ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ಕೊಲೆ ಪ್ರಕರಣದಲ್ಲಿ ಯೆಮೆನ್ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಆಕೆಯ ಗಲ್ಲು ಶಿಕ್ಷೆಯನ್ನು ತಡೆಯಲು ಇರುವ ಏಕೈಕ ಮಾರ್ಗವೆಂದರೆ ಅದು ಬ್ಲಡ್ ಮನಿ (ಮೃತನ ಕುಟುಂಬದವರಿಗೆ ಆರೋಪಿಯಿಂದ ಆರ್ಥಿಕ ಸಹಾಯ) ಎಂದು ಹೇಳಲಾಗಿತ್ತು. ಆದರೆ, ಬ್ಲಡ್ ಮನಿಯನ್ನು ಮೃತ ವ್ಯಕ್ತಿ ತಲಾಲ್ ಅವರ ಸೋದರ ನಿರಾಕರಿಸಿದ್ದಾರೆ. ಇದರಿಂದ ನಿಮಿಷಾ ಪ್ರಿಯಾ ಭವಿಷ್ಯ ಮತ್ತೆ ತೂಗುಗತ್ತಿಯ ಮೇಲೆ ನಿಂತಿದೆ.
ನವದೆಹಲಿ, ಜುಲೈ 16: ಭಾರತದ ಕೇರಳದ ನರ್ಸ್ ನಿಮಿಷಾ ಪ್ರಿಯಾ ಯೆಮೆನ್‌ನಲ್ಲಿ ತನ್ನ ಬ್ಯುಸಿನೆಸ್ ಪಾರ್ಟನರ್ ಕೊಲೆಯ ಅಪರಾಧದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ. ಆದರೆ, ಆ ಪ್ರಕರಣದಲ್ಲಿ ಜುಲೈ 16 ಅಂದರೆ ಇಂದು ಗಲ್ಲಿಗೇರಬೇಕಾಗಿದ್ದ ಆಕೆಯ ಮರಣದಂಡನೆಯನ್ನು ಮುಂದೂಡಲಾಗಿತ್ತು. ಬ್ಲಡ್ ಮನಿ ಮೂಲಕ ಈ ಸಮಸ್ಯೆ ಇತ್ಯರ್ಥ ಮಾಡಿಕೊಂಡರೆ ಆಕೆಗೆ ಗಲ್ಲು ಶಿಕ್ಷೆಯನ್ನು ತಪ್ಪಿಸಲು ಕಾನೂನಿನಲ್ಲಿ ಅವಕಾಶವಿತ್ತು. ಆದರೆ, ಆ ಆಯ್ಕೆಯೂ ನಿಮಿಷಾಳಿಗೆ ಇಲ್ಲದಂತಾಗಿದೆ. ಏಕೆಂದರೆ ಮೃತ ವ್ಯಕ್ತಿ ತಲಾಲ್ ಅವರ ಸೋದರ ಬ್ಲಡ್ ಮನಿಗೆ ತಮ್ಮ ಒಪ್ಪಿಗೆಯಿಲ್ಲ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನಿಮಿಷಾ ಪ್ರಿಯಾ ನೇಣಿಗೇರುವುದು ಬಹುತೇಕ ಖಚಿತವಾಗಿದೆ.
ಯೆಮೆನ್‌ನಲ್ಲಿ ನಿಗದಿಯಾಗಿದ್ದ ಮರಣದಂಡನೆಯನ್ನು ಮುಂದೂಡಿದ ನಂತರ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ತಾತ್ಕಾಲಿಕ ಪರಿಹಾರ ಸಿಕ್ಕಿತ್ತು. ಆದರೆ ನಿಮಿಷಾ ಹತ್ಯೆ ಮಾಡಿದ್ದ ಯೆಮೆನ್ ನಾಗರಿಕ ತಲಾಲ್ ಅಬ್ದೋ ಮಹ್ದಿ ಅವರ ಸಹೋದರ ಇತ್ತೀಚೆಗೆ ನೀಡಿದ ಹೇಳಿಕೆಯ ನಂತರ ಅವರ ಭವಿಷ್ಯದ ಬಗ್ಗೆ ಕಳವಳಗಳು ಹೆಚ್ಚಾಗಿವೆ. ನಿಮಿಷಾಳ ಮರಣದಂಡನೆಯನ್ನು ವಜಾಗೊಳಿಸಲು ಭಾರತದಿಂದಲೂ ಸಾಕಷ್ಟು ಪ್ರಯತ್ನಗಳಾಗುತ್ತಿವೆ. ಆದರೆ, ಯೆಮೆನ್‌ನಲ್ಲಿ ಬಹಳ ಕಠಿಣ ಕಾನೂನು ಇರುವುದರಿಂದ ಬೇರೆ ಯಾವುದೇ ಹಸ್ತಕ್ಷೇಪವೂ ಅಲ್ಲಿ ಸಹಾಯ ಮಾಡುತ್ತಿಲ್ಲ.
ಮರಣದಂಡನೆಯನ್ನು ಮುಂದೂಡುವುದನ್ನು ಮಹ್ದಿ ಅವರ ಸಹೋದರ ಅಬ್ದೆಲ್‌ಫತ್ತಾ ಮಹ್ದಿ ಟೀಕಿಸಿದ್ದಾರೆ. ಮೃತರ ಕುಟುಂಬದಿಂದ ನಿಮಿಷಾಗೆ ಕ್ಷಮೆ ಪಡೆಯುವ ಪ್ರಯತ್ನಗಳನ್ನು ಮತ್ತು ಭಾರತ ಸರ್ಕಾರ ಸೇರಿದಂತೆ ವಿವಿಧ ಪಕ್ಷಗಳಿಂದ ಮಧ್ಯಸ್ಥಿಕೆಯ ಮಾತುಕತೆಗಳನ್ನು ಅವರು ಬಲವಾಗಿ ತಿರಸ್ಕರಿಸಿದ್ದಾರೆ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಅಬ್ದುಲ್ ಫತ್ತಾಹ್, ಇಸ್ಲಾಮಿಕ್ ಶರಿಯಾ ಕಾನೂನಿನ ಪ್ರಕಾರ ಕ್ವಿಸಾಸ್ (ಪ್ರತೀಕಾರ)ಗಾಗಿ ನಮ್ಮ ಬೇಡಿಕೆ ದೃಢವಾಗಿದೆ. ಮರಣದಂಡನೆ ಜಾರಿಯಾಗುವವರೆಗೆ ಕಾನೂನು ಕ್ರಮಗಳನ್ನು ಮುಂದುವರಿಸುತ್ತೇವೆ. ಮರಣದಂಡನೆಯನ್ನು ಮುಂದೂಡಿದ ಮಾತ್ರಕ್ಕೆ ಆಕೆ ಗಲ್ಲಿಗೇರುವುದು ತಪ್ಪುವುದಿಲ್ಲ ಎಂದು ಹೇಳಿದ್ದಾರೆ.
ಮಂಗಳವಾರ ಕೇರಳದ ಮುಸ್ಲಿಂ ಧರ್ಮಗುರುವೊಬ್ಬರ ಮಧ್ಯಸ್ಥಿಕೆಯ ನಂತರ ಯೆಮೆನ್ ಅಧಿಕಾರಿಗಳು ಇಂದು ನಿಗದಿಪಡಿಸಲಾಗಿದ್ದ ನಿಮಿಷಾ ಅವರ ಮರಣದಂಡನೆಯನ್ನು ಅನಿರ್ದಿಷ್ಟ ದಿನಾಂಕಕ್ಕೆ ಮುಂದೂಡಿದ ನಂತರ ಈ ಹೇಳಿಕೆಗಳು ಬಂದಿವೆ. “ಇಂದು ಏನು ನಡೆಯುತ್ತಿದೆ ಎಂಬುದು ನಮಗೂ ಅಚ್ಚರಿ ತಂದಿದೆ. ಮಧ್ಯಸ್ಥಿಕೆ ಪ್ರಯತ್ನಗಳ ಬಗ್ಗೆ ಈ ಎಲ್ಲಾ ಮಾತುಗಳು ಹೊಸದಲ್ಲ. ಇಷ್ಟು ವರ್ಷಗಳ ನಮ್ಮ ಕಾನೂನು ಹೋರಾಟದಲ್ಲಿ ರಹಸ್ಯ ಪ್ರಯತ್ನಗಳು ಮತ್ತು ಮಧ್ಯಸ್ಥಿಕೆಗೆ ಗಂಭೀರ ಪ್ರಯತ್ನಗಳು ನಡೆದಿವೆ. ಆದರೆ ನಾವು ಎದುರಿಸಿದ ಒತ್ತಡಗಳು ನಮ್ಮನ್ನು ಬದಲಾಯಿಸಿಲ್ಲ. ನಮ್ಮ ಬೇಡಿಕೆ ಸ್ಪಷ್ಟವಾಗಿದೆ. ಕ್ವಿಸಾಸ್ (ಪ್ರತೀಕಾರ) ಬಿಟ್ಟು ಬೇರೇನೂ ಇಲ್ಲ” ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಯೆಮೆನ್ ಕಾನೂನಿನಡಿಯಲ್ಲಿ ಮೃತರ ಕುಟುಂಬದಿಂದ ಅಪರಾಧಿ ಕ್ಷಮಾದಾನವನ್ನು ಪಡೆಯಬಹುದು. ಈ ಸಂದರ್ಭದಲ್ಲಿ ನಿಮಿಷಾ ಮನವಿ ಮಾಡಿದರೆ ಮೃತ ವ್ಯಕ್ತಿ ತಲಾಲ್ ಅಬ್ದೋ ಮೆಹದಿ ಅವರ ಕುಟುಂಬವು ನಿಮಿಷಾ ಅವರನ್ನು ಕ್ಷಮಿಸುವ ಅಧಿಕಾರವನ್ನು ಹೊಂದಿದೆ. ಆಗ ಮಾತ್ರ ಅವರ ಗಲ್ಲು ಶಿಕ್ಷೆ ರದ್ದಾಗುವ ಸಾಧ್ಯತೆ ಇರುತ್ತದೆ. ಆದರೆ, ಮೃತನ ಕುಟುಂಬ ಕ್ಷಮೆಗೆ ಅಥವಾ ಬ್ಲಡ್ ಮನಿ (ಆರ್ಥಿಕ ಸಹಾಯ)ಗೆ ಒಪ್ಪಿಲ್ಲ. ಕೇರಳ ಮೂಲದ ಬಿಲಿಯನೇರ್ ಎಂ.ಎ. ಯೂಸುಫ್ ಅಲಿ ನಿಮಿಷಾಗೆ ಅಗತ್ಯವಿರುವ ಯಾವುದೇ ಹಣಕಾಸಿನ ಸಹಾಯವನ್ನು ನೀಡಲು ಇಚ್ಛೆ ವ್ಯಕ್ತಪಡಿಸಿದ್ದರು. ಭಾರತ ಸರ್ಕಾರ ಕೂಡ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ನಿಮಿಷಾಳ ಬಿಡುಗಡೆಗೆ ಪ್ರಯತ್ನಿಸುತ್ತಿದೆ.