ಉತ್ತರ ಕನ್ನಡದ ಭಟ್ಕಳ ಪಟ್ಟಣಕ್ಕೆ ಬಾಂಬ್ ಸ್ಫೋಟಿಸುವ ಬೆದರಿಕೆ ಇ-ಮೇಲ್ ಬಂದಿತ್ತು. ಕರ್ನಾಟಕ ಮತ್ತು ಕೇರಳ ಪೊಲೀಸರು ಜಂಟಿಯಾಗಿ ನಡೆಸಿದ ತನಿಖೆಯಲ್ಲಿ ಆರೋಪಿ ಅಡಗಿಕೊಂಡಿರುವ ತಾಣ ಗೊತ್ತಾಗಿದೆ. ಆರೋಪಿಯು ಮೈಸೂರು, ಬಳ್ಳಾರಿ, ಕೇರಳದಲ್ಲಿ ಬಾಂಬ್ ಸ್ಫೋಟಿಸುವ ಬೆದರಿಕೆ ಹಾಕಿದ್ದನು. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ.
ಕಾರವಾರ, ಜುಲೈ 13: ಉತ್ತರ ಕನ್ನಡ (Uttar Kannada) ಜಿಲ್ಲೆಯ ಭಟ್ಕಳ ಪಟ್ಟಣವನ್ನು ಸ್ಫೋಟಿಸುವುದಾಗಿ ಇ-ಮೇಲ್ ಸಂದೇಶ ಬಂದ ಪ್ರಕರಣದ ತನಿಖೆಯನ್ನು ಭಟ್ಕಳ ಮತ್ತು ಕೇರಳ ಪೊಲೀಸರು ಜಂಟಿಯಾಗಿ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆರೋಪಿ ಅಡಗಿಕೊಂಡಿರುವ ತಾಣ ಗೊತ್ತಾಗಿದೆ. ಭಟ್ಕಳ್ ಸ್ಫೋಟಿಸುವುದಾಗಿ ಇ-ಮೇಲ್ ಸಂದೇಶ ಕಳುಹಿಸಿದ್ದ ಆರೋಪಿ ಮೈಸೂರಿನಲ್ಲಿ ಅಡಗಿಕೊಂಡಿದ್ದಾನೆ ಎಂಬುವುದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ
ಮೈಸೂರು, ಬಳ್ಳಾರಿ, ಕೇರಳ ಸೇರಿದಂತೆ ವಿವಿಧಡೆ ಬಾಂಬ್ ಸ್ಫೋಟಿಸುವುದಾಗಿ ಆರೋಪಿ, ಈ ಹಿಂದೆ ಬೆದರಿಕೆ ಸಂದೇಶ ಕಳುಹಿಸಿದ್ದನಂತೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಕೇರಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದು, ಆರೋಪಿ ಅಡಗಿರುವ ಸ್ಥಳ ಗೊತ್ತಾಗಿದೆ.
ಇನ್ನು, ಆರೋಪಿ ಇ-ಮೇಲ್ ಸಂದೇಶವನ್ನು ತಮಿಳುನಾಡಿನ ಕಣ್ಣನ್ ಎಂಬುವರ ಮೊಬೈಲ್ನಿಂದ ಕಳುಹಿಸಿದ್ದಾನೆ. ಹಾಗಿದ್ದರೆ ಆರೋಪಿಗೆ ಕಣ್ಣನ್ ಅವರ ಮೊಬೈಲ್ ಹೇಗೆ ಸಿಕ್ತು ಎಂಬ ಪ್ರಶ್ನೆ ಹುಟ್ಟಿಕೊಂಡಿದ್ದು, ಪೊಲೀಸರು ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಪೊಲೀಸರು ಸೋಮವಾರ (ಜು.14) ಆರೋಪಿಯನ್ನು ವಶಕ್ಕೆ ಪಡೆದು ಮೈಸೂರಿನಿಂದ ಕಾರವಾರಕ್ಕೆ ಕರೆತಂದು ವಿಚಾರಣೆಗೆ ಒಳಪಡಿಸಲಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ಪ್ರಕರಣದ ತನಿಖಾ ನೇತೃತ್ವ ವಹಿಸಿದ್ದಾರೆ.
ಆರೋಪಿ ಜುಲೈ 10 ರ ಬೆಳಗ್ಗೆ ಎರಡು ಬಾರಿ ಇ-ಮೇಲ್ ಸಂದೇಶವನ್ನು ಕಳುಹಿಸಿದ್ದನು. ಮೊದಲ ಇ-ಮೇಲ್ ಸಂದೇಶದಲ್ಲಿ ‘ವಿ ವಿಲ್ ಪ್ಲಾಂಟ್ ಬಾಂಬ್ ಇನ್ ಭಟ್ಕಳ್ ಟೌನ್’ ಎಂದು ಸಂದೇಶ ಕಳುಹಿಸಿದ್ದನು. ನಂತರ ‘ಆಲ್ ದ ಬಾಂಬ್ ವಿಲ್ ಬ್ಲಾಸ್ಟ್ ಇನ್ 24 ಹಾರ್ಸ್’ ಎಂದು ಸಂದೇಶ ಕಳುಹಿಸಿದ್ದನು. ಈ ಪ್ರಕರಣ ಸಂಬಂಧ ಭಟ್ಕಳ ಶಹರ ಠಾಣೆ ಪಿಎಸ್ ನವೀನ್ ನಾಯ್ಕ ಅವರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು.