
ಮಂಗಳೂರು ತನ್ನ ಗಂಡನ ದುಷ್ಪ್ರೇರಣೆಯಂತೆ ಪೊಲೀಸ್ ಕಾನ್ಸ್‌ಟೇಬಲ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಮಹಿಳೆಯ ಗಂಡ ಮತ್ತು ಕಾನ್ಸ್ಟೇಬಲ್ನನ್ನು ನಗರದ ಕಂಕನಾಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಜುಲೈ 15 ರಂದು ಕಂಕನಾಡಿ ನಗರ ಠಾಣಾ ವ್ಯಾಪ್ತಿಯ ಸಂತ್ರಸ್ಥ ಮಹಿಳೆಯೊರ್ವರು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾವೂರು ಠಾಣೆಯ ಕಾನ್ಸ್‌ಟೇಬಲ್ ಚಂದ್ರನಾಯ್ಕ್ ಮತ್ತು ಮಹಿಳೆಯ ಗಂಡನನ್ನು ಬಂಧಿಸಿದ್ದಾರೆ.
ತನ್ನ ಪತಿಯು ಹಣಕ್ಕಾಗಿ ಒತ್ತಾಯಪೂರ್ವಕವಾಗಿ ತನ್ನನ್ನು ಬೇರೊಬ್ಬ ಪುರುಷನೊಂದಿಗೆ ದೈಹಿಕ ಸಂಪರ್ಕ ನಡೆಸುವಂತೆ ಮಾಡಿ, ಅದರ ವಿಡಿಯೋವನ್ನು ಚಿತ್ರೀಕರಿಸಿದ್ದಲ್ಲದ್ದೇ ಇತರರೊಂದಿಗೆ ದೈಹಿಕ ಸಂಪರ್ಕ ನಡೆಸುವಂತೆ, ಇಲ್ಲವಾದಲ್ಲಿ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಡುವುದಾಗಿ ಬೆದರಿಸುತ್ತಿದ್ದ ಎಂದು ಇದರಿಂದ ತುಂಬಾ ನೊಂದಿದ್ದ ಸಂತ್ರಸ್ತೆ ಪೊಲೀಸನ ಸಂಪರ್ಕ ಮಾಡಿದ್ದಾರೆ. ಬೇರೆಯವರ ಮೂಲಕ ಕಾವೂರು ಪೊಲೀಸ್ ಚಂದ್ರನಾಯಕ್ ಪರಿಚಯವಾಗಿದೆ. ವಿಡಿಯೋ ಡಿಲೀಟ್ ಮಾಡಿಸುವಂತೆ ಚಂದ್ರನಾಯಕನಿಗೆ ಸಂತ್ರಸ್ತೆ ಮನವಿ ಮಾಡಿದ್ದರು. ಆ ಮೂಲಕ ಚಂದ್ರನಾಯಕ್ ತನ್ನ ಪೊಲೀಸ್ ಪವರ್ ಬಳಸಿ ವಿಡಿಯೋವನ್ನು ಡಿಲೀಟ್ ಮಾಡಿಸಿದ್ದ. ಬಳಿಕ ದಂಪತಿ ನಡುವೆ ರಾಜಿ ಮಾಡಿಸಿದ್ದ. ಆದರೆ ಈ ವೇಳೆ ಪೊಲೀಸಪ್ಪ ಸಂತ್ರಸ್ತೆ ಪತಿ ಬಳಿ ವಿಶ್ವಾಸದಿಂದ ಇದ್ದ. ಪತಿಯ ಸಹಕಾರ ಪಡೆದು ಮಹಿಳೆಗೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಚಂದ್ರನಾಯಕ್ ಪದೇ ಪದೇ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಇತ್ತ ಸಂತ್ರಸ್ತೆ ಪತಿಗೆ ಸಂಪೂರ್ಣ ಬೆಂಬಲ ನೀಡಿ ಹಳೇ ಚಾಳಿ ಮುಂದುವರೆಸಲು ಕಾನ್ಸ್‌ಟೇಬಲ್ ಸಹಕರಿಸಿದ್ದ. ಇದರಿಂದ ದಾರಿ ಕಾಣದೆ ಸಂತ್ರಸ್ತೆ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮೊರೆ ಹೋಗಿದ್ದರು. ಇದೀಗ ಇಬ್ಬರ ಬಂಧನವಾಗಿದೆ.