
– ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ನಿರ್ಧಾರ
ಬೆಂಗಳೂರು: ಸಾಹಸಸಿಂಹ ಡಾ.ವಿಷ್ಣುವರ್ಧನ್ (Dr.Vishnuvardhan) ಹಾಗೂ ನಟಿ ಬಿ.ಸರೋಜಾದೇವಿ (B.Saroja Devi) ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ (Karnataka Ratna) ಪ್ರಶಸ್ತಿಯನ್ನು ಸರ್ಕಾರ ಘೋಷಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ನಟ ವಿಷ್ಣುವರ್ಧನ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ನೀಡುವಂತೆ ಪತ್ನಿ ಭಾರತಿ ಮತ್ತು ಅಳಿಯ ಅನಿರುದ್ಧ್, ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಮನವಿ ಮಾಡಿದ್ದರು. ಈ ಸಂಬಂಧ ವಿಷ್ಣು ಅಭಿಮಾನಿಗಳು ಸಹ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು. ಸಿನಿಮಾ ರಂಗಕ್ಕೆ ವಿಷ್ಣು ಅವರ ಕೊಡುಗೆ ಹಾಗೂ ಅಭಿಮಾನಿಗಳ ಒತ್ತಾಸೆಯನ್ನು ಪರಿಗಣಿಸಿ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಘೋಷಿಸಿದೆ.
1971 ರಲ್ಲಿ ವಿಷ್ಣುವರ್ಧನ್ ಬೆಳ್ಳಿತೆರೆಗೆ ಪ್ರವೇಶಿಸಿದರು. ವಂಶವೃಕ್ಷ ಅವರ ಮೊದಲ ಚಿತ್ರ. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ನಾಗರಹಾವು ಸಿನಿಮಾ ವಿಷ್ಣುವರ್ಧನ್ ಅವರ ಸಿನಿಮಾ ಬದುಕಿಗೆ ತಿರುವು ನೀಡಿತು. ಭೂತಯ್ಯನ ಮಗ ಅಯ್ಯು, ಗಂಧದ ಗುಡಿ ಸಿನಿಮಾಗಳಲ್ಲೂ ಗಮನ ಸೆಳೆದರು. ನಂತರ ಸಾಲು ಸಾಲು ಸಿನಿಮಾಗಳ ಮೂಲಕ ಕನ್ನಡ ರಂಗದಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದರು. ಆಪ್ತರಕ್ಷಕ ವಿಷ್ಣು ಅಭಿನಯದ ಕೊನೆ ಚಿತ್ರ. ಇದು 2010 ರಲ್ಲಿ ತೆರೆ ಕಂಡಿತ್ತು.