ಇಬ್ಬರು ಮಕ್ಕಳ ತಾಯಿಯನ್ನು ಪ್ರೇಮಿಸಿ ಆಕೆ ಜತೆ ಬೆಂಗಳೂರಿನ ಹುಳಿವಮಾವಿನಲ್ಲಿ ಲಿವಿಂಗ್ ಟುಗೆದರ್ನಲ್ಲಿದ್ದ ಅಸ್ಸಾಂ ಮೂಲದ ಸಂಶುದ್ದೀನ್ ಎಂಬಾತ, ಕೊನೆಗೆ ಆಕೆಯನ್ನು ಕೊಲೆ ಮಾಡಿ ಶವವನ್ನು ಕಸದ ಲಾರಿಗೆ ಎಸೆದುಹೋಗಿದ್ದಾನೆ. ಕಸದ ಲಾರಿಯಲ್ಲಿ ಮಹಿಳೆಯ ಶವ ಕಂಡು ಪ್ರಕರಣದ ಜಾಡು ಹಿಡಿದಿದ್ದ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಇದೀಗ ಪ್ರಕರಣದ ರಹಸ್ಯ ಬಯಲಿಗೆಳೆದಿದ್ದಾರೆ. ವಿವರ ಇಲ್ಲಿದೆ.
ಬೆಂಗಳೂರು, ಜೂನ್ 30: ಬೆಂಗಳೂರು ನ ಚನ್ನಮ್ಮನಕೆರೆ ಠಾಣಾ ವ್ಯಾಪ್ತಿಯ ಸ್ಕೇಟಿಂಗ್ ಗ್ರೌಂಡ್ ಬಳಿ ನಡೆದಿದ್ದ ಕೊಲೆ ರಹಸ್ಯವನ್ನು (Crime news) ಬಯಲಿಗೆಳೆಯುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಇಬ್ಬರು ಮಕ್ಕಳ ತಾಯಿ ಜತೆ ವಿವಾಹಿತನ ಲಿವಿಂಗ್ ಟುಗೆದರ್ನಲ್ಲಿದ್ದ (Live-in Relationship) ವ್ಯಕ್ತಿಯೇ ಕೊಲೆ ಮಾಡಿದ ವಿಚಾರ ಗೊತ್ತಾಗಿದ್ದು, ಆರೋಪಿ ಸಂಶುದ್ದೀನ್ ಎಂಬಾತನನ್ನು ಭಾನುವಾರ ರಾತ್ರಿ ಬಂಧಿಸಲಾಗಿದೆ. ಸಿಸಿಟಿವಿ ದೃಶ್ಯ ಪರಿಶೀಲಿಸಿ ಆರೋಪಿಯನ್ನು ಬಂಧಿಸಿದ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಕೊಲೆ ರಹಸ್ಯವನ್ನು ಪತ್ತೆ ಮಾಡಿದ್ದಾರೆ. ಮೃತ ಮಹಿಳೆಯನ್ನು ಆಶಾ ಎಂದು ಗುರುತಿಸಲಾಗಿದೆ.
ಆಶಾ, ಸಂಶುದ್ದೀನ್ ವಿಚಿತ್ರ ಪ್ರೇಮ್ ಕಹಾನಿ
ಕೊಲೆ ಆರೋಪಿ ಸಂಶುದ್ದೀನ್ ಅಸ್ಸಾಂ ಮೂಲದವ. ಆತನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಹೆಂಡತಿ ಹಾಗೂ ಮಕ್ಕಳು ಅಸ್ಸಾಂನಲ್ಲೇ ಇದ್ದು, ಸಂಶುದ್ದೀನ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾನೆ. ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಆಶಾ ಪರಿಚಯವಾಗಿದೆ. ಆಶಾ ಗಂಡ ಮೃತಪಟ್ಟಿದ್ದು, ಇಬ್ಬರು ಮಕ್ಕಳು ಸಹ ಇದ್ದಾರೆ. ಇಬ್ಬರಲ್ಲೂ ಪ್ರಮಾಂಕುರವಾಗಿದ್ದು, ಹುಳಿಮಾವಿನಲ್ಲಿ ಮನೆ ಮಾಡಿಕೊಂಡು ಲಿವಿಂಗ್ ಟುಗೆದರ್ನಲ್ಲಿದ್ದರು.
ಕತ್ತು ಹಿಸುಕಿ ಕೊಲೆ, ಶವವನ್ನು ಕಸದ ಲಾರಿಗೆ ಎಸೆದು ಪರಾರಿ
ಲಿವಿಂಗ್ ಟುಗೆದರ್ನಲ್ಲಿದ್ದ ಆರೋಪಿ ಸಂಶುದ್ದೀನ್ ಹಾಗೂ ಆಶಾ ಆರಂಭದಲ್ಲಿ ಚೆನ್ನಾಗಿಯೇ ಇದ್ದರು. ನಂತರ ಆಶಾ ಪದೇ ಪದೇ ಜಗಳ ಮಾಡಲು ಆರಂಭಿಸಿದ್ದರು ಎನ್ನಲಾಗಿದೆ. ಶನಿವಾರ ಜಗಳ ಅತಿರೇಕಕ್ಕೆ ತಿರುಗಿದ್ದು, ಆಶಾ ಕತ್ತು ಹಿಸುಕಿ ಸಂಶುದ್ದೀನ್ ಕೊಲೆ ಮಾಡಿದ್ದಾನೆ.
ನಂತರ ಮೃತದೇಹವನ್ನು ಬೈಕ್ನಲ್ಲಿ ಇಟ್ಟುಕೊಂಡು ಬಂದಿದ್ದ ಆರೋಪಿ ಅದನ್ನು ಚನ್ನಮ್ಮನಕೆರೆ ಠಾಣಾ ವ್ಯಾಪ್ತಿಯ ಸ್ಕೇಟಿಂಗ್ ಗ್ರೌಂಡ್ ಬಳಿ ಕಸದ ಲಾರಿಯಲ್ಲಿ ಎಸೆದು ಪರಾರಿಯಾಗಿದ್ದ.

ಶನಿವಾರ ರಾತ್ರಿ ಸ್ಥಳೀಯ ವ್ಯಕ್ತಿಯೊಬ್ಬರು ಕಸ ಹಾಕಲು ಬಂದಿದ್ದಾಗ ಕಸದ ಲಾರಿಯಲ್ಲಿ ಯುವತಿಯ ತಲೆ ಕೂದಲು ಕಾಣಿಸಿತ್ತು. ಅವರು ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಶವವೊಂದು ಮೂಟೆಕಟ್ಟಿ ಎಸೆದ ಸ್ಥಿತಿಯಲ್ಲಿರುವುದನ್ನು ಕಂಡಿದ್ದಾರೆ. ನಂತರ ಪ್ರಕರಣ ದಾಖಲಿಸಿಕೊಂಡಿದ್ದ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು, ಹಂತಕನಿಗೆ ಶೋಧ ನಡೆಸಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರ ಕೈಗೆ ಹಂತಕ ಸಿಕ್ಕಿಬಿದ್ದಿದ್ದು, ಕೊಲೆ ರಹಸ್ಯ ಬಯಲಾಗಿದೆ.