ಯೆಮೆನ್‌ನಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಮರಣದಂಡನೆ ರದ್ದತಿಗೆ ಭಾರತ ಸರ್ಕಾರ ಸೇರಿದಂತೆ ಆಕೆಯ ಕುಟುಂಬ ಶತಾಯಗತಾಯ ಪ್ರಯತ್ನಿಸುತ್ತಿದೆ. ಈ ನಡುವೆ ಯೆಮೆನ್‌ನಲ್ಲಿ ತೀವ್ರ ರಾಜತಾಂತ್ರಿಕ ಪ್ರಯತ್ನದ ನಂತರ ಧರ್ಮ ಗುರು ಕೆಎ ಪೌಲ್ ಗೆಲುವು ಸಾಧಿಸಿದ್ದಾರೆ ಎನ್ನಲಾಗಿದೆ. ಭಾರತೀಯ ನರ್ಸ್ ನಿಮಿಷಾಳ ಮರಣದಂಡನೆ ರದ್ದುಗೊಂಡಿದೆ ಎಂದು ಕೆಎ ಪೌಲ್ ಹೇಳಿದ್ದಾರೆ.
ನವದೆಹಲಿ, ಜುಲೈ 22: 38 ವರ್ಷದ ಭಾರತೀಯ ಪ್ರಜೆಯಾದ ಕೇರಳದ ನರ್ಸ್ ನಿಮಿಷಾ ಪ್ರಿಯಾಳ ಮರಣದಂಡನೆಯನ್ನು ಜುಲೈ 16ರಂದು ನಿಗದಿಪಡಿಸಲಾಗಿತ್ತು. ಆದರೆ, ಭಾರತೀಯ ಅಧಿಕಾರಿಗಳ ಹಸ್ತಕ್ಷೇಪದ ನಂತರ ಅದನ್ನು ಮುಂದೂಡಲಾಯಿತು. ಆಕೆ ಪ್ರಸ್ತುತ ಇರಾನ್ ಬೆಂಬಲಿತ ಹೌತಿಗಳ ನಿಯಂತ್ರಣದಲ್ಲಿರುವ ಯೆಮೆನ್ ರಾಜಧಾನಿ ಸನಾದಲ್ಲಿರುವ ಜೈಲಿನಲ್ಲಿದ್ದಾರೆ. ಈ ಪ್ರಕರಣದ ಪ್ರಮುಖ ರಾಜತಾಂತ್ರಿಕ ಬೆಳವಣಿಗೆಯಲ್ಲಿ, ಯೆಮೆನ್‌ನಲ್ಲಿ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ವಿಧಿಸಲಾದ ಮರಣದಂಡನೆಯನ್ನು ಯೆಮೆನ್ ಮತ್ತು ಭಾರತೀಯ ನಾಯಕರ ವ್ಯಾಪಕ ಪ್ರಯತ್ನದ ನಂತರ ರದ್ದುಗೊಳಿಸಲಾಗಿದೆ ಎಂದು ಧರ್ಮ ಗುರು ಡಾ. ಕೆಎ ಪೌಲ್ ಮಂಗಳವಾರ ರಾತ್ರಿ (ಸ್ಥಳೀಯ ಸಮಯ) ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
ಯೆಮೆನ್ ಮತ್ತು ಭಾರತೀಯ ನಾಯಕರ ವ್ಯಾಪಕ ಪ್ರಯತ್ನಗಳ ನಂತರ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ರದ್ದುಗೊಳಿಸಲಾಗಿದೆ ಎಂದು ಜಾಗತಿಕ ಶಾಂತಿ ಉಪಕ್ರಮದ ಸಂಸ್ಥಾಪಕ ಡಾ. ಕೆ.ಎ. ಪೌಲ್ ಮಂಗಳವಾರ ಯೆಮೆನ್‌ನ ಸನಾದಿಂದ ವೀಡಿಯೊ ಸಂದೇಶದಲ್ಲಿ ಹೇಳಿಕೊಂಡಿದ್ದಾರೆ. ಇದರಲ್ಲಿ ಡಾ. ಪೌಲ್ ಯೆಮೆನ್ ನಾಯಕರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಕಳೆದ 10 ದಿನಗಳಿಂದ ಹಗಲಿರುಳು ಪ್ರಯತ್ನ ನಡೆಸಿದ ನಾಯಕರ ಪರಿಶ್ರಮಕ್ಕೆ ಫಲ ಸಿಕ್ಕಿದೆ ಎಂದಿರುವ ಡಾ. ಪೌಲ್, “ನಿಮಿಷಾ ಪ್ರಿಯಾ ಅವರ ಗಲ್ಲು ಶಿಕ್ಷೆ ರದ್ದಾಗಿದ್ದು, ಇದನ್ನು ಯಶಸ್ವಿಗೊಳಿಸಲು ಭಾಗಿಯಾಗಿರುವ ಎಲ್ಲಾ ನಾಯಕರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ದೇವರ ದಯೆಯಿಂದ, ಅವರನ್ನು ಬಿಡುಗಡೆ ಮಾಡಿ ಭಾರತಕ್ಕೆ ಕರೆದೊಯ್ಯಲಾಗುವುದು. ನಿಮ್ಮ ರಾಜತಾಂತ್ರಿಕರನ್ನು ಕಳುಹಿಸಿದ್ದಕ್ಕೆ ಮತ್ತು ನಿಮಿಷಾ ಅವರನ್ನು ವೃತ್ತಿಪರವಾಗಿ, ಸುರಕ್ಷಿತವಾಗಿ ಕರೆದೊಯ್ಯಲು ತಯಾರಿ ನಡೆಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ಹೇಳಿದ್ದಾರೆ.
ನಿಮಿಷಾ ಪ್ರಿಯಾಳನ್ನು ಜುಲೈ 16ರಂದು ಗಲ್ಲಿಗೇರಿಸಲು ನಿರ್ಧರಿಸಲಾಗಿತ್ತು. ಆದರೆ, ಆಕೆಯ ಕುಟುಂಬದೊಂದಿಗೆ ಸಂಭಾವ್ಯ ಒಪ್ಪಂದಕ್ಕೆ ಹೆಚ್ಚಿನ ಸಮಯವನ್ನು ಪಡೆಯಲು ಭಾರತವು ಒತ್ತಡ ಹೇರಿದ ನಂತರ ಯೆಮೆನ್ ಅಧಿಕಾರಿಗಳು ಆಕೆಯ ಮರಣದಂಡನೆಯನ್ನು ಮುಂದೂಡಿದರು.
ನಿಮಿಷಾ ಪ್ರಿಯಾಳ ತಾಯಿ ಪ್ರೇಮಕುಮಾರಿ ಕಳೆದ ವರ್ಷ ತನ್ನ ಮಗಳ ಬಿಡುಗಡೆಗಾಗಿ ಮನವಿ ಮಾಡಲು ಯೆಮೆನ್‌ಗೆ ಪ್ರಯಾಣ ಬೆಳೆಸಿದರು. ಕೇರಳದ ಸುನ್ನಿ ಧರ್ಮಗುರು ಒಬ್ಬರು ಮಧ್ಯಪ್ರವೇಶಕ್ಕಾಗಿ ಪ್ರಮುಖ ಯೆಮೆನ್ ಧಾರ್ಮಿಕ ಗುರುಗಳನ್ನು ಸಂಪರ್ಕಿಸಿದರು. ಈ ಪ್ರಯತ್ನಗಳ ಹೊರತಾಗಿಯೂ, ಯೆಮೆನ್‌ನಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಔಪಚಾರಿಕ ರಾಜತಾಂತ್ರಿಕ ಸಂಬಂಧಗಳ ಕೊರತೆಯಿಂದಾಗಿ ಅಡೆತಡೆಗಳು ಮುಂದುವರೆದಿವೆ.