ಮಂಗಳೂರು: ಕಾರು ಮತ್ತು ಸ್ಕೂಟರ್ ಮಧ್ಯೆ ಸಂಭವಿಸಿದ ಅಪಘಾತಕ್ಕೆ ಸಂಬಂಧಿಸಿ ಕಾರನ್ನು ಠಾಣೆಯಿಂದ ಬಿಡಿಸಿಕೊಳ್ಳಲು ಲಂಚಕ್ಕೆ ಬೇಡಿಕೆಯಿಟ್ಟ ಕದ್ರಿ ಟ್ರಾಫಿಕ್ ಠಾಣೆಯ ಹೆಡ್‌ಕಾನ್ಸ್‌ಟೇಬಲ್ ತಸ್ಲೀಂ ಎಂಬವರನ್ನು ಲೋಕಾಯುಕ್ತ ಪೊಲೀಸರು ಬಲೆಗೆ ಕೆಡವಿದ್ದಾರೆ.
ನಗರದ ನಂತೂರಿನಲ್ಲಿ ಕಾರು ಮತ್ತು ಸ್ಕೂಟರ್ ಮಧ್ಯೆ ಅಪಘಾತ ಆಗಿದ್ದು, ಈ ಕುರಿತು ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿ ತಸ್ಲಿಂ, ಕಾರು ಮತ್ತು ಕಾರಿನ ದಾಖಲಾತಿಗಳನ್ನು ಪೊಲೀಸ್ ಠಾಣೆಗೆ ತಂದು ಕೊಡುವಂತೆ ತಿಳಿಸಿದ್ದರು. ಆನಂತರ, ತನ್ನ ಕಾರನ್ನು ಪೊಲೀಸ್ ಠಾಣೆಯಿಂದ ಬಿಡಿಸಿಕೊಡಲು ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿ ತಸ್ಲಿಂ ರೂ. 50,000/- ಲಂಚ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ನಂತರ ಕಾರಿನ ಮಾಲೀಕ ತನ್ನ ವಕೀಲರಲ್ಲಿ ವಿಷಯವನ್ನು ತಿಳಿಸಿದ್ದು ವಕೀಲರು ಠಾಣೆಗೆ ಭೇಟಿ ನೀಡಿ ಕಾರನ್ನು ಬಿಟ್ಟುಕೊಡುವಂತೆ ಕೇಳಿದ್ದರು. ಆಗ ಸದ್ರಿ ವ್ಯಕ್ತಿ ಕಾರನ್ನು ಸ್ವೀಕರಿಸಿರುತ್ತಾರೆ ಎಂದು ಸಹಿ ಪಡೆದುಕೊಂಡು ಕಾರನ್ನು ಪೊಲೀಸ್ ಠಾಣೆಯಿಂದ ಬಿಟ್ಟುಕೊಟ್ಟಿರಲಿಲ್ಲ.
ಆನಂತರ ತಸ್ಲಿಂ ಅವರು ಕಾರನ್ನು ಬಿಟ್ಟುಕೊಡಲು ನಿನ್ನ ಮೊಬೈಲ್ ಇಟ್ಟು ಹೋಗುವಂತೆ ತಿಳಿಸಿದ್ದು ಬಲವಂತದಿಂದ ಮೊಬೈಲ್ ಪಡೆದು ಕಾರನ್ನು ಬಿಟ್ಟುಕೊಟ್ಟಿದ್ದರು. ಬಳಿಕ ತನ್ನ ಮೊಬೈಲ್ ಪೋನ್ ವಾಪಸ್ ಕೊಡಲು ತಸ್ಲಿಂ ಅವರಲ್ಲಿ ಕೇಳಿಕೊಂಡಾಗ ಮತ್ತೆ ರೂ. 50,000 ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮೊಬೈಲ್ ಪೋನ್ ಹಿಂತಿರುಗಿಸಬೇಕಾದರೆ ಒರಿಜಿನಲ್ ಲೈಸನ್ಸ್ ಅನ್ನು ಠಾಣೆಗೆ ತಂದುಕೊಡುವಂತೆ ತಿಳಿಸಿದ್ದರು. ನಂತರ ಕಾರಿನ ಮಾಲಕ ತನ್ನ ಒರಿಜಿನಲ್ ಲೈಸನ್ಸ್ ಅನ್ನು ಪೊಲೀಸರಿಗೆ ನೀಡಿದ್ದರು.
ಆ ನಂತರ ಮಾತುಕತೆ ನಡೆಸಿ, ಠಾಣೆಯ ಮತ್ತೋರ್ವ ಸಿಬ್ಬಂದಿ ವಿನೋದ್ ಮುಖಾಂತರ ರೂ 30,000/- ಲಂಚದ ಹಣ ಕೊಟ್ಟು ಓರಿಜಿನಲ್ ಲೈಸನ್ಸ್ ಪಡೆದುಕೊಂಡು ಹೋಗಲು ತಸ್ಲಿಂ ತಿಳಿಸಿದ್ದರು. ಇದರಂತೆ, ಜುಲೈ 9ರಂದು ಕದ್ರಿ ಟ್ರಾಪಿಕ್ ಪೊಲೀಸ್ ಠಾಣೆಗೆ ಹೋಗಿ ತಸ್ಲಿಂ ಅವರನ್ನು ಭೇಟಿ ಮಾಡಿದಾಗ ಓರಿಜಿನಲ್ ಲೈಸನ್ಸ್ ನೀಡಲು ರೂ. 10,000/- ಹಣ ನೀಡುವಂತೆ ಕೇಳಿದ್ದರು. ಅದಕ್ಕೆ ಕಾರಿನ ಮಾಲಕರು ತನ್ನಲ್ಲಿ ರೂ. 500 ಇದೆ ಎಂದಾಗ, ರೂ. 5000 ಇಲ್ಲದೇ ಠಾಣೆ ಕಡೆಗೆ ಬರಬೇಡ ಎಂದು ಬೈದು ಕಳುಹಿಸಿದ್ದಾರೆ. ಬಳಿಕ ಸ್ವಲ್ಪ ಕಡಿಮೆ ಮಾಡಿ ಎಂದು ಕೇಳಿದಾಗ, ಓರಿಜಿನಲ್ ಲೈಸನ್ಸ್ ನೀಡಲು ರೂ. 5000/- ನೀಡಲೇಬೇಕು ಎಂದು ಒತ್ತಾಯ ಮಾಡಿದ್ದಾರೆ. ಕಾನೂನು ಬದ್ಧವಾಗಿ ಮಾಡಬೇಕಾದ ಸರ್ಕಾರಿ ಕೆಲಸಕ್ಕೆ ಲಂಚ ನೀಡಿ ಕೆಲಸ ಮಾಡಿಸಿಕೊಳ್ಳಲು ಇಚ್ಛೆ ಇಲ್ಲದ ಕಾರಣ ಆ ವ್ಯಕ್ತಿ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿ ತಸ್ಲಿಂ ಮತ್ತು ವಿನೋದ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ. ಇಂದು ಬೆಳಗ್ಗೆ ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿ ತಸ್ಲಿಂ (ಸಿಹೆಚ್‌ಸಿ 322) ಅವರು ಕಾರಿನ ಮಾಲಕರಿಂದ ರೂ. 5000/- ಲಂಚದ ಹಣವನ್ನು ಸ್ವೀಕರಿಸುವಾಗಲೇ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ತಸ್ಲಿಂನನ್ನು ಬಂಧನ ಮಾಡಿದ್ದಾರೆ.
ಲೋಕಾಯುಕ್ತ ಪ್ರಭಾರ ಎಸ್ಪಿ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕ ಡಾ. ಗಾನ ಪಿ ಕುಮಾರ್, ಸುರೇಶ್ ಕುಮಾರ್ ಪಿ, ಪೊಲೀಸ್ ನಿರೀಕ್ಷಕಿ ಭಾರತಿ ಜಿ, ಚಂದ್ರಶೇಖರ್ ಕೆ.ಎನ್ ಅವರು ಸಿಬ್ಬಂದಿಗಳ ಜೊತೆ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿರುತ್ತಾರೆ.