ಮಗುವಿಗೆ ಜನ್ಮ ನೀಡುವುದು ಎಂದರೆ ಅದು ಹುಟ್ಟು ಸಾವಿನ ನಡುವಿನ ಹೋರಾಟ. ಪ್ರಾಣಿಗಳು ಕೂಡ ಈ ವೇಳೆಯಲ್ಲಿ ವಿಪರೀತ ನೋವನ್ನು ಅನುಭವಿಸುತ್ತವೆ. ಮಾನವೀಯತೆಗೆ ಈ ವಿಡಿಯೋ ಸಾಕ್ಷಿಯಾಗಿದ್ದು, ರೈಲು ಹಳಿಯಲ್ಲೇ ಆನೆಯೊಂದು ಮರಿಗೆ ಜನ್ಮ ನೀಡಿದ್ದು ಇದಕ್ಕಾಗಿ ರೈಲ್ವೆ ಅಧಿಕಾರಿಗಳು ಸರಕು ರೈಲನ್ನು ಎರಡು ಗಂಟೆಗಳ ಕಾಲ ಸ್ಥಗಿತಗೊಳಿಸಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.
ಜಾರ್ಖಂಡ್, ಜುಲೈ 10 : ಮಾನವ ಹಾಗೂ ಪ್ರಾಣಿಗಳ ನಡುವಿನ ಸಂಬಂಧವೇ ಹಾಗೇ, ಈ ಮೂಕ ಪ್ರಾಣಿಗಳು ಮಾನವನ ಭಾವನೆಗೆ ಮಿಡಿಯುತ್ತವೆ. ಇತ್ತ ಮನುಷ್ಯರು ಕೂಡ ಸಂಕಷ್ಟದಲ್ಲಿ ಸಿಲುಕಿರುವ ಪ್ರಾಣಿಗಳ ರಕ್ಷಣೆಗೆ ಧಾವಿಸಿ ಹೃದಯಶ್ರೀಮಂತಿಕೆ ಮೆರೆದಿರುವ ಘಟನೆಗಳು ಈ ಹಿಂದೆ ನಡೆದಿದೆ. ಇದೀಗ ರೈಲು ಹಳಿಯಲ್ಲೇ ಆನೆಯೊಂದು ಮರಿಗೆ ಜನ್ಮ ನೀಡಲು ಎರಡು ಗಂಟೆಗಳ ಸ್ಥಗಿತಗೊಳಿಸಿದ ಘಟನೆಯೂ ಜಾರ್ಖಂಡ್‌ನ ರಾಮಗಢದಲ್ಲಿ (Ramgarh of Jharkhand) ನಡೆದಿದೆ. ಈ ವಿಡಿಯೋವೊಂದು ಮಾನವೀಯತೆಗೆ ಸಾಕ್ಷಿಯಾಗಿದೆ. ಸಾಮಾಜಿಕ ಜಾಲತಾಣ ಗಳಲ್ಲಿ (social media) ವೈರಲ್ ಆದ ಈ ದೃಶ್ಯ ನೋಡಿದ ಬಳಕೆದಾರರು ರೈಲ್ವೆ ಅಧಿಕಾರಿಗಳ ಈ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಈ ಹೃದಯಸ್ಪರ್ಶಿ ವಿಡಿಯೋವನ್ನು ಕೇಂದ್ರ ಸಚಿವ ಭೂಪೇಂದ್ರ ಸಿಂಗ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಚಾಲಕ ಮತ್ತು ರೈಲ್ವೆ ಅಧಿಕಾರಿ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಆನೆಯು ತನ್ನ ಮರಿಗೆ ಜನ್ಮ ನೀಡುವ ಸಂದರ್ಭದಲ್ಲಿ ರೈಲು ನಿರ್ವಾಹಕರು ಎರಡು ಗಂಟೆಗಳ ಕಾಲ ತಾಳ್ಮೆಯಿಂದ ಕಾಯುತ್ತಿದ್ದರು. ಅಲ್ಲದೇ ಇಂತಹ ಹೃದಯಸ್ಪರ್ಶಿ ಘಟನೆಗಳನ್ನು ನೋಡುವುದು ಸಂತೋಷಕರವಾಗಿದೆ ಎಂದು ಬರೆದುಕೊಂಡಿದ್ದಾರೆ.
ರಾಮಗಢದ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‌ಒ) ನಿತೀಶ್ ಕುಮಾರ್ ಈ ಕುರಿತು ಪ್ರತಿಕ್ರಿಯಿಸಿದ್ದು, ಜೂನ್ 25 ರ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಗರ್ಭಿಣಿ ಹೆಣ್ಣು ಆನೆ ಹೆರಿಗೆ ನೋವಿನಿಂದ ಹಳಿಗಳ ಮೇಲೆ ಮಲಗಿದೆ ಎನ್ನುವ ಮಾಹಿತಿ ಬಂದಿತು. ಆದರೆ ಈ ಆನೆಯೂ ರೈಲಿಗೆ ಸಿಲುಕಬಹುದು, ಹೀಗಾಗಿ ದಯವಿಟ್ಟು ಮಾರ್ಗದಲ್ಲಿ ಎಲ್ಲಾ ರೈಲುಗಳ ಸಂಚಾರವನ್ನು ನಿಲ್ಲಿಸುವಂತೆ ನನ್ನನ್ನು ಕೇಳಿಕೊಂಡರು ಎಂದಿದ್ದಾರೆ. ಈ ಮಾಹಿತಿ ಬಂದ ತಕ್ಷಣವೇ ಅರಣ್ಯ ಅಧಿಕಾರಿ ನಿತೀಶ್ ಕುಮಾರ್ ಬರ್ಕಕಾನಾದಲ್ಲಿರುವ ರೈಲ್ವೆ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಿ ಆ ಕೂಡಲೇ ಎಲ್ಲಾ ರೈಲುಗಳನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಹೀಗಾಗಿ ಆನೆಯೂ ಮರಿಗೆ ಜನ್ಮ ನೀಡುವ ಸಲುವಾಗಿ ಎರಡು ಗಂಟೆಗಳ ಕಾಲ ರೈಲನ್ನು ನಿಲ್ಲಿಸಿ ಅಧಿಕಾರಿಗಳು ಮಾನವೀಯತೆ ಮೆರೆದಿದ್ದಾರೆ.
ಜುಲೈ 9 ರಂದು ಶೇರ್ ಮಾಡಲಾದ ಈ ವಿಡಿಯೋ ಹತ್ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಸಿಬ್ಬಂದಿಗಳಿಗೆ ಈ ಆನೆಯ ಆಶೀರ್ವಾದ ಇದ್ದೆ ಇರುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಸರಿಯಾದ ಸಮಯದಲ್ಲಿ ರೈಲು ನಿಲ್ಲಿಸಿ ತಾಯಿ ಆನೆ ಹಾಗೂ ಅದರ ಮರಿಯನ್ನು ರಕ್ಷಿಸಿದ ರೈಲ್ವೆ ಸಿಬ್ಬಂದಿಗೆ ನನ್ನದೊಂದು ಸೆಲ್ಯೂಟ್ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನಿಜಕ್ಕೂ ಹೃದಯಸ್ಪರ್ಶಿ ವಿಡಿಯೋ, ಇಡೀ ತಂಡಕ್ಕೆ ಧನ್ಯವಾದಗಳು ಎಂದು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ.