ಸುಳ್ಯ: ತೀವ್ರ ಜ್ವರದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದ ಶಾಲಾ ಬಾಲಕಿಗೆ ವೈದ್ಯಾಧಿಕಾರಿ ಯೊಬ್ಬರು ಗರ್ಭಿಣಿ ಎಂದು ವರದಿ ನೀಡಿ ಎಡವಟ್ಟು ಮಾಡಿಕೊಂಡ ಘಟನೆ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ವೈದ್ಯಾಧಿಕಾರಿಯು ಈ ವಿಚಾರವನ್ನು ಆಶಾ ಕಾರ್ಯಕರ್ತರು, ಆಸ್ಪತ್ರೆಯ ಸಿಬ್ಬಂದಿ ಹಾಗೂ ಇತರರಿಗೆ ಹೇಳಿದ್ದು, ಈ ಸುಳ್ಳು ಮಾಹಿತಿ ಸಾರ್ವಜನಿಕವಾಗಿ ಹರಡಿದ ಕಾರಣ ನಮ್ಮ ಕುಟುಂಬಕ್ಕೆ ಭಾರೀ ಮಾನಸಿಕ ನೋವನ್ನುಂಟು ಮಾಡಿದೆ. ನನ್ನ ಮಗಳು ಈಗ ಶಾಲೆಗೆ ಹೋಗಲು ನಿರಾಕರಿಸುತ್ತಿದ್ದಾಳೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗೆ ಬಾಲಕಿಯ ಹೆತ್ತವರು ದಾಖಲೆಯೊಂದಿಗೆ ದೂರು ನೀಡಿದ್ದಾರೆ.
ಶಾಲೆಯ ಸಹಪಾಠಿಗಳು, ಶಿಕ್ಷಕರು ಮತ್ತು ಸ್ಥಳೀಯರು ಈ ಕುರಿತು ಮಾತು ಮಾತಿನಲ್ಲಿ ಬಾಲಕಿಯನ್ನು ಮಾನಹಾನಿ ಮಾಡುತ್ತಿದ್ದಾರೆ. ಅಪ್ರಾಪ್ತ ಮಗಳಿಗೆ ತಪ್ಪು ವೈದ್ಯಕೀಯ ಮಾಹಿತಿ ನೀಡುವುದು ಹಾಗೂ ಅವಳ ಖಾಸಗಿ ಮಾಹಿತಿಯನ್ನು ಅನಧಿಕೃತವಾಗಿ ಬಹಿರಂಗಪಡಿಸುವುದು ಪೋಕ್ಸೋ ಕಾಯಿದೆ ಹಾಗೂ ಐ.ಪಿ.ಸಿ. ಸೆಕ್ಷನ್ ಗಳ ಅಡಿಯಲ್ಲಿ ಗಂಭೀರ ಅಪರಾಧವಾಗಿರುತ್ತದೆ. ವೈದ್ಯಾಧಿಕಾರಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬಾಲಕಿಯ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಘಟನೆ ಹಿನ್ನೆಲೆ: ಜಿಲ್ಲೆಗೆ ಒಳಪಟ್ಟ ಗ್ರಾಮವೊಂದರ 13 ವರ್ಷದ ಬಾಲಕಿಯನ್ನು ಜ್ವರದ ಹಿನ್ನೆಲೆ ಆಕೆಯ ಹೆತ್ತವರು ಚಿಕಿತ್ಸೆಗಾಗಿ ಜು.1ರಂದು ಸ್ಥಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದರು. ಅಲ್ಲಿನ ಕರ್ತವ್ಯನಿರತ ವೈದ್ಯಾಧಿಕಾರಿ ಬಾಲಕಿಯನ್ನು ತಪಾಸಣೆ ಮಾಡಿ ಮೂತ್ರ ಮತ್ತು ರಕ್ತ ಪರೀಕ್ಷೆಗೆ ಲ್ಯಾಬ್ಗೆ ಚೀಟಿ ನೀಡಿದ್ದರು. ತಪಾಸಣೆಯ ನಂತರ ಹೊರ ರೋಗಿಗಳ ದಾಖಲಾತಿಯಲ್ಲಿ UPT Positive (ಗರ್ಭಿಣಿ) ಎಂದು ಬರೆದಿದ್ದು, ಇನ್ನಷ್ಟು ತಪಾಸಣೆಗಾಗಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ರೆಫರ್ ಮಾಡಿದ್ದರು. ಈ ವರದಿಯಿಂದ ತಬ್ಬಿಬ್ಬುಗೊಂಡ ಹತ್ತವರು ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ಹೋಗಿ ಹೆಚ್ಚಿನ ಪರೀಕ್ಷೆ ಮಾಡಿಸಿದಾಗ ಮಗಳು ಗರ್ಭಿಣಿಯಾಗಿಲ್ಲ ಎಂಬ ವರದಿ ಲಭಿಸಿತ್ತು. ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದಾಗ ಅಲ್ಲಿಯ ವೈದ್ಯರೂ ಕೂಡಾ ಗರ್ಭಧಾರಣೆಯ ಕುರಿತು ಯಾವುದೇ ದೃಢೀಕರಣ ನೀಡಿರಲಿಲ್ಲ.
ದೂರಿನ ಬೆನ್ನಲ್ಲೇ ಪರಿಶೀಲನೆಗೆ ಬಂದ ಅಧಿಕಾರಿಗಳ ತಂಡ: ದೂರಿನ ಗಂಭೀರತೆ ಅರಿತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಹೆಚ್ ಆರ್ ತಿಮ್ಮಯ್ಯ ಅವರು ತನಿಖೆಗಾಗಿ ತಂಡವನ್ನು ರಚಿಸಿ ಸಂಬಂಧಪಟ್ಟ ಗ್ರಾಮಕ್ಕೆ ಕಳುಹಿಸಿದ್ದು, ಜುಲೈ 10 ರಂದು ಮಾಹಿತಿ ಸಂಗ್ರಹಿಸಿದ್ದಾರೆ. ಆರ್.ಸಿ.ಹೆಚ್ (ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ವಿಭಾಗ) ಡಾ. ರಾಜೇಶ್, ಜಿಲ್ಲಾ ಕ್ಷಯರೋಗ ನಿವಾರಣಾಧಿಕಾರಿ ಡಾ. ದಿಲ್ಷಾದ್, ಜಿಲ್ಲಾ ಶುಶ್ರೂಷಣಾಧಿಕಾರಿ ಜೆಸಿ ಕೆವಿ, ತಾಲೂಕು ಆರೋಗ್ಯಾಧಿಕಾರಿ ಮೂವರು ಅಧಿಕಾರಿಗಳ ತಂಡದಲ್ಲಿದ್ದರು.
ಈ ಬಗ್ಗೆ ಪೊಲೀಸರಿಗೂ ದೂರು ನೀಡಲಾಗಿದ್ದು, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ದಲಿತ ದೌರ್ಜನ್ಯ ಪ್ರಕರಣದ ಅಡಿ ಕೇಸು ದಾಖಲಿಸಬೇಕೆಂದು ಬಾಲಕಿಯ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
ಕೂಲಿ ಕಾರ್ಮಿಕನಾಗಿರುವ ಬಾಲಕಿಯ ತಂದೆ, ವೈದ್ಯಾಧಿಕಾರಿಯ ವರದಿಯಿಂದ ತಬ್ಬಿಬ್ಬುಗೊಂಡು ಸಹಾಯಕ್ಕಾಗಿ ಕಡಬದ ಭೀಮ್ ಆರ್ಮಿ ಸಂಘಟನೆಯನ್ನು ಸಂಪರ್ಕಿಸಿದ್ದರು. ಅವರಿಗೆ ಸೂಕ್ತ ಮಾಹಿತಿ ನೀಡಿ ದೂರು ನೀಡುವ ಬಗ್ಗೆ ತಿಳಿಸಿದ್ದೇವೆ. ಅದರಂತೆ ದೂರು ನೀಡಲಾಗಿದೆ. ಸಂಘಟನೆಯ ಪ್ರಮುಖರು ಬಾಲಕಿ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿದ್ದೇವೆ. ಸುಳ್ಳು ವರದಿ ನೀಡಿ ಬಾಲಕಿಯ ಮಾನಹಾನಿಗೆ ಕಾರಣವಾದ ವೈದ್ಯಾಧಿಕಾರಿಯನ್ನು ಕೂಡಲೇ ಕರ್ತವ್ಯದಿಂದ ಅಮಾನತುಗೊಳಿಸಬೇಕು. ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಸಂಘಟನೆ ಹೋರಾಟದ ಹಾದಿ ಹಿಡಿಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಭೀಮ್ ಆರ್ಮಿ ಸಂಘಟನೆಯ ಉಪಾಧ್ಯಕ್ಷ ರಾಘವ ಕಳಾರ ಎಚ್ಚರಿಕೆ ನೀಡಿದ್ದಾರೆ.