ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನ ಮತ್ತು ಅದನ್ನು ನಡೆಸುತ್ತಿರುವ ಕುಟುಂಬದ ವಿರುದ್ಧ ಯಾವುದೇ ‘ಮಾನಹಾನಿಕರ ವಿಷಯವನ್ನು’ ಪ್ರಕಟಿಸದಂತೆ ವಿವಿಧ ಮಾಧ್ಯಮ ಸಂಸ್ಥೆಗಳು ಮತ್ತು ಯೂಟ್ಯೂಬ್ ಚಾನೆಲ್‌ಗಳಿಗೆ ನಿರ್ಬಂಧ ವಿಧಿಸಿರುವ ಬೆಂಗಳೂರು ನ್ಯಾಯಾಲಯದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ರಜೆ ಅವಧಿಯ ಅರ್ಜಿ ಸಲ್ಲಿಸಲಾಗಿದೆ ಎಂದು livelaw.in ವರದಿ ಮಾಡಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಕುಮಾರ್ ಡಿ ವಿರುದ್ಧ ಮಾಧ್ಯಮ ಸಂಸ್ಥೆಗಳು ಮತ್ತು ಯೂಟ್ಯೂಬ್ ಚಾನೆಲ್‌ಗಳು ಯಾವುದೇ ಅವಹೇಳನಕಾರಿ ವಿಷಯವನ್ನು ಪ್ರಕಟಿಸುವುದು ಮತ್ತು ಪ್ರಸಾರ ಮಾಡುವುದನ್ನು ನಿರ್ಬಂಧಿಸಿದ ಬೆಂಗಳೂರು ನಗರದ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶದ ವಿರುದ್ಧ ‘ಥರ್ಡ್ ಐ ಯೂಟ್ಯೂಬ್ ಚಾನೆಲ್’ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ ಎಂದು barandbench.com ವರದಿ ಹೇಳಿದೆ.
ನೂರಾರು ಹೆಣಗಳನ್ನು ಹೂತು ಹಾಕಿದ್ದೇನೆ ಎಂದು ವ್ಯಕ್ತಿಯೊಬ್ಬರು ನೀಡಿರುವ ದೂರು ಮತ್ತು ಅದಕ್ಕೆ ಸಂಬಂಧಿಸಿದ ಇತರ ಪ್ರಕರಣಗಳ ತನಿಖೆಗೆ ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ. ಬೆಂಗಳೂರಿನ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶವು ಎಸ್‌ಐಟಿ ತನಿಖೆಗೆ ನೇರವಾಗಿ ಅಡ್ಡಿಪಡಿಸುತ್ತದೆ ಎಂದು ಥರ್ಡ್ ಐ ಯೂಟ್ಯೂಬ್ ತನ್ನ ಅರ್ಜಿಯಲ್ಲಿ ಪ್ರತಿಪಾದಿಸಿದೆ. ಅಲ್ಲದೆ, “ಇದು ವಾಕ್ ಮತ್ತು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ನೇರ ದಾಳಿಯಾಗಿದೆ” ಎಂದು ಅರ್ಜಿಯಲ್ಲಿ ಹೇಳಿದೆ ಎಂದು livelaw.in ವರದಿ ತಿಳಿಸಿದೆ.
ಮಾಧ್ಯಮಗಳಿಗೆ ತಡೆ ತಂಡ ಅರ್ಜಿದಾರರು ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಹೆಣಗಳನ್ನು ಹೂತು ಹಾಕಿದ ಪ್ರಕರಣದ ಎಫ್‌ಐಆರ್‌ನಲ್ಲಿ ತನ್ನ, ತನ್ನ ಕುಟುಂಬದ ಮತ್ತು ತಮಗೆ ಸಂಬಂಧಿಸಿದ ಯಾವುದೇ ಸಂಸ್ಥೆಗಳ ವಿರುದ್ದ ಆರೋಪಗಳಿಲ್ಲ ಎಂದಿದ್ದಾರೆ. ಆದರೆ, ಎಫ್‌ಐಆರ್‌ನಲ್ಲಿ ಎರಡು ದೂರುಗಳನ್ನು ಸೇರಿಸಲಾಗಿದೆ. ಇವು ದೇವಾಲಯದ ಆಡಳಿತದ ವಿರುದ್ದ ಆರೋಪ ಹೊರಿಸಿವೆ ಮತ್ತು ಅರ್ಜಿದಾರರನ್ನು ಹೆಸರಿಸಿವೆ ಎಂದು ಥರ್ಡ್ ಐ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ವಿವರಿಸಿದೆ.
ಅರ್ಜಿದಾರರು 8,842 ಯುಆರ್‌ಎಲ್‌ಗಳನ್ನು ಅಳಿಸಲು ಕೋರಿದ್ದರು. ಬೆಂಗಳೂರು ನ್ಯಾಯಾಲಯವು ಅವರು ಅರ್ಜಿ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಕಡ್ಡಾಯವಾಗಿ ಯುಆರ್‌ಎಲ್‌ಗಳನ್ನು ಡಿಲಿಟ್ ಮಾಡುವಂತೆ ‘ಗ್ಯಾಗ್ ಆರ್ಡರ್’ ನೀಡಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಕುಮಾರ್ ಡಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಬೆಂಗಳೂರಿನ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಜುಲೈ 18ರಂದು ಆದೇಶ ನೀಡಿದ್ದು, ಹರ್ಷೇಂದ್ರ ಕುಮಾರ್, ಅವರ ಕುಟುಂಬ ಸದಸ್ಯರು, ಹರ್ಷೇಂದ್ರ ಕುಮಾರ್ ಅವರ ಕುಟುಂಬ ನಡೆಸುತ್ತಿರುವ ಸಂಸ್ಥೆಗಳು ಮತ್ತು ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನದ ವಿರುದ್ಧ ಯಾವುದೇ ಮಾನನಷ್ಟಕರ ವಿಷಯ ಮತ್ತು ಮಾಹಿತಿಯನ್ನು ಯೂಟ್ಯೂಬ್ ಚಾನೆಲ್‌ಗಳು ಸೇರಿದಂತೆ ಡಿಜಿಟಲ್ ಮಾಧ್ಯಮ, ಎಲ್ಲಾ ಸಾಮಾಜಿಕ ಮಾಧ್ಯಮ ಅಥವಾ ಯಾವುದೇ ರೀತಿಯ ಮುದ್ರಣ ಮಾಧ್ಯಮಗಳಲ್ಲಿ ಪ್ರಕಟಿಸುವುದು, ಪ್ರಸಾರ ಮಾಡುವುದು, ಫಾರ್ವರ್ಡ್ ಮಾಡುವುದು, ಅಪ್‌ಲೋಡ್ ಮಾಡುವುದು, ರವಾನಿಸುವುದು ಮತ್ತು ಪ್ರಸಾರ ಮಾಡುವುದನ್ನು ಮುಂದಿನ ವಿಚಾರಣೆಯವರೆಗೆ ನಿರ್ಬಂಧಿಸಿ ತಡೆಯಾಜ್ಞೆ ಹೊರಡಿಸಿದೆ ಎಂದು livelaw.in ವರದಿ ಮಾಡಿದೆ.