
– 20ಕ್ಕೂ ಹೆಚ್ಚು ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ಹಾಸನ: ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ ಮಾಸುವ ಮುನ್ನವೇ ಹಾಸನದಲ್ಲಿ ಗಣೇಶ ಮೆರವಣಿಗೆ (Hassan Ganesh Procession) ವೇಳೆ ಘನಘೋರ ದುರಂತವೊಂದು ಸಂಭವಿಸಿದೆ. ಗಣೇಶ ಮೆರವಣಿಗೆ ಹೋಗುತ್ತಿದ್ದವರ ಮೇಲೆ ಏಕಾಏಕಿ ಟ್ರಕ್ ಹರಿದು ಸಾವನ್ನಪ್ಪಿದವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಮೃತರ ವಿವರ ಹೀಗಿದೆ…
1. ಪ್ರವೀಣ್ ಕುಮಾರ್, ಅಂತಿಮ ಬಿಇ ವಿದ್ಯಾರ್ಥಿ, ಬಳ್ಳಾರಿ
2. ರಾಜೇಶ ಬಿನ್ ಮೂರ್ತಿ 17 ವರ್ಷ ಕೆ.ಬಿ.ಪಾಳ್ಯ, ಹಳೆಕೋಟೆ ಹೋಬಳಿ, ಹೊಳೆನರಸೀಪುರ ತಾಲ್ಲೂಕು
3. ಈಶ್ವರ ಬಿನ್ ರವಿಕುಮಾರ (17) ಡನಾಯಕನಹಳ್ಳಿ ಕೊಪ್ಪಲು, ಹೊಳೆನರಸೀಪುರ ತಾಲೂಕು
4. ಗೋಕುಲ ಬಿನ್ ಸಂಪತ್ ಕುಮಾರ್ (17) ಮುತ್ತಿಗೆಹೀರಳ್ಳಿ ಗ್ರಾಮ, ಹೊಳೆನರಸೀಪುರ ತಾಲ್ಲೂಕು
5. ಕುಮಾರ ಬಿನ್ ತಿಮ್ಮಯ್ಯ (25 ) ಕಬ್ಬಿನಹಳ್ಳಿ ಗ್ರಾಮ, ಹಳೇಕೋಟೆ ಹೋಬಳಿ, ಹೊಳೆನರಸೀಪುರ ತಾಲ್ಲೂಕು.
6. ಪ್ರವೀಣ ಬಿನ್ ಹನುಮಯ್ಯ (25) ಕಬ್ಬಿನಹಳ್ಳಿ ಗ್ರಾಮ ಹಳೇಕೋಟೆ ಹೋಬಳಿ, ಹೊಳೆನರಸೀಪುರ ತಾಲ್ಲೂಕು.
7. ಮಿಥುನ್ ಬಿನ್ ವಿಜಯ್ (23) ಗವಿಗಂಗಾಪುರ ಗ್ರಾಮ, ಹೊಸದುರ್ಗ ತಾಲೂಕು ಚಿತ್ರದುರ್ಗ ಜಿಲ್ಲೆ.
8. ಸುರೇಶ ಬಿನ್ ರಮೇಶ ಬಿಇ ವಿದ್ಯಾರ್ಥಿ ಮಣೆನಹಳ್ಳಿ ಮರ್ಲೆ ಗ್ರಾಮ, ಚಿಕ್ಕಮಗಳೂರು ಜಿಲ್ಲೆ
9. ಪ್ರಭಾಕರ್ (55) ಬಂಟರಹಳ್ಳಿ, ಹಾಸನ ತಾಲ್ಲೂಕು
ಇನ್ನು ಮೊಸಳೆಹೊಸಳ್ಳಿ ಗ್ರಾಮಸ್ಥರು ಗ್ರಾಮದಲ್ಲಿ 25 ವರ್ಷಗಳಿಂದ ಗ್ರಾಮಸ್ತರು ಗಣಪತಿ ಕೂರಿಸುತ್ತಿದ್ದಾರೆ. ಇಂದು ಆರ್ಕೆಸ್ಟ್ರಾ ಆಯೋಜಿಸಲಾಗಿತ್ತು. ಮೆರವಣಿಗೆಯಲ್ಲಿ ಆರ್ಕೆಸ್ಟ್ರಾ ಬಳಿಗೆ ಸಾವಿರಾರು ಮಂದಿ ಬರುತ್ತಿದ್ದರು. ಈ ವೇಳೆ ಮೆರವಣಿಗೆಯಲ್ಲಿ ತೆರಳುತ್ತಿದ್ದವರ ಮೇಲೆ ಯಮಸ್ವರೂಪಿ ಟ್ರಕ್ ಹರಿದು ದುರಂತ ಸಂಭವಿಸಿದೆ.
ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ದುರಂತ ಸಾವು ಕಂಡಿದ್ದಾರೆ. ಮೊಸಳೆಹೊಸಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಈವರೆಗೆ ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. 20 ಗಾಯಾಳುಗಳಿಗೆ ಹಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಪೈಕಿ ಮೂವರು ಐಸಿಯುನಲ್ಲಿದ್ದಾರೆ. 7 ಮಂದಿ ಗಾಯಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಏನಿದು ಘನಘೋರ ದುರಂತ?
ಹಾಸನದಿಂದ ಹೊಳೆನರಸೀಪುರದ ಕಡೆಗೆ ಮಹಾರಾಷ್ಟ್ರಕ್ಕೆ ಸೇರಿದ ಟ್ರಕ್ ಹೋಗುತ್ತಿತ್ತು. ಬೈಕ್‌ಗೆ ಡಿಕ್ಕಿ ತಪ್ಪಿಸಲು ಹೋಗಿ ಮೆರವಣಿಗೆ ಹೋಗುತ್ತಿದ್ದವರ ಮೇಲೆ ವಾಹನ ನುಗ್ಗಿದೆ. ಬೈಕ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಚಾಲಕ ಭುವನೇಶ್‌ಗೆ ಸ್ಥಳೀಯರು ಹಿಡಿದು ಥಳಿಸಿದ್ದಾರೆ. ಗಾಯಗೊಂಡ ಹೊಳೆನರಸೀಪುರ ತಾಲ್ಲೂಕಿನ ಕಟ್ಟೆಬೆಳಗುಲಿಯ ಚಾಲಕ ಭುವನೇಶ್‌ನನ್ನು ಹಾಸನದ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಡಿಸಿ ಲತಾ ಕುಮಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
ಪೊಲೀಸರ ವೈಫಲ್ಯದಿಂದಲೇ ದುರಂತ
ಇದು ಪೊಲೀಸರ ವೈಫಲ್ಯದಿಂದಾಗಿರುವ ಘಟನೆ ಎಂದು ಶಾಸಕ ಎಚ್‌ಡಿ ರೇವಣ್ಣ ಆರೋಪಿಸಿದ್ದಾರೆ. ಇನ್ನು ಸಂಸದ ಶ್ರೇಯಸ್ ಪಟೇಲ್ ಪ್ರತಿಕ್ರಿಯಿಸಿ, ಇದೊಂದು ಕರಾಳ ದಿನ. ಎಲ್ಲಿಂದ ಲೋಪ ಆಗಿದೆ ಅಂತ ತಿಳಿಸಲು ಸೂಕ್ತ ತನಿಖೆಗೆ ಆಗ್ರಹಿಸುತ್ತೇನೆ ಎಂದಿದ್ದಾರೆ.