ಧರ್ಮಸ್ಥಳದ ಶವ ಹೂಳುವಿಕೆ ಪ್ರಕರಣದಲ್ಲಿ ಅನಾಮಿಕ ವ್ಯಕ್ತಿಯ ಹೇಳಿಕೆಗಳು ಹೊಸ ತಿರುವುಗಳನ್ನು ಸೃಷ್ಟಿಸಿವೆ. ಕಾನೂನು ಪ್ರಕ್ರಿಯೆಗಳಿಲ್ಲದೆಶವಗಳನ್ನು ಹೂಳಲಾಗಿದೆ ಎಂಬ ಆರೋಪಗಳು ಎದ್ದಿವೆ. ಎಸ್ಐಟಿ ತನಿಖೆ ಚುರುಕುಗೊಂಡಿದ್ದು, ಬೆಳ್ತಂಗಡಿ ಪೊಲೀಸರಿಗೆ ದಾಖಲೆಗಳ ಪರಿಶೀಲನೆಗೆ ಸೂಚನೆ ನೀಡಲಾಗಿದೆ
ಧರ್ಮಸ್ಥಳ/ಬೆಳ್ತಂಗಡಿ (ಜು.27): ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವ ಕುರಿತು ಭಾರೀ ಸಂಚಲನ ಉಂಟುಮಾಡಿರುವ ಪ್ರಕರಣದಲ್ಲಿ, ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆಗೆ ಮತ್ತಷ್ಟು ತೀವ್ರತೆ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಬೆಳವಣಿಗೆಯೊಂದು ನಡೆದಿದೆ. ಅನಾಮಿಕ ದೂರುದಾರ ವ್ಯಕ್ತಿಯ ವಿಚಾರಣೆಯಲ್ಲಿ ಭಾರೀ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾನೆ. ಈ ಹೇಳಿಕೆಯಿಂದಾಗಿ ಪೊಲೀಸರ ಎದೆಯಲ್ಲಿ ಢವ-ಢವ ಶುರುವಾಗಿದೆ.
ಈಗಾಗಲೇ ಕಳೆದ ಎರಡು ದಿನಗಳಿಂದ ಧರ್ಮಸ್ಥಳದಲ್ಲಿ ನೂರಾರು ಮಹಿಳೆಯರ ಶವಗಳನ್ನು ಹೂತು ಹಾಕಿದ್ದಾಗಿ ಹೇಳಿದ ಅನಾಮಿಕ ದೂರುದಾರನ್ನು ರಾಜ್ಯ ಸರ್ಕಾರ ನೇಮಕ ಮಾಡಿದ ವಿಶೇಷ ತನಿಖಾ ತಂಡ (ಎಸ್ಐಟಿ) ತೀವ್ರ ವಿಚಾರಣೆ ಮಾಡುತ್ತಿದೆ. ಇಂದು ಬೆಳಗ್ಗೆಯಿಂದ ಅನಾಮಿಕ ವ್ಯಕ್ತಿಯ ವೈಯಕ್ತಿಕ ಮಾಹಿತಿ ಕೆದಕುವಂತಹ 10ಕ್ಕೂ ಅಧಿಕ ಪ್ರಶ್ನೆಗಳನ್ನು ಮಾಡಲಾಗಿದೆ. ಇದೆಲ್ಲಕ್ಕೂ ಆ ವ್ಯಕ್ತಿ ಸ್ಪಷ್ಟ ಉತ್ತರವನ್ನೂ ನೀಡಿದ್ದಾನಂತೆ. ಇದಾದ ನಂತರ ಹೆಚ್ಚುವರಿ ವಿಚಾರಣೆ ವೇಳೆ ಅನಾಮಿಕ ವ್ಯಕ್ತಿ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾನೆ.
ನಾನು ಧರ್ಮಸ್ಥಳದ ಗ್ರಾಮದ ಸುತ್ತಮುತ್ತಲೂ ಹೂತಿರುವ ಯಾವುದೇ ಮಹಿಳೆಯರು ಅಥವಾ ಬಾಲಕಿಯರ ಶವಗಳಿಗೆ ಯಾವುದೇ ಕಾನೂನು ಪ್ರಕ್ರಿಯೆ ನಡೆದಿಲ್ಲ. ಶವಗಳನ್ನು ಹೂಳುವ ಮೊದಲು ನಾನು ಪೊಲೀಸರಿಗೆ ಮಾಹಿತಿ ನೀಡಿಲ್ಲ’ ಎಂದು ಅನಾಮಿಕ ವ್ಯಕ್ತಿ ಎಸ್ಐಟಿಗೆ ಹೇಳಿರುವುದು ಪ್ರಕರಣವನ್ನು ಹೊಸ ತಿರುವಿಗೆ ಕರೆದೊಯ್ಯುತ್ತದೆ. ಅಂದರೆ, ಪೊಲೀಸರು ಇಷ್ಟೊಂದು ಸಾವಿನ ಪ್ರಕರಣಗಳು ನಡೆಯುತ್ತಿದ್ದರೂ ಕಣ್ಣು ಮುಚ್ಚಿ ಕುಳಿತಿದ್ದರೇ? ಯಾಕೆ ತನಿಖೆಯನ್ನು ಮಾಡಲಿಲ್ಲ ಎಂಬ ಆರೋಪಗಳು ಕೂಡ ಕೇಳಿಬಂದಿವೆ. ಹೀಗಾಗಿ, 2014ರ ವೇಳೆ ಧರ್ಮಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳ ಎದೆಯಲ್ಲಿ ಢವ-ಢವ ಶುರುವಾಗಿದೆ ಎಂದೇ ಅಂದಾಜಿಸಬಹುದು.
ಕನಿಷ್ಠ ಗೌರವವೂ ಶವಗಳಿಗೆ ಸಲ್ಲಿಕೆಯಾಗಿಲ್ಲ:
ಅನಾಮಿಕ ವ್ಯಕ್ತಿಯ ಪ್ರಕಾರ, ತಾನು ಹೂತಿರುವ ಶವಗಳಿಗೆ ಪೊಲೀಸ್ ತನಿಖೆ, ಕನಿಷ್ಟ ಕಾನೂನು ಪ್ರಕ್ರಿಯೆ, ಅಥವಾ ಪೋಸ್ಟ್ಮಾರ್ಟಂ ತಪಾಸಣೆ ನಡೆದೇ ಇಲ್ಲ. ಮೃತದೇಹಗಳಿಗೆ ಸಲ್ಲಿಸಬೇಕಾದ ಕನಿಷ್ಠ ಗೌರವಗಳು ಕೂಡ ನೀಡಲ್ಪಟ್ಟಿಲ್ಲ ಎಂಬ ಆರೋಪವನ್ನು ಅನಾಮಿಕ ವ್ಯಕ್ತಿ ವ್ಯಕ್ತಪಡಿಸಿದ್ದಾನೆ. ಈ ಹೇಳಿಕೆಗಳಿಂದ, ಶವಗಳ ಮೂಲ, ಸಾವುಗಳ ಸ್ವರೂಪ ಮತ್ತು ಶವಗಳನ್ನು ಹೂತಿರುವ ನಿಖರ ಸ್ಥಳಗಳ ಕುರಿತು ಗಂಭೀರ ಅನುಮಾನಗಳು ವ್ಯಕ್ತವಾಗುತ್ತಿವೆ. ಅನಾಮಿಕನ ಹೇಳಿಕೆಗಳು ಹೊರಬಿದ್ದ ಬೆನ್ನಲ್ಲೇ, ಎಸ್ಐಟಿ ತಂಡ ತನಿಖೆಗೆ ಇನ್ನಷ್ಟು ಬಲ ನೀಡಿದ್ದು, ಈ ಮಾಹಿತಿ ಆಧಾರದ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಸೂಚನೆ ನೀಡಲಾಗಿದೆ. ಅನುಮಾನಸ್ಪದ, ನಿಗೂಢ ಸಾವುಗಳು ಮತ್ತು ಅಪರಿಚಿತ ಶವಗಳ ದಾಖಲೆಗಳನ್ನು ಒಗ್ಗೂಡಿಸಿ ಪರಿಶೀಲನೆ ನಡೆಸುವಂತೆ ತಿಳಿಸಲಾಗಿದೆ.
ಬೆಳ್ತಂಗಡಿ ಪೊಲೀಸರು ದಾಖಲೆಗಳ ಪರಿಶೀಲನೆಗೆ ತಯಾರಿ:
ಪೋಸ್ಟ್ಮಾರ್ಟಂ ವರದಿ, ದಫನ ಮಾಡಿರುವ ದಾಖಲೆಗಳು, ಠಾಣೆ ದಾಖಲಾತಿಗಳು ಸೇರಿದಂತೆ ಈ ಪ್ರದೇಶದಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಸಂಭವಿಸಿದ ಅಪರಿಚಿತ ಶವ ಸಾವು ಪ್ರಕರಣಗಳ ವರದಿ ಸಿದ್ಧಪಡಿಸಲು ಸೂಚನೆ ನೀಡಲಾಗಿದೆ. ಇದರ ಜತೆಗೆ ಬೆಳ್ತಂಗಡಿಗೆ ಎಸ್ಐಟಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಕೂಡ ಹೆಚ್ಚಾಗಿದೆ. ಅನಾಮಿಕ ಹೇಳಿಕೆಯಿಂದ ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಹೊಸ ತಿರುವುಗಳು ಸೃಷ್ಟಿಯಾಗುತ್ತಿವೆ. ಶವಗಳ ಹೂಳುವಿಕೆ ಬಗ್ಗೆ ಯಾವುದೇ ಕಾನೂನು ಪ್ರಕ್ರಿಯೆ ಇಲ್ಲದಿರುವುದು ಮತ್ತಷ್ಟು ಅನುಮಾನ ಹುಟ್ಟಿಸುತ್ತಿದೆ. ಎಸ್ಐಟಿ ತನ್ನ ತನಿಖೆ ವಿಸ್ತರಿಸಿದ್ದು, ಬೆಳ್ತಂಗಡಿ ಪೊಲೀಸ್ ಠಾಣೆಗೂ ದಾಖಲೆ ಸಂಗ್ರಹದ ಸೂಚನೆ ನೀಡಲಾಗಿದೆ.