
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಕಸ್ಟಮ್ಸ್ ಅಧಿಕಾರಿಗಳು ಚಿನ್ನ ಕಳ್ಳಸಾಗಣೆ ಯತ್ನವನ್ನು ವಿಫಲಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ ದುಬೈನಿಂದ ಆಗಮಿಸಿದ ಪ್ರಯಾಣಿಕನೊಬ್ಬ ಸಹ ಪ್ರಯಾಣಿಕರ ಲಗೇಜ್ ಟ್ರಾಲಿಯಲ್ಲಿ 3.5 ಕೆಜಿ ಚಿನ್ನದ ಬಿಸ್ಕತ್ತುಗಳನ್ನು ಹೊಂದಿರುವ ಚೀಲವನ್ನು ಇರಿಸುವ ಮೂಲಕ ಕಸ್ಟಮ್ಸ್ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ ಎಂದು ಕಸ್ಟಮ್ಸ್ ಇಲಾಖೆಯ ಮೂಲಗಳು ತಿಳಿಸಿವೆ.
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದುಬೈನಿಂದ ಬಂದಿರುವ ಸ್ಮಗ್ಲರ್, ಕಸ್ಟಮ್ ಅಧಿಕಾರಿಗಳನ್ನು ಕಂಡು ಬೆಚ್ಚಿ ಬ್ಯಾಗ್ ಎಸೆದಿದ್ದಾನೆ. ತನ್ನ ಟ್ರಾಲಿಯಲ್ಲಿರುವ ಚಿನ್ನವನ್ನು ಕಂಡ ಸಹ ಪ್ರಯಾಣಿಕ ತಕ್ಷಣವೇ ಕಸ್ಟಮ್ಸ್ ಅಧಿಕಾರಿಗಳಿಗೆ ತಿಳಿಸಿದ್ದಾನೆ. ಪರಿಶೀಲನೆ ನಡೆಸಿದಾಗ 3.5 ಕೆ.ಜಿ ಚಿನ್ನ ಇರುವುದು ಪತ್ತೆಯಾಗಿದೆ. ಪ್ರಯಾಣಿಕ ನೀಡಿದ ಮಾಹಿತಿ ಮೇರೆಗೆ ಕಸ್ಟಮ್ಸ್ ಅಧಿಕಾರಿಗಳು ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿದ್ದು, ಸ್ಮಗ್ಲರ್ ಬಂಧನಕ್ಕೆ ಮುಂದಾಗಿದ್ದಾರೆ.
ದುಬೈ ವಿಮಾನದಲ್ಲಿ ಬಂದ ಪ್ರಯಾಣಿಕರೊಬ್ಬರು ಚಿನ್ನವನ್ನು ಬಿಟ್ಟು ಹೋಗಿದ್ದಾರೆ ಎಂದು ಕಸ್ಟಮ್ಸ್ ಅಧಿಕಾರಿಗಳು ಆರಂಭಿಕ ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಕರಣವು ಕಸ್ಟಮ್ಸ್ ಇಲಾಖೆಯ ಪರಿಶೀಲನೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ.