ಧರ್ಮಸ್ಥಳದ ರತ್ನಗಿರಿ ಬೆಟ್ಟದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಶಂಕೆ ವ್ಯಕ್ತವಾಗಿದ್ದು, ನಿಗೂಢ ಮುಸುಕುದಾರಿಯೊಬ್ಬರ ಮಾರ್ಗದರ್ಶನದಲ್ಲಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಸ್ಪಾಟ್ ನಂ. 16 , ಮಾಧ್ಯಮಗಳಿಂದ ಗೌಪ್ಯತೆ ಕಾಪಾಡಲು ಬಿಗಿ ಕ್ರಮ ಕೈಗೊಳ್ಳಲಾಗಿದೆ.
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಹತ್ವದ ಬೆಳವಣಿಗೆ ಆಗಿದೆ. ಬಾಹುಬಲಿ ಮೂರ್ತಿಯನ್ನು ಸ್ಥಾಪಿಸಿರುವ ರತ್ನಗಿರಿ ಬೆಟ್ಟದ ಬುಡದಲ್ಲಿ ಸ್ಪಾಟ್ ನಂ. 16 ಎಂದು ಗುರುತಿಸಲಾಗಿದ್ದು, ಶೋಧ ಮತ್ತು ಕಳೇಬರಹಕ್ಕಾಗಿ ಶೋಧ ಕಾರ್ಯಾಚರಣೆ ನಡೆಯಲಿದೆ. ದೇವಸ್ಥಾನದ ಪ್ರವೇಶ ದ್ವಾರದೊಳಗೆ ವಿಶೇಷ ತನಿಖಾ ದಳ (ಎಸ್ಐಟಿ) ಅಧಿಕಾರಿಗಳು ಪ್ರವೇಶಿಸಿ, ಸಮಾಧಿ ಶೋಧಕ್ಕಾಗಿ ಸಂಪೂರ್ಣ ತಂಡ ಸ್ಥಳಕ್ಕೆ ಆಗಮಿಸಿದೆ.
ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದ್ದು, ಕೂಲಿ ಕಾರ್ಮಿಕರು ಅಗತ್ಯ ಸಲಕರಣೆಗಳೊಂದಿಗೆ ಸ್ಥಳಕ್ಕೆ ಆಗಮಿಸಿದ್ದಾರೆ. ಅಧಿಕಾರಿಗಳಿಗೆ ಕುರ್ಚಿ, ಕುಡಿಯುವ ನೀರು ಮತ್ತು ಉಪ್ಪಿನ ಚೀಲಗಳನ್ನು ಸಿಬ್ಬಂದಿ ತಂದು ಒದಗಿಸಿದ್ದಾರೆ. ಶೋಧ ನಡೆಯುವ ಸ್ಥಳದಲ್ಲಿ ಬೆಳೆದಿರುವ ಗಿಡ-ಗಂಟೆಗಳನ್ನು ಸಿಬ್ಬಂದಿ ಸ್ವಚ್ಛಗೊಳಿಸುತ್ತಿದ್ದು, ಪೊಲೀಸರು ರೇಡ್ಟೇಪ್ ಹಾಕಿ ಪ್ರದೇಶವನ್ನು ಮುಚ್ಚಿದ್ದಾರೆ.
ಅನಾಮಿಕ ಮುಸುಕುದಾರಿಯ ಮಾರ್ಗದರ್ಶನದಲ್ಲಿ, ಒಣಗಿದ ಮರದ ಕೆಳಭಾಗದಲ್ಲಿ ಉತ್ಖನನ ಕಾರ್ಯ ನಡೆಯುತ್ತಿದೆ. ಈ ಸ್ಥಳ ದೇವಸ್ಥಾನದಿಂದ ಸುಮಾರು 2 ಕಿ.ಮೀ ದೂರದಲ್ಲಿದ್ದು, ಕನ್ನೇರಿ ರಸ್ತೆಯ ಪಕ್ಕದಲ್ಲಿದೆ. ಮುಸುಕುದಾರಿ ತೋರಿಸಿದ ಸ್ಥಳವನ್ನು ಎಸ್ಐಟಿ ಅಧಿಕಾರಿಗಳು ಪರಿಶೀಲಿಸುತ್ತಿದ್ದು, ಅನಾಮಿಕನ ಹೇಳಿಕೆಯನ್ನು ಕೂಡ ವಿಡಿಯೋ ಮಾಡಿ ದಾಖಲಿಸುತ್ತಿದ್ದಾರೆ. ಸ್ಥಳದಲ್ಲಿ ಎಸಿ, ತಹಶೀಲ್ದಾರ್ ಮತ್ತು ತನಿಖಾ ಅಧಿಕಾರಿಗಳು ಹಾಜರಿದ್ದು, ಶೋಧ ಕಾರ್ಯಾಚರಣೆಯನ್ನು ನೇರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಬಿಗಿ ಪೊಲೀಸ್ ಬಂದೋಬಸ್ತಿನ ನಡುವೆ ಭೂಮಿ ಅಗೆಯುವ ಕಾರ್ಯ ನಡೆಯುತ್ತಿವೆ.
ಮಾಧ್ಯಮಗಳಿಂದ ಗೌಪ್ಯತೆ ಕಾಪಾಡಲು ನೆಟ್ ಅಳವಡಿಕೆ
ಧರ್ಮಸ್ಥಳದ ರತ್ನಗಿರಿ ಬೆಟ್ಟದ ಬುಡದಲ್ಲಿ ನಡೆಯುತ್ತಿರುವ ಶೋಧ ಕಾರ್ಯಾಚರಣೆಗೆ ಮಾಧ್ಯಮ ಹಾಗೂ ಸಾರ್ವಜನಿಕರಿಂದ ಗೌಪ್ಯತೆ ಕಾಪಾಡುವ ನಿಟ್ಟಿನಲ್ಲಿ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸ್ಥಳದ ಸುತ್ತಮುತ್ತ ಹಸಿರು ಬಣ್ಣದ ಶೇಡ್ ನೆಟ್ಗಳನ್ನು ಅಳವಡಿಸುವ ಮೂಲಕ ಸಂಪೂರ್ಣ ಪ್ರದೇಶವನ್ನು ಮುಚ್ಚಿದ್ದಾರೆ. ಉತ್ಖನನ ಸ್ಥಳ ಓಪನ್ ಏರಿಯಾಗಿರುವ ಕಾರಣ, ಮಾಧ್ಯಮಗಳು ಮತ್ತು ಸಾರ್ವಜನಿಕರಿಗೆ ಯಾವುದೇ ಕೆಲಸಗಳು ಕಾಣದಂತೆ ಪರದೆಗಳನ್ನು ಹಾಕಿ ಸಂಪೂರ್ಣ ಕವರ್ ಮಾಡಲಾಗಿದೆ
ಸ್ಪಾಟ್ ನಂಬರ್ 16ರಲ್ಲಿ, ಅನಾಮಿಕ ‘ಮಾಸ್ಕ್ ಮ್ಯಾನ್’ ನೀಡುತ್ತಿರುವ ಹೇಳಿಕೆಯನ್ನು ಅಧಿಕಾರಿಗಳು ಚೇರ್ನಲ್ಲಿ ಕುಳ್ಳಿರಿಸಿ ದಾಖಲಿಸುತ್ತಿದ್ದಾರೆ. ಆತನ ಹೇಳಿಕೆಗಳನ್ನು ವಿಡಿಯೋ ಕ್ಯಾಮರಾದಲ್ಲಿ ದಾಖಲಿಸಲಾಗುತ್ತಿದ್ದು, ಅಗತ್ಯ ಮಾಹಿತಿಗಳನ್ನು ಸ್ಥಳದಲ್ಲೇ ಸಂಗ್ರಹಿಸಲಾಗುತ್ತಿದೆ. ಅಧಿಕಾರಿಗಳು ಪಾಯಿಂಟ್ ನಂಬರ್ 16ರ ಸಂಪೂರ್ಣ ವಿವರಗಳನ್ನು ಸಂಗ್ರಹಿಸುತ್ತಿರುವ ನಡುವೆ, ಶೇಡ್ ನೆಟ್ ಅಳವಡಿಸುವ ಕಾರ್ಯ ಜೋರಾಗಿದೆ. ಸ್ಥಳದ ಪ್ರತಿಯೊಂದು ಚಟುವಟಿಕೆಯನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಮುಂದುವರಿಸಲಾಗುತ್ತಿದೆ.