹೀಮ್ ಇಂಜಿನಿಯರ್, ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಸದಸ್ಯರಾದ ಅಬೂಬಕ್ಕರ್ ಮದ್ದ, ವಿಮ್ ಜಿಲ್ಲಾಧ್ಯಕ್ಷೆ ಶಿನೀರಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝಹನಾ ಬಂಟ್ವಾಳ, ವಿಮ್ ಬಂಟ್ವಾಳ ಕ್ಷೇತ್ರಾಧ್ಯಕ್ಷೆ ಫಾತಿಮಾ ನುಸೈಬಾ ಕಲ್ಲಡ್ಕ, SDPI ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕೋಶಾಧಿಕಾರಿ ಯಾಸಿರ್ ಕಲ್ಲಡ್ಕ, ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ಇರ್ಫಾನ್ ಕಾವಳಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

SDPI ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ ಸ್ವಾಗತಿಸಿ, ಕಬೀರ್ ಅಕ್ಕರಂಗಡಿ ಧನ್ಯವಾದಗೈದರು. SDPI ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರಾದ ಅಝೀಝ್ ಕಡಂಬು ಕಾರ್ಯಕ್ರಮ ನಿರೂಪಿಸಿದರು.
