
ಮಂಗಳೂರು: ಸೈಬರ್ ಕ್ರೈಂ ಪೊಲೀಸ್ ಎಂದು ಕರೆ ಮಾಡಿ ಬೆದರಿಸಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಂಗಳೂರು ಸೆನ್ ಪೊಲೀಸರು ಆರೋಪಿ ತುಮಕೂರಿನ ಅರುಣ್ ಟಿ.(27)ನನ್ನು ಬಂಧಿಸಿದ್ದಾರೆ.
ಈತನ ವಿರುದ್ಧ ಜು.15ರಂದು ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಫೇಸ್‌ಬುಕ್ ಖಾತೆ, ಕನ್ನಡ ಮಾಡೆಲ್ಸ್, ಟ್ರೋಲ್ ಮಾಸ್ಟರ್, ಟ್ರೋಲ್ ಬಸ್ಯಾ ಇತ್ಯಾದಿ ಪೇಜ್‌ಗಳಲ್ಲಿ ಕಮೆಂಟ್ಸ್ ಹಾಕಿರುವ ವ್ಯಕ್ತಿಗಳಿಗೆ ಕರೆಮಾಡಿ ತನ್ನನ್ನು ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಅಧಿಕಾರಿ ಸುಶೀಲ್ ಕುಮಾರ್ ಎಂದು ಪರಿಚಯಿಸಿಕೊಳ್ಳುತ್ತಿದ್ದ. “ನಿಮ್ಮ ಮೇಲೆ ದೂರುಗಳು ಬಂದಿವೆ. ನಿಮ್ಮನ್ನು ಅರೆಸ್ಟ್ ಮಾಡುತ್ತೇನೆ’ ಎಂದು ಹೆದರಿಸಿ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದ. ಈತನ ಮೇಲೆ ಸೈಬರ್ ಪೊರ್ಟಲ್‌ನಲ್ಲಿ ಒಟ್ಟು 11 ದೂರುಗಳು ದಾಖಲಾಗಿವೆ. ಆರೋಪಿಯನ್ನು ತುಮಕೂರಿನಲ್ಲಿ ಬಂಧಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಸೈಬರ್ ಪೊಲೀಸ್ ಅಧಿಕಾರಿ ಹೆಸರಿನಲ್ಲಿ ವಂಚನೆ : ಜು. 2ರಂದು ಅಪರಿಚಿತ ವ್ಯಕ್ತಿ ದೂರುದಾರರಿಗೆ ಕರೆ ಮಾಡಿ ಆತನನ್ನು ಬೆಂಗಳೂರು ಸೈಬರ್ ಪೊಲೀಸ್ ಆಫೀಸರ್ ಸುಶೀಲ್ ಕುಮಾರ್ ಎಂದು ಪರಿಚಯಿಸಿಕೊಂಡು “ನಿಮ್ಮ ಮೇಲೆ ಎಫ್ಐಆರ್ ದಾಖಲಾಗಿ ಸೈಬರ್ ಠಾಣೆಯಲ್ಲಿ ತನಿಖೆಯಲ್ಲಿದೆ. ಕೇಸ್ ತೆಗೆಯಬೇಕಾದರೆ ಹಣ ನೀಡಬೇಕು. ಗೂಗಲ್ ಪೇ ಮಾಡಬೇಕು’ ಎಂದು ತಿಳಿಸಿದ. ಇದರಿಂದ ಭಯಗೊಂಡ ದೂರುದಾರರು ಅವರ ಬಳಿ ಇದ್ದ 2,000 ರೂ.ಗಳನ್ನು ತನ್ನ ಪರಿಚಿತರಿಗೆ ನೀಡಿ ಅವರಿಂದ ಗೂಗಲ್ ಪೇ ಮಾಡಿಸಿದರು. ಅನಂತರ ಆರೋಪಿಗಳು ಪದೇ ಪದೇ ಕರೆ ಮಾಡಿ ಬೆದರಿಸಿದ್ದರು. ಹಾಗಾಗಿ ದೂರುದಾರರು ಜು.2ರಿಂದ ಜು.6ರವರೆಗೆ ಹಂತಹಂತವಾಗಿ ಒಟ್ಟು 1.23 ಲ.ರೂ.ಗಳನ್ನು ವರ್ಗಾಯಿಸಿದ್ದಾರೆ. ಈ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.