ಬಿಜೆಪಿ ಸಂಸದ ಕೆ.ಸುಧಾಕರ್ ಹೆಸರು ಬರೆದಿಟ್ಟು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿಗಳ ಕಾರು ಚಾಲಕ ಬಾಬು ಆತ್ಮಹತ್ಯೆ ಮಾಡಿಕೊಂಡಿದ್ದು, ಇದೀಗ ಈ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಆತ್ಮಹತ್ಯೆ ಮಾಡಿಕೊಂಡ ಬಾಬು ಪತ್ನಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನಲ್ಲಿ ಡಾ.ಕೆ.ಸುಧಾಕರ್ ಹೆಸರು ಸೇರಿಸುವಂತೆ ಕಾಂಗ್ರೆಸ್ ಆಗ್ರಹಿಸಿದ್ದರೆ, ಮತ್ತೊಂದೆಡೆ ದೂರಲ್ಲಿ ಸುಧಾಕರ್ ಹೆಸರು ಸೇರಿಸದಂತೆ ಬಿಜೆಪಿ ಪಟ್ಟು ಹಿಡಿದಿದೆ. ಅಂತಿಮವಾಗಿ ಸುಧಾಕರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಚಿಕ್ಕಬಳ್ಳಾಪುರ, (ಆಗಸ್ಟ್ 07): ಬಿಜೆಪಿ ಸಂಸದ ಕೆ.ಸುಧಾಕರ್ (Dr K Sudhakar) ಹೆಸರು ಬರೆದಿಟ್ಟು ಬಾಬು ಆತ್ಮಹತ್ಯೆ (Babu Suicide Case) ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಮೃತ ಬಾಬಯ ಪತ್ನಿ ನೀಡಿದ ದೂರಿನ ಮೇರೆಗೆ ಚಿಕ್ಕಬಳ್ಳಾಪುರ (Chikkaballapur) ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದ ಮೂವರ ವಿರುದ್ಧವೂ ಎನ್ಎಸ್ ಸೆಕ್ಷನ್ 108, 352, 351ರ ಅಡಿ ಪ್ರಕರಣ ದಾಖಲಾಗಿದೆ. ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಸುಧಾಕರ್ ವಿರುದ್ಧವೂ ಸಹ ಅಟ್ರಾಸಿಟಿ ಕೇಸ್ ದಾಖಲಾಗಿದ್ದು, A1 ಆರೋಪಿಯಾಗಿದ್ದಾರೆ. ಇನ್ನು FIRನಲ್ಲಿ ನಾಗೇಶ್, ಮಂಜುನಾಥ ಹೆಸರು ಸಹ ಉಲ್ಲೇಖಿಸಲಾಗಿದೆ.
ಇದಕ್ಕೂ ಮೊದಲು ಪೊಲೀಸ್ ಠಾಣೆ ಮುಂದೆ ಭಾರೀ ಹೈಡ್ರಾಮಾವೇ ನಡೆಯಿತು. ದೂರಿನಲ್ಲಿ ಡಾ.ಕೆ.ಸುಧಾಕರ್ ಹೆಸರು ಸೇರಿಸುವಂತೆ ಕಾಂಗ್ರೆಸ್ ಪಟ್ಟು ಹಿಡಿದಿದ್ದರೆ, ಮತ್ತೊಂದೆಡೆ ಎಫ್ ಐಆರ್ ನಲ್ಲಿ ಸುಧಾಕರ್ ಹೆಸರು ಸೇರಿಸದಂತೆ ಬಿಜೆಪಿ ಆಗ್ರಹಿಸಿತು. ಹೀಗೆ ಪೊಲೀಸರ ಮೇಲೆ ಪ್ರಭಾವ ಬೀರಲು ಎರಡು ಕಡೆಯಿಂದಲೂ ನಡೆದಿತ್ತು. ಅಂತಿಮವಾಗಿ ಪೊಲೀಸರು, ಸಂಸದ ಡಾ.ಕೆ ಸುಧಾಕರ್ ಸೇರಿದಂತೆ ಮೂವರ ವಿರುದ್ಧವೂ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಬಿಎನ್ಎಸ್ ಕಾಯ್ದೆ ಅಡಿ ಅಡಿ ಸೆಕ್ಷನ್ 108, 352 , 351 ಹಾಗೂ ಎಸ್ ಸಿ ಎಸ್ ಟಿ ಕಾಯ್ದೆ ಅಡಿ ಅಟ್ರಾಸಿಟಿ ಕೇಸ್ ದಾಖಲಾಗಿದ್ದು, ಡೆತ್ ನೋಟ್ ನಲ್ಲಿ ಹೆಸರು ಇರುವ ಸಂಸದ ಸುಧಾಕರ್, ನಾಗೇಶ್ ಮತ್ತು ಮಂಜುನಾಥ್ ವಿರುದ್ಧವೂ ಎಫ್ಐಆರ್ ದಾಖಲಾಗಿದೆ. ಇದರಲ್ಲಿ ಸಂಸದ ಸುಧಾಕರ್ ಎ1 ಆರೋಪಿಯಾಗಿದ್ದರೆ, ನಾಗೇಶ್ ಎ2, ಮಂಜುನಾಥ್ ಎ3 ಆರೋಪಿಯನ್ನಾಗಿ ಮಾಡಲಾಗಿದೆ.
ಜಿಲ್ಲಾ ಪಂಚಾಯ್ತಿಯಲ್ಲೇ ಆತ್ಮಹತ್ಯೆ
ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ (Chikkaballapur Zilla Panchayat) ಮುಖ್ಯ ಲೆಕ್ಕಾಧಿಕಾರಿಯ ಗುತ್ತಿಗೆ ನೌಕರ ಕಾರು ಚಾಲಕನಾಗಿದ್ದ ಬಾಬು, ಇಂದು (ಆಗಸ್ಟ್ 07) ಜಿಲ್ಲಾ ಪಂಚಾಯತಿ ಸಭಾಂಗಣದ ಪಕ್ಕದ ಮರದಡಿಯಲ್ಲೇ ಸರ್ಕಾರಿ ಕಾರು ನಿಲ್ಲಿಸಿದ್ದಾನೆ. ಬಳಿಕ ಕಾರಿನ ಮೇಲೆ ಹತ್ತಿ ಹೊಂಗೆ ಮರಕ್ಕೆ ನೇಣಿಗೆ ಶರಣಾಗಿದ್ದಾನೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸಿ ಸೇರಿದಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿದ್ದು, ಮೃತನ ಕಾರಿನಲ್ಲಿ 4 ಪುಟಗಳ ಡೆತ್ ನೋಟ್ ಸಿಕ್ಕಿದೆ. ಡೆತ್ ನೋಟ್ ನ ಮೊದಲ ಪುಟದಲ್ಲೇ, ಮೊದಲ ಸಾಲಿನಲ್ಲೇ ನನ್ನ ಸಾವಿಗೆ ಡಾ ಕೆ ಸುಧಾಕರ್ ಕಾರಣ ಹಾಗೂ ನಾಗೇಶ್ ಸೇರಿದಂತೆ ಜಿಲ್ಲಾ ಪಂಚಾಯತಿ ಲೆಕ್ಕ ಪರಿಶೋಧಕ ವಿಭಾಗದ ಎಸ್ ಡಿ ಎ ಮಂಜುನಾಥ್ ಹೆಸರನ್ನ ಉಲ್ಲೇಖಿಸಿದ್ದಾನೆ ಎಂದು ತಿಳಿದುಬಂದಿದೆ
ಡೆತ್ ನೋಟ್ ನಲ್ಲೇನಿದೆ?
ಆತ್ಮಹತ್ಯೆಗೂ ಮುನ್ನ ಬಾಬು ಡೆತ್ ನೋಟ್ ಬರೆದಿಟ್ಟಿದ್ದಾರೆ. ಡಾ.ಕೆ ಸುಧಾಕರ್ ಎಂಪಿ ಯ ಮೇಲೂ ತನಿಖೆ ಮಾಡಿ. ನಾಗೇಶ್ ಹಾಗೂ ಮಂಜುನಾಥ್ ಮೇಲೆ ತನಿಖೆ ಮಾಡಿ. ನನ್ನ ಹೆಂಡತಿ ಶಿಲ್ಪಾಗೆ ನ್ಯಾಯ ಕೊಡಿಸಿ. ನಾಗೇಶ್ ಹಾಗೂ ಮಂಜುನಾಥ್ ಸುಧಾಕರ್ ಆತ್ಮೀಯರು. MLA ಪ್ರದೀಪ್ ಸರ್, ಡಿ ಸಿ ಸರ್, ಎಸ್ಪಿ ಸರ್, ಸಿಇಒ ಸರ್, ಎಡಿಸಿ ಭಾಸ್ಕರ್ ಸರ್ ನನ್ನ ಹೆಂಡತಿಗೆ ನ್ಯಾಯ ಕೊಡಿಸಿ. ನನ್ನ ಬಳಿ 35 ಲಕ್ಷ ರೂ. ಹಣ ತೆಗೆದುಕೊಂಡಿರುತ್ತಾರೆ. ಮೋಸ ಹೋದ ಕಾರಣ ನಾನು ಸಾವಿಗೆ ಶರಣಾಗುತ್ತಿದ್ದೇನೆ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ.