ಯುಟ್ಯೂಬ್ ಮೂಲಕ ಸಂಚಲನ ಸೃಷ್ಟಿಸ್ತಿರೋ ಯೂಟ್ಯೂಬರ್ ಸಮೀರ್ ಎಂ.ಡಿ. ಬಿಗ್ಬಾಸ್ಗೆ ಹೋಗುತ್ತಿದ್ದಾರಾ? ಏನಿದುದ ವಿಷ್ಯ? ಇಲ್ಲಿದೆ ಡಿಟೇಲ್ಸ್…
ಸಮೀರ್ ಎಂಡಿ ಇತ್ತೀಚಿನ ದಿನಗಳಲ್ಲಿ ಭಾರಿ ಚರ್ಚೆಯಲ್ಲಿ ಇರುವ ಹೆಸರು. ಧರ್ಮಸ್ಥಳದಲ್ಲಿ ಬರ್ಬರವಾಗಿ ಹ*ತ್ಯೆಗೀಡಾದ ಸೌಜನ್ಯಾ ಎಂಬ ಯುವತಿಯ ಪ್ರಕರಣ ಇಡೀ ದೇಶದಲ್ಲಿಯೇ ಸಂಚಲನ ಮೂಡಿಸುತ್ತಿದೆ. ಇಂಥ ಹೀನ ಕೃತ್ಯ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎನ್ನುವ ಕೂಗು ಜೋರಾಗುತ್ತಿದೆ. ಅವರು ಯಾರೇ ಆಗಿದ್ದರೂ, ಅವರನ್ನು ಬಿಡಬಾರದು, ಮುಗ್ಧ ಹೆಣ್ಣುಮಕ್ಕಳ ಮಾನ,ಪ್ರಾಣ ತೆಗೆಯುವ ಕ್ರೂರಿಗಳಿಗೆ ಶಿಕ್ಷೆ ಆಗಬೇಕು ಎನ್ನುವುದು ಎಲ್ಲರ ಮಾತು. ಈ ಘಟನೆಯ ಬೆನ್ನಲ್ಲೇ ಹಲವಾರು ಬೆಳವಣಿಗೆಗಳು ನಡೆಯುತ್ತಿವೆ. ಈ ಪ್ರಕರಣದ ಬಗ್ಗೆ ಸಾಕಷ್ಟು ವರದಿ ಮಾಡಿ ಫೇಮಸ್ ಆದವರು ಯೂಟ್ಯೂಬರ್ ಸಮೀರ್ ಎಂ.ಡಿ. ಇವರು ಮತ್ತೊಮ್ಮೆ ಸೌಜನ್ಯ ಪ್ರಕರಣದ ಬಗ್ಗೆ ವಿಡಿಯೋ ಮಾಡಿದ್ದರಿಂದಲೇ ಅದು ಮತ್ತೆ ಮುನ್ನೆಲೆಗೆ ಬಂದಿದ್ದು ಅಪರಾಧಿಗಳ ಬುಡ ಅಲುಗಾಡಿಸುತ್ತಿದೆ.
ಆದರೆ ಅದರ ಬೆನ್ನಲ್ಲೇ ಇದೀಗ ಧರ್ಮಸ್ಥಳದಲ್ಲಿ ಸರಣಿ ಹತ್ಯೆ ನಡೆದಿದೆ ಎನ್ನುವ ವಿಷಯ ಸಂಚಲನ ಮೂಡಿಸುತ್ತಿದೆ. ಒಬ್ಬೊಬ್ಬರು ಒಂದೊಂದು ರೀತಿಯ ಮಾಹಿತಿಯನ್ನು ಈ ಬಗ್ಗೆ ನೀಡುತ್ತಿದ್ದಾರೆ. ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಇದಾಗಲೇ, ರಾಜ್ಯ ಸರ್ಕಾರ, ತನಿಖಾ ತಂಡವನ್ನು ನೇಮಿಸಿದ್ದು ಅದರ ಬಗ್ಗೆ ವಿಚಾರಣೆ ನಡೆಯುತ್ತಿದೆ. ಆದರೆ ಇದರ ನಡುವೆಯೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ತನಿಖೆ ಹಂತದಲ್ಲಿ ಇರುವಾಗಲೇ ಇಲ್ಲಿ ನಡೆಯುತ್ತಿರುವ ಸರಣಿ ಸಾವಿಗೆ ನಾನೇ ಸಾಕ್ಷಿ, ನನಗೆ ಎಲ್ಲವೂ ಗೊತ್ತಿದೆ, ಅದಲ್ಲಿ ಈ ರೀತಿ ನಡೆಯುತ್ತಿರುವುದು ನಿಜ, ಅದು ನನಗೆ ಗೊತ್ತಾದ ಕಾರಣ ತೊಂದರೆ ನೀಡುತ್ತಿದ್ದಾರೆ ಇತ್ಯಾದಿಯಾಗಿ ಯುವಕನೊಬ್ಬ ಮಾತನಾಡಿದ್ದ ವಿಡಿಯೋ ಶೇರ್ ಮಾಡಿದ್ದರು ಸಮೀರ್.
ಈ ವಿಡಿಯೋದ ಹಿನ್ನೆಲೆಯಲ್ಲಿ ಸಮೀರ್ ವಿರುದ್ಧ ಹಲವರು ದೂರು ದಾಖಲು ಮಾಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆಯೇ ತಮ್ಮ ಯೂಟ್ಯೂಬ್ನಿಂದ ಸಮೀರ್ ವಿಡಿಯೋ ಡಿಲೀಟ್ ಕೂಡ ಮಾಡಿದ್ದಾರೆ. ಆದರೆ, ವಿಡಿಯೋ ಡೌನ್ಲೋಡ್ ಮಾಡಿಕೊಂಡವರು ಅದನ್ನು ತಮ್ಮ ಖಾತೆಯಲ್ಲಿ ಶೇರ್ ಮಾಡುತ್ತಲೇ ಇದ್ದಾರೆ. ಇಂತಿಪ್ಪ ಸಮೀರ್ ಎಂಡಿ ಇದೀಗ ಬಿಗ್ಬಾಸ್ಗೆ ಹೋಗುತ್ತಿದ್ದಾರೆ ಎನ್ನುವ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಅಷ್ಟಕ್ಕೂ ಎಲ್ಲರಿಗೂ ತಿಳಿದಿರುವಂತೆ, ಬಿಗ್ಬಾಸ್ ಎಂದರೇನೇ ಅಲ್ಲಿ ಕಾಂಟ್ರವರ್ಸಿ ಜನರಿಗೆ ಮನ್ನಣೆ ಸಿಗುವುದು ಎನ್ನುವುದು. ಕಾಂಟ್ರವರ್ಸಿ ಮೂಲಕ ‘ಖ್ಯಾತಿ’ ಗಳಿಸಿವರಿಗೆ, ಕೇಸು ದಾಖಲಾದವರಿಗೆ, ಜೈಲಿಗೆ ಹೋಗಿ ಬಂದವರಿಗೆ, ವಿವಾದ ಸೃಷ್ಟಿಸಿಕೊಂಡವರಿಗೆ… ಹೀಗೆ ಇಂಥವರ ಸಂಖ್ಯೆ ಹೆಚ್ಚಿಗೆ ಇದ್ದು, ಅದನ್ನು ಬ್ಯಾಲೆನ್ಸ್ ಮಾಡುವುದಕ್ಕಾಗಿ ಯಾವುದೇ ಆಪಾದನೆ ಇಲ್ಲದ ಒಂದಿಷ್ಟು ಜನರನ್ನು ದೊಡ್ಮನೆಗೆ ಪ್ರವೇಶ ಕೊಡುವುದು ಇದೆ. ಆದರೆ ಯಾವುದೇ ವಿವಾದ ಇಲ್ಲದೇ ಸೈಲೆಂಟ್ ಆಗಿರುವ ವ್ಯಕ್ತಿಗಳು ಮೊದಲ ಕೆಲವು ವಾರಗಳಲ್ಲಿಯೇ ಬಿಗ್ಬಾಸ್ನಿಂದ ಹೊರಕ್ಕೆ ಬರುವುದು, ಇದಾಗಲೇ ಎಲ್ಲಾ ಭಾಷೆಗಳ ಬಿಗ್ಬಾಸ್ ನೋಡುತ್ತಿರುವವರಿಗೆ ಗುಟ್ಟಾಗಿ ಉಳಿದ ವಿಷಯವೇನಲ್ಲ.
ಇದೇ ಕಾರಣಕ್ಕೆ ಯುಟ್ಯೂಬ್ ಮೂಲಕ ಅಸಂಖ್ಯ ಅಭಿಮಾನಿಗಳನ್ನು ಪಡೆದುಕೊಂಡಿರುವ ಸಮೀರ್ ಅವರೂ ಬಿಗ್ಬಾಸ್ ಮನೆಗೆ ಹೋಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಇವರಿಗೆ ಸ್ಪರ್ಧಿಸಲು ಅವಕಾಶ ಕೊಡಿ ಎಂದು ಕೆಲವರು ಹೇಳುತ್ತಿದ್ದರೆ, ನಕಲಿ ವಿಡಿಯೋ ಸೃಷ್ಟಿಸಿ ಇಡೀ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವವರಿಗೆ ಅವಕಾಶ ಕೊಡಬಾರದು ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಇದಾಗಲೇ ಸುದೀಪ್ ಅವರು ಯಾವುದೇ ವಿವಾದ ಇರುವ ವ್ಯಕ್ತಿಯನ್ನು ಆಯ್ಕೆ ಮಾಡುವುದಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಆದರೆ ವಿವಾದ ಇಲ್ಲದ ವ್ಯಕ್ತಿ ಬಿಗ್ಬಾಸ್ನಲ್ಲಿ ಇರುವುದಿಲ್ಲ ಎನ್ನುವ ಸತ್ಯ ತಮಗೆ ಗೊತ್ತಿದೆ ಎಂದು ನೆಟ್ಟಿಗರು ಅಭಿಪ್ರಾಯ ಪಡುತ್ತಿದ್ದಾರೆ. ಒಟ್ಟಿನಲ್ಲಿ ಬಿಗ್ಬಾಸ್ ಒಳಗೆ ಯಾರು ಹೋಗುತ್ತಾರೆ, ಯಾರು ಹೋಗಲ್ಲ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.