ಬಿಜೆಪಿ ಮಾಜಿ ವಕ್ತಾರೆ ವಕೀಲೆ ಆರತಿ ಸಾಥೆ ಅವರನ್ನು ಬಾಂಬೆ ಹೈಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಿಸುವ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸನ್ನು ಮಹಾರಾಷ್ಟ್ರದ ವಿರೋಧ ಪಕ್ಷಗಳು ಮಂಗಳವಾರ (ಆ.5) ಟೀಕಿಸಿವೆ.
ಈ ಬೆಳವಣಿಗೆಯನ್ನು ‘ನಾಚಿಕೆಗೇಡಿನ ಪರಮಾವಧಿ’ ಎಂದು ಬಣ್ಣಿಸಿರುವ ಕಾಂಗ್ರೆಸ್ ಮಹಾರಾಷ್ಟ್ರ ಘಟಕ, ಬಿಜೆಪಿ ಪ್ರಜಾಪ್ರಭುತ್ವವನ್ನು ಅಣಕಿಸಿದೆ ಎಂದು ಹೇಳಿದೆ.
ಸಾಥೆ ಅವರನ್ನು ಫೆಬ್ರವರಿ 2023ರಲ್ಲಿ ಮಹಾರಾಷ್ಟ್ರ ಬಿಜೆಪಿಯ ವಕ್ತಾರರನ್ನಾಗಿ ನೇಮಿಸಲಾಗಿತ್ತು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಅವರು 2024ರ ಜನವರಿಯಲ್ಲಿ ತಮ್ಮ ಹುದ್ದೆಗೆ ಮತ್ತು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಜುಲೈ 28ರಂದು, ಸುಪ್ರೀಂ ಕೋರ್ಟ್ ಕೊಲಿಜಿಯಂ ಆರತಿ ಸಾಥೆ, ಅಜಿತ್ ಕಡೆತಂಕರ್ ಮತ್ತು ಸುಶಿಲ್ ಘೋಡೇಶ್ವರ್ ಅವರನ್ನು ಬಾಂಬೆ ಹೈಕೋರ್ಟ್‌ನ ನ್ಯಾಯಾಧೀಶರನ್ನಾಗಿ ನೇಮಿಸುವ ಪ್ರಸ್ತಾವನೆಯನ್ನು ಅನುಮೋದಿಸಿದೆ. ಈ ಕುರಿತು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ಶಿಫಾರಸ್ಸು ಮಾಡಿದೆ. ಸಚಿವಾಲಯ ಇದನ್ನು ಪ್ರಧಾನ ಮಂತ್ರಿ ಮುಂದೆ ಇಡುತ್ತದೆ, ಅವರು ನೇಮಕಾತಿಯ ಬಗ್ಗೆ ರಾಷ್ಟ್ರಪತಿಗೆ ಸಲಹೆ ನೀಡುತ್ತಾರೆ.
ಸಾಥೆ ಅವರ ಹೆಸರು ಶಿಫಾರಸ್ಸು ಮಾಡಿರುವ ಬಗ್ಗೆ ಮಂಗಳವಾರ ಪ್ರತಿಕ್ರಿಯಿಸಿರುವ ಎನ್‌ಸಿಪಿ(ಎಸ್‌ಪಿ) ಶಾಸಕ ರೋಹಿತ್ ಪವಾರ್, “ಹೈಕೋರ್ಟ್ ನ್ಯಾಯಾಧೀಶರಾಗುವ ಮೊದಲು ಸಾಥೆ ಬಿಜೆಪಿಗೆ ರಾಜೀನಾಮೆ ನೀಡುವ ಮೂಲಕ ಕಾನೂನು ಅವಶ್ಯಕತೆಗಳನ್ನು ಪೂರೈಸಿರಬಹುದು. ಆದರೆ, ನ್ಯಾಯಾಂಗದ ಸದಸ್ಯರಾಗಿ ಹಿಂದುತ್ವ ಪಕ್ಷದ ವಿರುದ್ಧ ಅವರು ಹೇಗೆ ತೀರ್ಪು ನೀಡಲು ಸಾಧ್ಯ ಎಂಬುದು ಪ್ರಶ್ನಾರ್ಹವಾಗಿದೆ” ಎಂದಿದ್ದಾರೆ.
ಈ ವಿಷಯದ ಬಗ್ಗೆ ನಮ್ಮ ಪಕ್ಷವು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರನ್ನು ಸಂಪರ್ಕಿಸಿದೆ ಮತ್ತು ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಪವಾರ್ ಹೇಳಿದ್ದಾರೆ.
ಈ ನಡುವೆ, ಬಿಜೆಪಿ ಮಾಧ್ಯಮ ವಿಭಾಗದ ಉಸ್ತುವಾರಿ ನವನಾಥ್ ಬಾನ್ ಅವರು ಸುಳ್ಳು ಆರೋಪಗಳನ್ನು ಮಾಡಬೇಡಿ, ಮಾತನಾಡುವ ಮೊದಲು ಸತ್ಯ ತಿಳಿದುಕೊಳ್ಳಿ ಎಂದು ರೋಹಿತ್ ಪವಾರ್ ಅವರಿಗೆ ಹೇಳಿದ್ದಾರೆ. ಆರತಿ ಸಾಥೆ ಜನವರಿ 6, 2024 ರಂದು ಬಿಜೆಪಿ ವಕ್ತಾರೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದಿದ್ದಾರೆ.
20 ವರ್ಷಗಳಿಂದ ವಕೀಲರಾಗಿರುವ ಸಾಥೆ, ಪ್ರಾಥಮಿಕವಾಗಿ ತೆರಿಗೆ ವಿವಾದಗಳು, ಭಾರತೀಯ ಭದ್ರತಾ ಮತ್ತು ವಿನಿಮಯ ಮಂಡಳಿ, ಭದ್ರತಾ ಮೇಲ್ಮನವಿ ನ್ಯಾಯಮಂಡಳಿ, ಕಸ್ಟಮ್ಸ್, ಅಬಕಾರಿ ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ಮತ್ತು ವೈವಾಹಿಕ ವಿವಾದಗಳ ಮುಂದಿರುವ ಪ್ರಕರಣಗಳನ್ನು ನಿರ್ವಹಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಆಕೆಯ ತಂದೆ ಅರುಣ್ ಸಾಥೆ ಕೂಡ ವಕೀಲರಾಗಿದ್ದು, ಬಿಜೆಪಿ ಮತ್ತು ಅದರ ಮಾತೃ ಸಂಸ್ಥೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಜೊತೆ ಸಂಬಂಧ ಹೊಂದಿದ್ದಾರೆ. ಅವರು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.