ಯೆಮನ್‌ನಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಬಿಡುಗಡೆಗೆ ಸುಪ್ರೀಂಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಕೆಯಾಗಿದೆ.
ನವದೆಹಲಿ: ಜುಲೈ 16ರಂದು ಯೆಮನ್‌ನಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಬಿಡುಗಡೆ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಕೆ ಮಾಡಲಾಗಿದೆ. ನಿಮಿಷಾ ಪ್ರಿಯಾ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಕೋರಿ ಸುಪ್ರಿಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ವಿದೇಶಾಂಗ ಸಚಿವಾಲಯದ ವಿರುದ್ಧ ಸೇವ್ ನಿಮಿಷಾ ಪ್ರಿಯಾ ಆಕ್ಷನ್ ಕೌನ್ಸಿಲ್ ಅರ್ಜಿ ಸಲ್ಲಿಸಿದೆ. ವಕೀಲ ಕೆ.ಆರ್. ಸುಭಾಷ್ ಚಂದ್ರನ್ ಅರ್ಜಿ ಸಲ್ಲಿಸಿದ್ದಾರೆ. ಮರಣದಂಡನೆ ತಡೆಯಲು ತುರ್ತು ಮಧ್ಯಪ್ರವೇಶ ಅಗತ್ಯ ಎಂದು ಆಕ್ಷನ್ ಕೌನ್ಸಿಲ್ ಮನವಿ ಮಾಡಿದೆ.
ಯೆಮನ್ ಕಾನೂನು!
ಯಮೆನ್ ಕಾನೂನಿನಲ್ಲಿ ಪರಸ್ಪರ ಒಪ್ಪಂದ ಮತ್ತು ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡುವ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳಬಹುದು. ಹಾಗಾಗಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಪರಿಹಾರದ ಕುರಿತು ಚಿಂತಿಸಬಹುದಾಗಿದೆ ಎಂದು ಹಿರಿಯ ವಕೀಲ ಆರ್. ಬಸಂತ್ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಈ ಅರ್ಜಿಯ ವಿಚಾರಣೆ ನ್ಯಾ.ಸುಧಾಂಶು ಧುಲಿಯಾ ಮತ್ತು ಜಾಯ್ಮಲಾಯ್ ಬಾಗ್ ದ್ವಿಸದಸ್ಯ ಪೀಠ ನಡೆಸಿದೆ.
ಕೊಲೆ ಮಾಡುವ ಉದ್ದೇಶವಿರಲಿಲ್ಲ
ನಿಮಿಷಾ ಪ್ರಿಯಾ ಅವರ ಪಾಸ್‌ಪೋರ್ಟ್‌ನ್ನು ಮೆಹದಿ ತನ್ನ ಬಳಿಯಲ್ಲಿರಿಸಿಕೊಂಡಿದ್ದನು. ಈ ಸಂಬಂಧ ಕಾನೂನು ಸಲಹೆ ಪಡೆಯಲು ನಿಮಿಷಾ ಪ್ರಿಯಾ ಪ್ರಯತ್ನಿಸಿದ್ದರು. ಆದ್ರೆ ಅದು ಯಶಸ್ವಿಯಾಗಿರಲಲ್ಲ. ಮೆಹದಿ ಬಳಿಯಲ್ಲಿ ಪಾಸ್‌ಪೋರ್ಟ್ ಪಡೆಯಲು ನಿಮಿಷಾ ಪ್ರಿಯಾ ಅವನಿಗೆ ಸ್ಲೀಪಿಂಗ್ ಇಂಜೆಕ್ಷನ್ ನೀಡಿದ್ದರು. ಆದ್ರೆ ಮೆಹದಿಯ ಸಾವು ಆಯ್ತು. ನಿಮಿಷಾ ಪ್ರಿಯಾಗೆ ಆತನನ್ನು ಕೊಲ್ಲುವ ಉದ್ದೇಶ ಇರಲಿಲ್ಲ ಎಂದು ಅರ್ಜಿದಾರರ ಪರ ವಕೀಲರು ಹೇಳಿದ್ದಾರೆ.
ಗ್ರಾಮದಲ್ಲಿ ಮೌನ!
ಇದೇ ತಿಂಗಳು 16ರಂದು ಗಲ್ಲು ಶಿಕ್ಷೆ ವಿಧಿಸಲಾಗುತ್ತೆ ಎಂಬ ವಿಷಯ ತಿಳಿಯುತ್ತಿದ್ದಂತೆ ನಿಮಿಷಾ ಪ್ರಿಯಾ ಗ್ರಾಮ ಪೂಂಕಯಂನಲ್ಲಿ ಮೌನ ಆವರಿಸಿದೆ. ಮಾಧ್ಯಮವೊಂದರ ಜೊತೆ ಮಾತನಾಡಿರುವ ನಿಮಿಷಾ ಪ್ರಿಯಾ ಗೆಳತಿ ವಿನಿತಾ ರಾಧಾಕೃಷ್ಣನ್, ಇಂದಿಗೂ ಹಳ್ಳಿಯ ಜನರು ನಿಮಿಷಾ ಅಂದ್ರೆ ಪ್ರಾಮಾಣಿಕ ಮತ್ತು ಮುಗ್ಧ ಹುಡುಗಿ ಎಂದೇ ಹೇಳುತ್ತಾರೆ. ಆಕೆ ಕೊಲೆ ಮಾಡಿದ್ದಾಳೆ ಅಂದ್ರೆ ನಂಬಲು ಆಗುತ್ತಿಲ್ಲ ಎಂದು ಹೇಳುತ್ತಾರೆ. ನಿಮಿಷಾ ಮತ್ತು ವಿನಿತಾ ಕೇರಳದ ಕೊಲ್ಲಂಗೋಡ್‌ನಲ್ಲಿರುವ ಪ್ರೌಢಶಾಲೆಯಲ್ಲಿ ಜೊತೆಯಾಗಿ ಓದಿದ್ದರು.
ನಿಮಿಷಾ ಪ್ರಿಯಾ ಪತಿ ಹೇಳೋದೇನು?
ನಿಮಿಷ ಪ್ರಿಯಾ ಪತಿ ಟಾಮಿ, ಇಡುಕ್ಕಿಯ ತೋಡುಪುಳದಲ್ಲಿ ಆಟೋ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರ ಮಧ್ಯ ಪ್ರವೇಶಿಸಬೇಕು. ನನ್ನ ಮಗಳು ತಾಯಿಯನ್ನು ಕಳೆದುಕೊಂಡಿದ್ದಾಳೆ. ಆಕೆ ತಾಯಿಗಾಗಿ ಕಾಯುತ್ತಿದ್ದಾಳೆ ಎಂದು ಟಾಮಿ ಹೇಳುತ್ತಾರೆ. ನಿಮಿಷಾ ಪ್ರಿಯಾರ 12 ವರ್ಷದ ಮಗಳು ಮಿಚೆಲ್ ಕೋತಮಂಗಲಂನಲ್ಲಿರುವ ಹಾಸ್ಟೆಲ್‌ನಲ್ಲಿದ್ದು ಓದುತ್ತಿದ್ದಾಳೆ.
ಯೆಮನ್‌ನಲ್ಲಿರುವ ನಿಮಿಷಾ ತಾಯಿ
ನಿಮಿಷಾಳ ತಾಯಿ ಪ್ರೇಮಾ ಕುಮಾರಿ ಪ್ರಸ್ತುತ ಯೆಮನ್‌ನಲ್ಲಿದ್ದು, ಅಲ್ಲಿ ಅವರು ಮುಖಂಡರು ಮತ್ತು ಮೃತರ ಕುಟುಂಬದೊಂದಿಗೆ ಮಾತನಾಡುತ್ತಿದ್ದಾರೆ. ಯೆಮನ್‌ನಲ್ಲಿ ಮೃತರ ಕುಟುಂಬಸ್ಥರು ಕ್ಷಮಾದಾನ ನೀಡಿದ್ರೆ ಮರಣದಂಡನೆಯಿಂದ ಪಾರಾಗಬಹುದು. ಆರೋಪಿ ನೀಡುವ ಹಣವನ್ನು ಪರಿಹಾರವಾಗಿ ಪಡೆದುಕೊಂಡು ಕ್ಷಮಿಸಬಹುದು. ಈ ನಿಟ್ಟಿನಲ್ಲಿ ನಿಮಿಷಾ ಪ್ರಿಯಾ ತಾಯಿ ಪ್ರೇಮಾ ಕುಮಾರಿ ಪ್ರಯತ್ನಿಸುತ್ತಿದ್ದಾರೆ.
ಭಾರತದ ನಿಲುವು ಏನು?
ಭಾರತ ಸರ್ಕಾರ ತನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತಿದೆ ಎಂದು ಹೇಳಿಕೆಯನ್ನು ನೀಡಿದೆ. ಯೆಮೆನ್‌ನ ಹೌತಿ ಆಡಳಿತದೊಂದಿಗೆ ರಾಜತಾಂತ್ರಿಕ ಸಂಬಂಧಗಳ ಕೊರತೆಯಿಂದಾಗಿ, ನೇರ ಮಾತುಕತೆ ನಡೆಸುವುದು ಕಷ್ಟಕರವಾಗಿದೆ ಎಂದು ಹೇಳಲಾಗುತ್ತಿದೆ.