
ಜೂನ್ 25 ರಂದು ಬಾಹ್ಯಾಕಾಶಕ್ಕೆ ಹಾರಿದ್ದ ಭಾರತದ ಶುಭಾಂಶು ಶುಕ್ಲಾ (Shubhanshu Shukla) ಸೇರಿ ನಾಲ್ವರು ಗಗನಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ ಲ್ಯಾಂಡ್ ಆಗಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಕ್ಯಾಲಿಫೋರ್ನಿಯಾದ ಕರಾವಳಿಗೆ ಸ್ಪ್ಲ್ಯಾಶ್ಡೌನ್ (Splashdown) ಆಗಿದ್ದಾರೆ.
ಶುಭಾಂಶು ಶುಕ್ಲಾ, ಅಮೆರಿಕದ ಪೆಗ್ಗಿ ವಿಟ್ಸನ್, ಪೋಲೆಂಡ್‌ನ ಉಜಾಂನ್ಸಿ, ಹಂಗೇರಿಯ ಟಿಬೊರ್ ಕಾಪುಗೆ ಅವರು ಆಕ್ಸಿಯೋಂ-4 ಮಿಷನ್ (Axiom-4) ಭಾಗವಾಗಿ ಐಎಸ್ಎಸ್ ತೆರಳಿದ್ದರು. ಜೂನ್ 25ರ ಬುಧವಾರ ಅಂತರಿಕ್ಷಯಾನ ಹೊರಟಿದ್ದ ಯಾತ್ರಿಗಳು, 26ರಂದು ಬಾಹ್ಯಾಕಾಶ ನಿಲ್ದಾಣ ತಲುಪಿದ್ದರು.

ಪುನಶ್ಚೇತನ ಕಾರ್ಯಕ್ರಮ..!
ಲ್ಯಾಂಡಿಂಗ್ ಬಳಿಕ ಪುನಶ್ಚೇತನ ಕಾರ್ಯಕ್ರಮ ಇದೆ. ಭೂಮಿಯ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಲು ಅನುವಾಗುವಂತೆ 7 ದಿನಗಳ ಪುನಶ್ಚತನಕ್ಕೆ ಒಳಪಡಲಿದ್ದಾರೆ. ಒಟ್ಟಾರೆ ಬಾಹ್ಯಾಕಾಶ ಚರಿತ್ರೆಯಲ್ಲಿ ಭಾರತದ ಹೊಸ ಮೈಲಿಗಲ್ಲು ಸ್ಥಾಪಿಸಿ ಆಗಿದೆ. ಆಗಸದಲ್ಲಿ ಶುಭಾರಂಭ ಅಂತರಿಕ್ಷ ಯಾನ ಅಂತ್ಯವಾಗಿದೆ. ಗಗನದಿಂದ ಭಾರತವನ್ನು ಸಾರೆ ಜಹಾಂಸೆ ಅಚ್ಛಾ ಅಂತ ಶುಕ್ಲಾ ಬಣ್ಣಿಸಿದ್ದರು.
ಭಾರತದ ಪರ ಶುಕ್ಲಾ 7 ಅಧ್ಯಯನ
ಭಾರತದ ಪರವಾಗಿ ಶುಭಾಂಶು ಶುಕ್ಲಾ ಒಟ್ಟು 7 ವಿವಿಧ ಪ್ರಯೋಗ ಮಾಡಿದ್ದಾರೆ. ವಿಶೇಷ ಅಂದರೆ ಶುಕ್ಲಾ ನಡೆಸುವ 7 ಪ್ರಯೋಗಗಳ ಪೈಕಿ ಕರ್ನಾಟಕದ್ದೇ 4 ಪ್ರಯೋಗ ಇದೆ. ಕರ್ನಾಟಕದ ಅಧ್ಯಯನ ಸಂಸ್ಥೆಗಳು ರೂಪಿಸಿರುವ 4 ಪ್ರಯೋಗಗಳನ್ನ ನಡೆಸಿದ್ದಾರೆ. ಜೊತೆಗೆ ದೆಹಲಿಯ 2 ಪ್ರಯೋಗ, ಕೇರಳದ 1 ಪ್ರಯೋಗ ಸಂಬಂಧ ಅಧ್ಯಯನ ನಡೆದಿದೆ.

ಶುಕ್ಲಾ ನಡೆಸಿರುವ ಅಧ್ಯಯನಗಳು..
- ಕಾಳುಗಳ ಮೊಳಕೆ: ಧಾರವಾಡದ ಕೃಷಿ ವಿವಿ, ಐಐಟಿ ಧಾರವಾಡದಿಂದ ಕಾಳುಗಳು ಮೊಳಕೆ ಹೊಡೆಯುವ ಬಗ್ಗೆ ಅಧ್ಯಯನ
- ಗಗನಯಾತ್ರಿಗಳ ಮಸಲ್ ಲಾಸ್: ಬಾಹ್ಯಾಕಾಶದಲ್ಲಿ ಯಾತ್ರಿಗಳ ಮಸಲ್ ಲಾಸ್ ಬಗ್ಗೆ ಬೆಂಗಳೂರಿನ ಬ್ರಿಕ್ ಇನ್ ಸ್ಟೆಮ್ ಸಂಸ್ಥೆ ಅಧ್ಯಯನ
- ಟಾರ್ಡಿಗ್ರೇಡ್: IISC ಯಿಂದ ಕಠಿಣ ಪರಿಸ್ಥಿತಿಯಲ್ಲಿ ಟಾರ್ಡಿಗ್ರೇಡ್ ಸೂಕ್ಷ್ಮಜೀವಿಗಳು ಬದುಕುಳಿಯುವ ಬಗ್ಗೆ ಅಧ್ಯಯನ
ಎಲೆಕ್ಟ್ರಾನಿಕ್ ಡಿಸ್ಪ್ಲೇ: IISC ಬೆಂಗಳೂರಿನಿಂದ ಎಲೆಕ್ಟ್ರಾನಿಕ್ ಡಿಸಪ್ಲೇ ಬಗ್ಗೆ ಅಧ್ಯಯನ - ಖಾದ್ಯ ಸೂಕ್ಷ್ಮ ಪಾಚಿಗಳು: ನವದೆಹಲಿ ICGEBಯ ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ 3 ಆಯ್ದ ಖಾದ್ಯ ಸೂಕ್ಷ್ಮ ಪಾಚಿಗಳ ಬೆಳವಣಿಗೆ ಅಧ್ಯಯನ
- ಸೈನೋಬ್ಯಾಕ್ಟೀರಿಯಾ : ನವದೆಹಲಿ ICGEBಯ ಬಾಹ್ಯಾಕಾಶದಲ್ಲಿ ಎರಡು ವಿಧದ ಸೈನೋಬ್ಯಾಕ್ಟೀರಿಯಾಗಳ ಬೆಳವಣಿಗೆಯ ಅಧ್ಯಯನ
- ಆಹಾರ ಬೆಳೆ ಬೀಜಗಳು: ಕೇರಳದ IISTಯ ಸೂಕ್ಷ್ಮ ಗುರುತ್ವಾಕರ್ಷಣೆಗೆ ಒಗ್ಗಿದ ಅಕ್ಕಿ, ಜೋಳ, ಎಳ್ಳು, ಬದನೆಕಾಯಿ, ಟೊಮೆಟೊ ಬೀಜಗಳ ಅಧ್ಯಯನ