ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ‘ಪೋಸ್ಟ್ ಕಾರ್ಡ್’ ಸಂಸ್ಥೆಯ ಮಹೇಶ್ ವಿಕ್ರಂ ಹೆಗ್ಡೆಯನ್ನು ಮೂಡಬಿದಿರೆ ಪೊಲೀಸರು ಬಂಧಿಸಿದ್ದಾರೆ. ಮುಖ್ಯಮಂತ್ರಿಗಳ ಫೋಟೋ ಬಳಸಿ ಕೋಮು ಪ್ರಚೋದನೆಗೆ ಯತ್ನಿಸಿದ್ದಾರೆಂಬ ಆರೋಪದ ಮೇಲೆ ಈ ಬಂಧನ ನಡೆದಿದೆ.
ದಕ್ಷಿಣ ಕನ್ನಡ (ಸೆ.12): ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ‘ಪೋಸ್ಟ್ ಕಾರ್ಡ್’ ಸುದ್ದಿ ಸಂಸ್ಥೆಯ ಸಂಸ್ಥಾಪಕ ಮಹೇಶ್ ವಿಕ್ರಂ ಹೆಗ್ಡೆಯವರನ್ನು ಮೂಡಬಿದಿರೆ ಪೊಲೀಸರು ಬಂಧಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೋ ಬಳಸಿ ಕೋಮು ಪ್ರಚೋದನೆಗೆ ಯತ್ನಿಸಿದ್ದಾರೆಂಬ ಆರೋಪದ ಮೇಲೆ ಈ ಬಂಧನ ನಡೆದಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಅವರನ್ನು ಸೋಮವಾರದವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮಹೇಶ್ ವಿಕ್ರಂ ಹೆಗ್ಡೆ ಎಂಬಾತ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೋವನ್ನು ಎಡಿಟ್ ಮಾಡಿ ಒಂದು ಪೋಸ್ಟ್ ಹಾಕಿದ್ದನು ‘ಮಾನ್ಯ ಮುಖ್ಯಮಂತ್ರಿಗಳೇ, ಒಂದೇ ಒಂದು ಬಾರಿ ಗಣಪನ ಮೆರವಣಿಗೆಯ ಮೇಲೆ ಕಲ್ಲು ತೋರಿದವರ ಮಸೀದಿಯ ಮೇಲೆ ಬುಲ್ಡೋಜರ್ ನುಗ್ಗಿಸುವ ಧೈರ್ಯ ಮಾಡಿ ನೋಡಿ. ಮುಂದಿನ ವರ್ಷ ರಾಜ್ಯದ ಯಾವ ಮೂಲೆಯಲ್ಲೂ ಇಂಥಹ ಪ್ರಕರಣ ಮರುಕಳಿಸಲ್ಲ’ ಎಂದು ಆ ಪೋಸ್ಟ್ನಲ್ಲಿ ಬರೆಯಲಾಗಿತ್ತು.
ಸುಮೋಟೋ ಕೇಸ್ ದಾಖಲು:
ಈ ಪೋಸ್ಟ್ ಎರಡು ಧರ್ಮಗಳ ನಡುವೆ ದ್ವೇಷ ಮತ್ತು ವೈರತ್ವವನ್ನು ಉಂಟುಮಾಡಿ, ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಹಾಳುಮಾಡುವ ಉದ್ದೇಶವನ್ನು ಹೊಂದಿದೆ ಎಂದು ಪೊಲೀಸರು ಆರೋಪಿಸಿದ್ದಾರೆ. ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಅವರ ಆದೇಶದ ಮೇರೆಗೆ, ಮೂಡಬಿದಿರೆ ಪಿಎಸ್ಐ ಕೃಷ್ಣಪ್ಪ ಅವರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 353(2) ಅಡಿಯಲ್ಲಿ ಸೆಪ್ಟೆಂಬರ್ 9ರಂದು ಎಫ್ಐಆರ್ ದಾಖಲಿಸಲಾಗಿತ್ತು.