ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಸುತ್ತಮುತ್ತ ನಡೆದಿದ್ದ ಕೊಲೆ ಪ್ರಕರಣಗಳು ಮತ್ತು ಸೌಜನ್ಯ ಸಾಮೂಹಿಕ ಅತ್ಯಾಚಾರ-ಕೊಲೆ ಪ್ರಕರಣ ಕುರಿತು ನಿರಂತರ ಸುದ್ದಿ ಮಾಡಿದ್ದಕ್ಕೆ ಕೋರ್ಟ್ ಮೂಲಕ ಆದೇಶ ಕೊಡಿಸಿ ‘ಈದಿನ.ಕಾಮ್’ ಯೂಟ್ಯೂಬ್ ಚಾನೆಲ್ ಅನ್ನು ಬ್ಲಾಕ್ ಮಾಡಿಸಲಾಗಿತ್ತು. ಪ್ರಕರಣದ ಕುರಿತು ಇಂದು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ನ ಸುನೀಲ್ ದತ್ ಯಾದವ್ ಅವರ ಪೀಠವು ಚಾನೆಲ್ ‘ಬ್ಲಾಕ್’ ಆದೇಶಕ್ಕೆ ನೀಡಿದ್ದ ಮಧ್ಯಂತರ ಆದೇಶವನ್ನು ತೆರವುಗೊಳಿಸಿದೆ.
‘ಈದಿನ’ ಯೂಟ್ಯೂಬ್ ಚಾನೆಲ್ ನಲ್ಲಿ ಸೌಜನ್ಯ ಹತ್ಯೆಗೆ ಸಂಬಂಧಿಸಿದಂತೆ ನಿರಂತರವಾಗಿ ಚರ್ಚೆ ಮಾಡುವ ಮೂಲಕ ಸಂತ್ರಸ್ತೆಗೆ ನ್ಯಾಯ ಒದಗಿಸುವ ಕೆಲಸ ಮಾಡಲಾಗಿತ್ತು. ಆದರೆ, ಈ ಬೆದರಿಕೆಗೆ ತಲೆಬಾಗದ ಸಂಸ್ಥೆಯು ನ್ಯಾಯಾಂಗ ಹೋರಾಟಕ್ಕೆ ಮುಂದಾಗಿತ್ತು.
2012ರ ಅಕ್ಟೋಬರ್ 9ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದ ಕುಮಾರಿ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣ ಆರೋಪಿಗಳು ಯಾರು ಎಂಬುದು ಹತ್ತು ವರ್ಷದ ಬಳಿಕವೂ ಇನ್ನೂ ಪತ್ತೆಯಾಗಿಲ್ಲ. ಇದೊಂದೆ ಪ್ರಕರಣದಲ್ಲಿ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ನ್ಯಾಯಾಂಗದ ಮೇಲೆ ಜನ ವಿಶ್ವಾಸ ಕಳೆದುಕೊಳ್ಳುವಂತೆ ಮಾಡಿದೆ.
ಊರಿನ ಪ್ರಭಾವಿ ಕುಟುಂಬದ ಸದಸ್ಯರು ಈ ಕೃತ್ಯ ಎಸಗಿದ್ದಾರೆ ಎಂಬ ಆರೋಪಗಳು ಪ್ರಬಲವಾಗಿ ಕೇಳಿಬರುತ್ತಿರುವ ಹೊತ್ತಿನಲ್ಲಿ, ಅದರ ಕುರಿತು ವಸ್ತುನಿಷ್ಠ ವರದಿ ಮಾಡಿದ ಹಲವು ಸ್ವತಂತ್ರ ಮಾಧ್ಯಮಗಳು ಮತ್ತು ಯೂಟ್ಯೂಬರ್‌ಗಳ ಮೇಲೆ ಕೋರ್ಟ್ ಮೂಲಕ ನಿರ್ಬಂಧ ಹೇರಲಾಗುತ್ತಿದೆ. ಅದೇ ಪ್ರಭಾವಿ ಕುಟುಂಬದ ಕಾನೂನು ತಂಡವು, ಈದಿನ.ಕಾಮ್, ಕುಡ್ಲ ರಾಂಪ್ ಪೇಜ್, ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮಟ್ಟಣನವರ್ ಸೇರಿದಂತೆ ಹಲವರ ವಿರುದ್ಧ ಕೋರ್ಟ್‌ನಿಂದ ‘ಬ್ಲಾಕೆಂಟ್’ ಆದೇಶದ ಮೂಲಕ ವಿಡಿಯೊ ಪ್ರಕಟಿಸದಂತೆ ತಡೆ ತಂದಿದ್ದರು.
ಈದಿನ.ಕಾಮ್ ಸೇರಿದಂತೆ ಹಲವು ಚಾನೆಲ್‌ಗಳ ತಡೆಗೆ ಕೋರ್ಟ್ ಯೂಟ್ಯೂಬ್ ಸಂಸ್ಥೆಗೆ ಆದೇಶ ನೀಡಿದ್ದು, ಈ ಬೆಳವಣಿಗೆಯನ್ನು ಹಲವರು ಖಂಡಿಸಿದ್ದಾರೆ. ಆರೋಪಿತ ‘ಪ್ರಭಾವಿ ಕುಟುಂಬ’ವು ಕಾನೂನುನಿನ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಕಿಡಿಕಾರಿದ್ದಾರೆ. ಭಾರತೀಯ ಸಂವಿಧಾನದ 19(1)(ಎ) ವಿಧಿಯ ಅಡಿಯಲ್ಲಿ ಬರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಅಸಮಾಧಾನ ಹೊರಹಾಕಿದ್ದಾರೆ.