Ashraf Kammaje
Published : Aug 06 2025, 12:59 PM ISTUpdated : Aug 06 2025, 01:02 PM IST
ಸಚಿವ ಮಹದೇವಪ್ಪ ಹೇಳಿಕೆ ಸಮರ್ಥಿಸಿಕೊಂಡ ಲಕ್ಷ್ಮಣ್, ಟಿಪ್ಪು ‘ಮೋವಿ ಡ್ಯಾಂ’ ನಿರ್ಮಿಸಿದ್ದರು ಎಂದು ಹೇಳಿದ್ದಾರೆ. ನಾಲ್ವಡಿಗಿಂತ ಸಿದ್ದರಾಮಯ್ಯ ಹೆಚ್ಚು ಕೆಲಸ ಮಾಡಿದ್ದಾರೆ ಎಂಬ ಯತೀಂದ್ರ ಹೇಳಿಕೆಯನ್ನೂ ಸಮರ್ಥಿಸಿದ್ದಾರೆ. ಪ್ರತಾಪ್ ಸಿಂಹ ಮೊಬೈಲ್ ತನಿಖೆಯಾದರೆ, ಪ್ರಜ್ವಲ್ನಂತೆ ಜೈಲು ಸೇರುತ್ತಾರೆ ಎಂದರು.
ಮೈಸೂರು (ಆ.06): ಸಚಿವ ಎಚ್.ಸಿ. ಮಹದೇವಪ್ಪ ಅವರ ‘ಕೆಆರ್ಎಸ್ಗೆ ಟಿಪ್ಪು ಅಡಿಗಲ್ಲು ಹಾಕಿದ್ದರು’ ಎಂಬ ಹೇಳಿಕೆಯನ್ನು ಕೆಪಿಸಿಸಿ ವಕ್ತಾರ ಮತ್ತು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಲವು ವಿವಾದಾತ್ಮಕ ವಿಷಯಗಳ ಕುರಿತು ಸ್ಫೋಟಕ ಹೇಳಿಕೆಗಳನ್ನು ನೀಡಿದರು. ಕೆಆರ್ಎಸ್ ಅಣೆಕಟ್ಟೆಗೆ ಟಿಪ್ಪು ಸುಲ್ತಾನ್ ಅಡಿಗಲ್ಲು ಹಾಕಿದ್ದರು ಎಂಬ ಸಚಿವ ಎಚ್.ಸಿ. ಮಹದೇವಪ್ಪ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಲಕ್ಷ್ಮಣ್, ‘ಸಚಿವರ ಹೇಳಿಕೆ ನೂರಕ್ಕೆ ನೂರು ಸತ್ಯ. ಕಟ್ಟಿಸಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಿಜ. ಆದರೆ, ಅದಕ್ಕೂ ಮೊದಲು ಅದೇ ಜಾಗದಲ್ಲಿ ಟಿಪ್ಪು ಸುಲ್ತಾನ್ ‘ಮೋವಿ ಡ್ಯಾಂ’ ಹೆಸರಿನಲ್ಲಿ ಬ್ಯಾರೇಜ್ ನಿರ್ಮಿಸಿ 6 ಟಿಎಂಸಿ ನೀರು ಸಂಗ್ರಹಿಸುತ್ತಿದ್ದರು. ಆ ನೀರನ್ನು ಶ್ರೀರಂಗಪಟ್ಟಣ ಮತ್ತು ಕೆ.ಆರ್. ನಗರ ಭಾಗದ ಕೃಷಿ ಭೂಮಿಗೆ ಹರಿಸುತ್ತಿದ್ದರು. ಇದಕ್ಕೆ ಶಾಸನದ ಸಾಕ್ಷಿಗಳಿವೆ’ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ, ‘ನಾಲ್ವಡಿ ಕೃಷ್ಣರಾಜ ಒಡೆಯರಿಗಿಂತ ನನ್ನ ತಂದೆ ಸಿದ್ದರಾಮಯ್ಯ ಹೆಚ್ಚು ಕೆಲಸ ಮಾಡಿದ್ದಾರೆ’ ಎಂಬ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯನ್ನೂ ಸಮರ್ಥಿಸಿಕೊಂಡರು. ‘ಮೈಸೂರು ಸಂಸ್ಥಾನದ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಇಂದಿನ ಸಂಸದರಿಗೆ ಹೋಲಿಸುವುದು ಬೇಡ. ರಾಜಪ್ರಭುತ್ವದಲ್ಲಿ ನಾಲ್ವಡಿ ಅವರು ಮೈಸೂರಿಗೆ ಕೆಲಸ ಮಾಡಿದರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಿದ್ದರಾಮಯ್ಯನವರು ಮೈಸೂರಿಗೆ ನೀರು, ಆಸ್ಪತ್ರೆ, ರಸ್ತೆಗಳಂತಹ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಹಾಗಾಗಿ ಯತೀಂದ್ರ ಹೇಳಿದ್ದರಲ್ಲಿ ತಪ್ಪಿಲ್ಲ’ ಎಂದರು.