ಬಿಹಾರದಲ್ಲಿ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ಗೆ (ಎಸ್‌ಐಆರ್) ತಡೆ ನೀಡಲು ಸುಪ್ರೀಂ ಕೋರ್ಟ್ ಗುರುವಾರ (ಜು.10) ನಿರಾಕರಿಸಿದೆ. ಆದರೆ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತು ಪಡಿತರ ಚೀಟಿಯನ್ನು ಮಾನ್ಯ ದಾಖಲೆಗಳಾಗಿ ಪರಿಗಣಿಸುವಂತೆ ಭಾರತದ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠ, ವಿಧಾನಸಭಾ ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿ ಇರುವಾಗ ಮತದಾರರ ಪಟ್ಟಿಯ ಪರಿಷ್ಕರಣೆ ಕೈಗೆತ್ತಿಕೊಂಡಿರುವುದನ್ನು ಪ್ರಶ್ನಿಸಿದೆ. ಚುನಾವಣೆ ಬಂದಾಗಲೇ ತರಾತುರಿಯ ಪರಿಷ್ಕರಣೆ ಏಕೆ, ಬೇರೆ ಸಮಯದಲ್ಲಿ ಪರಿಷ್ಕರಣೆ ಸಾಧ್ಯವಿಲ್ಲವೇ? ಎಂದು ಕೇಳಿದೆ.
ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಆಲಿಸಿದ ಪೀಠ, “ನಾವು ಚುನಾವಣಾ ಆಯೋಗವನ್ನು ಅನುಮಾನಿಸುತ್ತಿಲ್ಲ. ಅವರು ದಾಖಲೆಗಳನ್ನು ಪರಿಶೀಲಿಸೋಣ ಎಂದು ಹೇಳಿದ್ದಾರೆ. ಹಾಗಾಗಿ, ಈ ವಿಷಯದ ಬಗ್ಗೆ ವಿಚಾರಣೆಯ ಅಗತ್ಯವಿದೆ. ಜುಲೈ 28ರಂದು ಅದನ್ನು ವಿಚಾರಣೆಗೆ ಪಟ್ಟಿ ಮಾಡಲಿ. ಈ ಮಧ್ಯೆ, ಅವರು ಕರಡನ್ನು ಪ್ರಕಟಿಸುವುದಿಲ್ಲ” ಎಂದು ಹೇಳಿದೆ. ಜುಲೈ 21ರೊಳಗೆ ಪ್ರತಿ-ಅಫಿಡವಿಟ್ ಸಲ್ಲಿಸಲು ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ಮತದಾನದ ಅರ್ಹತೆಯನ್ನು ದೃಢೀಕರಿಸಲು ಮತದಾರರು ಸಲ್ಲಿಸಬಹುದಾದ 11 ದಾಖಲೆಗಳ ಪಟ್ಟಿಯಲ್ಲಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತು ಪಡಿತರ ಚೀಟಿಯನ್ನು ಚುನಾವಣಾ ಆಯೋಗ ಕೈ ಬಿಟ್ಟಿತ್ತು. ಇದು ದೊಡ್ಡ ಆತಂಕಕ್ಕೆ ಕಾರಣವಾಗಿತ್ತು. ವಿರೋಧ ಪಕ್ಷಗಳು ಲಕ್ಷಾಂತರ ಜನರು ಮತದಾನದ ಹಕ್ಕಿನಿಂದ ವಂಚಿತರಾಗುವ ಆತಂಕ ವ್ಯಕ್ತಪಡಿಸಿದ್ದವು.
ಚುನಾವಣಾ ಆಯೋಗ ಸೂಚಿಸಿರುವ 11 ದಾಖಲೆಗಳ ಪಟ್ಟಿ ಸಮಗ್ರವಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ನ್ಯಾಯದ ಹಿತ ದೃಷ್ಟಿಯಿಂದ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತು ಪಡಿತರ ಚೀಟಿಯನ್ನು ಪಟ್ಟಿಗೆ ಸೇರಿಸಬೇಕು ಎಂದಿದೆ. ಈ ದಾಖಲೆಗಳನ್ನು ತೆಗೆದುಕೊಳ್ಳಬೇಕೆ ಅಥವಾ ಬೇಡವೇ ಎಂಬುದನ್ನು ಚುನಾವಣಾ ಆಯೋಗ ನಿರ್ಧರಿಸಬೇಕು. ತೆಗೆದುಕೊಳ್ಳದಿದ್ದರೆ, ಅದಕ್ಕೆ ಕಾರಣಗಳನ್ನು ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.
“ಮತದಾರರ ಪಟ್ಟಿಯನ್ನು ಅಂತಿಮಗೊಳಿಸಿದ ನಂತರ ನ್ಯಾಯಾಲಯಗಳು ಅದನ್ನು ಮುಟ್ಟುವುದಿಲ್ಲ. ಅಂದರೆ, ಮತದಾನದಿಂದ ವಂಚಿತರಾದ ವ್ಯಕ್ತಿಗೆ ಚುನಾವಣೆಗೆ ಮುನ್ನ ಅದನ್ನು (ಪರಿಷ್ಕೃತ ಪಟ್ಟಿ) ಪ್ರಶ್ನಿಸುವ ಆಯ್ಕೆ ಇರುವುದಿಲ್ಲ” ಎಂದು ನ್ಯಾಯಮೂರ್ತಿ ಧುಲಿಯಾ ಹೇಳಿದ್ದಾರೆ.
ಆದಾಗ್ಯೂ, ನಾಗರಿಕರಲ್ಲದವರು ಪಟ್ಟಿಯಲ್ಲಿ ಉಳಿಯದಂತೆ ನೋಡಿಕೊಳ್ಳಲು ತೀವ್ರವಾದ ಪರಿಷ್ಕರಣೆಯ ಮೂಲಕ ಮತದಾರರ ಪಟ್ಟಿಯನ್ನು ಶುದ್ಧೀಕರಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ.
“ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಗೆ ಸಾಂವಿಧಾನಿಕ ಅವಕಾಶ ಇದೆ. ಇದರಲ್ಲಿ ಒಂದು ಪ್ರಾಯೋಗಿಕತೆ ಇದೆ. ಗಣಕೀಕರಣದ ನಂತರ ಇದು ಮೊದಲ ಬಾರಿಗೆ ಆಗಿದ್ದರಿಂದ ಅವರು ದಿನಾಂಕವನ್ನು ನಿಗದಿಪಡಿಸಿದ್ದಾರೆ. ಆದ್ದರಿಂದ ಒಂದು ತರ್ಕವಿದೆ” ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಶಂಕರನಾರಾಯಣನ್, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಸಂಪೂರ್ಣವಾಗಿ ಅನಿಯಂತ್ರಿತ ಮತ್ತು ತಾರತಮ್ಯದಿಂದ ಕೂಡಿದೆ ಎಂದು ಹೇಳಿದ್ದಾರೆ.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, “ಚುನಾವಣಾ ಆಯೋಗದ ಕ್ರಮ ಪೌರತ್ವ ಪರಿಶೀಲನೆಯಂತಿದೆ. ಇಡೀ ದೇಶ ಎಲ್ಲದಕ್ಕೂ ಆಧಾರ್ ಆಧಾರ್ ಎನ್ನುತ್ತಿದೆ. ಆದರೆ, ಚುನಾವಣಾ ಆಯೋಗ ಈಗ ಅದು ಮಾನ್ಯ ದಾಖಲೆಯಲ್ಲ ಎನ್ನುತ್ತಿದೆ” ಎಂದಿದ್ದಾರೆ.
ಅರ್ಜಿದಾರರ ಪರ ವಾದ ಮಂಡಿಸಿದ ಇನ್ನೊಬ್ಬರು ಹಿರಿಯ ವಕೀಲ ಕಪಿಲ್ ಸಿಬಲ್, “ನಾವು ಭಾರತೀಯ ನಾಗರಿಕರು ಹೌದೋ ಅಲ್ಲವೋ ಎಂದು ಕೇಳಲು ಚುನಾವಣಾ ಆಯೋಗದವರು ಯಾರು? ಹೊರೆ ನಮ್ಮ ಮೇಲಿರುವುದಲ್ಲ, ಅವರ ಮೇಲೆ. ನಾವು ನಾಗರಿಕಲ್ಲ ಎಂದು ಹೇಳಲು ಅವರ ಬಳಿ ಕೆಲವು ದಾಖಲೆಗಳು ಇರಬೇಕು” ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗದ ಪರ ವಕೀಲ,”ಆಧಾರ್ ಕಾರ್ಡ್ ಅನ್ನು ಪೌರತ್ವದ ದಾಖಲೆಯಾಗಿ ಬಳಸಲಾಗುವುದಿಲ್ಲ ಎಂದು ಹೇಳಿದ್ದಾರೆ. ಆಗ ಚುನಾವಣಾ ಆಯೋಗ, “ಇದು ವಿಭಿನ್ನ ವಿಷಯ ಮತ್ತು ಗೃಹ ಸಚಿವಾಲಯದ ವಿಶೇಷಾಧಿಕಾರ, ಚುನಾವಣಾ ಆಯೋಗದ್ದು ಅಲ್ಲ ಎಂದು ಸ್ಪಷ್ಟಪಡಿಸಿದೆ.
“ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಅಡಿಯಲ್ಲಿ ಪೌರತ್ವವನ್ನು ಪರಿಶೀಲಿಸಬೇಕಾದರೆ, ನೀವು ಮೊದಲೇ ಕ್ರಮ ಕೈಗೊಳ್ಳಬೇಕಿತ್ತು. ಮತದಾರರ ಪಟ್ಟಿಯಿಂದ ನಾಗರಿಕರಲ್ಲದವರನ್ನು ತೆಗೆದುಹಾಕುವುದು ಗೃಹ ಸಚಿವಾಲಯದ ವಿಶೇಷ ಅಧಿಕಾರ, ಚುನಾವಣಾ ಆಯೋಗದ ಕೆಲಸವಲ್ಲ” ಎಂದಿದೆ.
ಆಗ, ಪರಿಷ್ಕೃತ ಮತದಾರರ ಪಟ್ಟಿಯನ್ನು ಅಂತಿಮಗೊಳಿಸುವ ಮೊದಲು ನ್ಯಾಯಾಲಯವು ಅದನ್ನು ಪರಿಶೀಲಿಸಬಹುದು ಎಂದು ಚುನಾವಣಾ ಆಯೋಗದ ವಕೀಲರು ಹೇಳಿದ್ದಾರೆ. ಪರಿಷ್ಕರಣೆ ಪ್ರಕ್ರಿಯೆಯನ್ನು ನಿಲ್ಲಿಸಬಾರದು ಎಂದು ಮನವಿ ಮಾಡಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಜೂನ್ 24ರಂದು ಚುನಾವಣಾ ಆಯೋಗ ಆದೇಶಿಸಿದೆ. ಕಳೆದ 20 ವರ್ಷಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮತದಾರರ ಸೇರ್ಪಡೆ, ಅಳಿಸುವಿಕೆ, ನಕಲು ನಮೂದುಗಳ ಸಾಧ್ಯತೆಯನ್ನು ಹೆಚ್ಚಿಸಿವೆ. ಆದ್ದರಿಂದ ಮತದಾರರ ಪಟ್ಟಿಯ ಶುದ್ದೀಕರಣ ಅಗತ್ಯವಿದೆ ಎಂದು ಆಯೋಗ ಸಮರ್ಥಿಸಿಕೊಂಡಿದೆ.
ಚುನಾವಣಾ ಆಯೋಗದ ಈ ಕ್ರಮವನ್ನು ವಿರೋಧ ಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್ ಮತ್ತು ಆರ್‌ಜೆಡಿ ತೀವ್ರವಾಗಿ ವಿರೋಧಿಸಿವೆ.