ನ್ಯಾಯಾಲಯದ ಮೊರೆಗೆ ಚಿಂತನೆ:
ಬೆಂಗಳೂರು (ಆ.05): ಜಿಪಂ, ತಾಪಂ ಚುನಾವಣೆಗೆ ಮೀಸಲಾತಿ ಪ್ರಕಟಿಸಲು ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಅಸಮಾಧಾನ ಹೊರಹಾಕಿರುವ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್.ಸಂಗ್ರೇಶಿ, ಇದಕ್ಕೆ ಕಾರಣರಾದ ಅಧಿಕಾರಿಗಳನ್ನು ನ್ಯಾಯಾಲಯದ ಮುಖಾಂತರ ಜೈಲಿಗೆ ಕಳುಹಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಎದುರು ಮೇ 31ರೊಳಗೆ ಮೀಸಲಾತಿ ಪ್ರಕಟಿಸುವುದಾಗಿ ಹೇಳಿತ್ತು. ಆದರೆ, ಈವರೆಗೂ ಮೀಸಲಾತಿ ಪ್ರಕಟಿಸಿಲ್ಲ. ಈ ಸಂಬಂಧ ಎರಡು ಬಾರಿ ನ್ಯಾಯಾಂಗ ನಿಂದನೆಯಾಗಿದೆ. ಆದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಸರ್ಕಾರದ ಈ ನಡೆ ಬಗ್ಗೆ ನ್ಯಾಯಾಲಯದ ಗಮನ ಸೆಳೆದು ಗಂಭೀರವಾಗಿ ಪರಿಗಣಿಸುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಆಯೋಗ ಮತ್ತೊಮ್ಮೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ. ಹೀಗಾಗಿ ಈ ಬಾರಿ ಅಧಿಕಾರಿಗಳು ನ್ಯಾಯಾಂಗ ನಿಂದನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ರಾಜ್ಯ ಸರ್ಕಾರ ಪದೇ ಪದೆ ನ್ಯಾಯಾಂಗ ನಿಂದನೆ ಮಾಡುತ್ತಿರುವುದು ಸರಿಯಲ್ಲ. ಇನ್ನಾದರೂ ಎಚ್ಚೆತ್ತು ಮೀಸಲಾತಿ ಪಟ್ಟಿ ಪ್ರಕಟಿಸಬೇಕು. ಈಗಾಗಲೇ ಆಯೋಗ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸಕಲ ಸಿದ್ಧತೆ ನಡೆಸಿದೆ. ಆದರೆ, ಸರ್ಕಾರದ ವಿಳಂಬ ಧೋರಣೆಯಿಂದ ಚುನಾವಣೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ಆಸಕ್ತಿ ಇದೆಯೋ, ಇಲ್ವೋ ಗೊತ್ತಿಲ್ಲ: ಚುನಾವಣೆ ವಿಳಂಬದಲ್ಲಿ ಆಯೋಗದ ಪಾತ್ರ ಏನೂ ಇಲ್ಲ. ಸರ್ಕಾರಕ್ಕೆ ಚುನಾವಣೆ ನಡೆಸಲು ಆಸಕ್ತಿ ಇದೆಯೋ ಅಥವಾ ಇಲ್ಲವೋ ಎಂಬುದನ್ನು ನಾವು ಹೇಳುವುದಿಲ್ಲ. ಆದಷ್ಟು ಬೇಗ ಸರ್ಕಾರ ಮೀಸಲಾತಿ ಪಟ್ಟಿ ನೀಡಬೇಕು. ನೀಡದಿದ್ದಲ್ಲಿ ಸರ್ಕಾರಕ್ಕೆ ಆಸಕ್ತಿ ಇಲ್ಲ ಎಂದೇ ಭಾವಿಸಬೇಕಾಗುತ್ತದೆ. ಈ ಸಂಬಂಧ ನಾವು ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಆದರೆ ಈವರೆಗೂ ನಮಗೆ ಮೀಸಲಾತಿ ಪಟ್ಟಿ ಸಿಕ್ಕಿಲ್ಲ. ಸಾಂವಿಧಾನಿಕ ಸಂಸ್ಥೆಯಾದ ರಾಜ್ಯ ಚುನಾವಣಾ ಆಯೋಗವು ಕೈ ಕಟ್ಟಿ ಕೂರುವಂತಾಗಿದೆ. ಸದ್ಯಕ್ಕೆ ಚುನಾವಣಾ ಆಯೋಗಕ್ಕೆ ಎರಡು ದಾರಿ ಮಾತ್ರ ಇದೆ. ಸರ್ಕಾರದೊಂದಿಗೆ ಪತ್ರ ವ್ಯವಹಾರ ಮಾಡುವುದು ಅಥವಾ ನ್ಯಾಯಾಲಯಕ್ಕೆ ಹೋಗುವ ದಾರಿ ಮಾತ್ರ ಇದೆ ಎಂದು ಸಂಗ್ರೇಶಿ ಬೇಸರದಿಂದ ನುಡಿದರು.
ನ್ಯಾಯಾಲಯದ ಮೊರೆಗೆ ಚಿಂತನೆ: ಪ್ರಸ್ತುತ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ರಾಜ್ಯ ಸರ್ಕಾರವೇ ಮೀಸಲಾತಿ ನಿಗದಿಪಡಿಸಿ ಪ್ರಕಟಿಸುತ್ತಿದೆ. ಈ ಹಿಂದೆ ಮೀಸಲಾತಿ ನಿಗದಿಪಡಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇತ್ತು. ಆಯೋಗಕ್ಕೆ ಆ ಅಧಿಕಾರ ಮರಳಿ ಪಡೆಯಲು ಕಾನೂನು ಹೋರಾಟ ನಡೆಸುವ ಚಿಂತನೆ ಇದೆ. ಈ ಸಂಬಂಧ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲು ಆಯೋಗ ಚಿಂತಿಸಿದೆ. ಒಂದು ವೇಳೆ ಆಯೋಗಕ್ಕೆ ಮೀಸಲಾತಿ ಪ್ರಕಟಿಸುವ ಅಧಿಕಾರ ಮರಳಿ ಸಿಕ್ಕರೆ ಕಾಲಕಾಲಕ್ಕೆ ಚುನಾವಣೆ ನಡೆಸಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಲು ಗಂಭೀರವಾಗಿ ಚಿಂತಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.