ಕೇವಲ ಐದು ಸಾವಿರ ರೂಪಾಯಿಗಾಗಿ ಯುವ ಗಾಯಕನೊಬ್ಬನನ್ನು ಬರ್ಬರವಾಗಿ ಕೊಂದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ತನ್ನದೇ ಆದ ಯೂಟ್ಯೂಬ್ ಚಾನೆಲ್ನಲ್ಲಿ ಹಾಡುಗಳನ್ನು ಕಂಪೋಸ್ ಮಾಡಿ ಪ್ರಕಟಿಸುತ್ತಿದ್ದ ಮಾರುತಿ, ಇತ್ತೀಚೆಗೆ ಜನಪ್ರಿಯತೆಯನ್ನು ಸಂಪಾದಿಸಿದ್ದ. ಆದರೆ, ಇದೀಗ ಜನಮಾನಸದಲ್ಲಿ ಗಾಯಕ ಉಳಿಯುತ್ತಿದ್ದಾನೆ ಎನ್ನುವ ಸಮಯದಲ್ಲಿಯೇ ಆತನ ಜೀವವನ್ನೇ ದುಷ್ಕರ್ಮಿಗಳು ಬಲಿಪಡೆದುಕೊಂಡಿದ್ದಾರೆ.
ಬೆಳಗಾವಿ (ಜುಲೈ.13): ಕೇವಲ ಐದು ಸಾವಿರ ರೂಪಾಯಿಗಾಗಿ ಯುವ ಗಾಯಕನೊಬ್ಬನನ್ನು (Singer) ಬರ್ಬರವಾಗಿ ಕೊಂದಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ರಾಯಬಾಗ ತಾಲೂಕಿನ ಬೂದಿಹಾಳ ಗ್ರಾಮದ ಬಳಿ ನಡೆದಿದೆ. ಮಾರುತಿ ಅಡಿವೆಪ್ಪ ಲಠ್ಠೆ (22) ಹತ್ಯೆಯಾದ ಯುವ ಹಾಡುಗಾರ. ಮಾರುತಿ ತನ್ನ ಸ್ನೇಹಿತನೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಈರಪ್ಪ ಆ್ಯಂಡ್ ಗ್ಯಾಂಗ್ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ, ಬಳಿಕ ಕಾರು ಹಾಯಿಸಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಉತ್ತರ ಕರ್ನಾಟಕ ((uttara karnataka )ಶೈಲಿಯಲ್ಲಿ ಹಾಡುಗಳನ್ನು ರಚಿಸಿ ಹಾಡುತ್ತಿದ್ದ ವಿಶಿಷ್ಟ ಪ್ರತಿಭಾಶಾಲಿ ಗಾಯಕ. ತನ್ನದೇ ಆದ ಯೂಟ್ಯೂಬ್ ಚಾನೆಲ್ನಲ್ಲಿ ಹಾಡುಗಳನ್ನು ಕಂಪೋಸ್ ಮಾಡಿ ಪ್ರಕಟಿಸುತ್ತಿದ್ದ ಮಾರುತಿ, ಇತ್ತೀಚೆಗೆ ಜನಪ್ರಿಯತೆಯನ್ನು ಸಂಪಾದಿಸಿದ್ದ. ಆದರೆ, ಇದೀಗ ಕೇವಲ ಐದೇ ಐದು ಸಾವರ ರೂಪಾಯಿಗೆ ಸಿಂಗರ್ ಮಾರುತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದು, ಉತ್ತರ ಕರ್ನಾಟಕ ಸಂಗೀತ ಪ್ರೇಮಿಗಳಿಗೆ ಆಘಾತ ತಂದಿದೆ.
ಆರೋಪಿ ಈರಪ್ಪ ಅಕ್ಕಿವಾಟೆ ಬಳಿ 50 ಸಾವಿರ ರೂಪಾಯಿ ಸಾಲ ಪಡೆದಿದ್ದ ಮಾರುತಿ, ಕಬ್ಬಿನ ಕಟಾವು ಮಾಡುವ ಗ್ಯಾಂಗ್ನಲ್ಲಿ ಕೆಲಸ ಮಾಡುವ ನಿಟ್ಟಿನಲ್ಲಿ ಹಣ ಪಡೆದಿದ್ದ. ಒಂದಷ್ಟು ದಿನಗಳ ಕಾಲ ಕೆಲಸ ಮಾಡಿದ್ದ ಮಾರುತಿ 45 ಸಾವಿರ ರೂಪಾಯಿ ವಾಪಸ್ ಕೊಟ್ಟಿದ್ದ. ನಂತರ ತನ್ನ ಹಾಡುಗಳಿಗೆ ಭಾರೀ ಡಿಮ್ಯಾಂಡ್ ಬಂದ ಹಿನ್ನೆಲೆಯಲ್ಲಿ ಕಬ್ಬು ಕಟಾವು ಮತ್ತು ಕಾರ್ಖಾನೆಗೆ ಸಾಗಣೆ ಮಾಡುವ ಗ್ಯಾಂಗ್ನ ಕೆಲಸವನ್ನು ಬಿಟ್ಟು ಸಂಗೀತದ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದ. ಇದಕ್ಕೆ ಈರಪ್ಪನ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೇ ಬಾಕಿ ಹಣ ವಾಪಸ್ ನೀಡದಕ್ಕೂ ಆಕ್ರೋಶಗೊಂಡಿದ್ದ ಈರಪ್ಪ ಗ್ಯಾಂಗ್ ಕಟ್ಟಿಕೊಂಡು ಹೋಗಿ ಮಾರುತಿಯನ್ನು ಬರ್ಬರವಾಗಿ ಹತ್ಯೆ ಮಾಡಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ, ಬಳಿಕ ಮಾರುತಿ ಮೇಲೆ ಕಾರು ಹಾಯಿಸಿ ಭೀಕರವಾಗಿ ಹತ್ಯೆ ಮಾಡಿದ್ದಾರೆ.
ಇನ್ನು ಮಾರುತಿಗೆ ಕಾರು ಹರಿಸಿದ ದುಷ್ಕರ್ಮಿಗಳ ಕಾರು ಕೂಡ ಪಲ್ಟಿಯಾಗಿದ್ದು, ಕೆಲವರು ಗಾಯಗೊಂಡಿದ್ದಾರೆ. ಈ ವೇಳೆ ಆರೋಪಿ ಈರಪ್ಪ ಅಕ್ಕಿವಾಟೆಗೆ ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಯಬಾಗ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಈಗಾಗಲೇ ಸಿದ್ದರಾಮ ವಡೆಯರ್ ಹಾಗೂ ಆಕಾಶ್ ಪೂಜಾರಿಯನ್ನ ಬಂಧಿಸಿರುವ ಪೊಲೀಸರು, ಇತರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.