ಕೇರಳದ ರಾಜಭವನದಲ್ಲಿ ನಡೆದ ಅಧಿಕೃತ ಕಾರ್ಯಕ್ರಮದಲ್ಲಿ ಕೇಸರಿ ಧ್ವಜ ಹಿಡಿದ ಭಾರತ ಮಾತೆಯ ಫೋಟೋ ಇರಿಸಿದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ವಿರುದ್ದ ಶಿಕ್ಷಣ ಸಚಿವ ವಿ. ಶಿವನ್ಕುಟ್ಟಿ ಕಿಡಿಕಾರಿದ್ದು, “ಈ ನಡೆಯು ಸಾಂವಿಧಾನಿಕ ಮಾನದಂಡಗಳ ಸ್ಪಷ್ಟ ಉಲ್ಲಂಘನೆ” ಎಂದಿದ್ದಾರೆ.
ಭಾರತಮಾತೆ ಎನ್ನಲಾಗುವ ಕೇಸರಿ ಧ್ವಜ ಹಿಡಿದ ಮಹಿಳೆಯ ಭಾವಚಿತ್ರ ‘ಧಾರ್ಮಿಕ ಚಿತ್ರ’ ಎಂದು ಶಿವನ್ಕುಟ್ಟಿ ಹೇಳಿದ್ದಾರೆ.
“ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಅಧಿಕೃತ ಕಾರ್ಯಕ್ರಮಗಳ ಸಂದರ್ಭದಲ್ಲಿ ಅಂತಹ ಚಿತ್ರವನ್ನು ಪೂಜಿಸುವುದು ‘ಸಂವಿಧಾನದ ಮೂಲ ತತ್ವಗಳನ್ನು ಬುಡಮೇಲು ಮಾಡಿದಂತೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಶಿವನ್ಕುಟ್ಟಿ ಹೇಳಿದ್ದಾರೆ.
ರಾಜಭವನದಲ್ಲಿ ನಡೆದ ಅಧಿಕೃತ ಕಾರ್ಯಕ್ರಮದಲ್ಲಿ ಕೇಸರಿ ಧ್ವಜ ಹೊತ್ತ ಭಾರತ ಮಾತೆಯ ಪೋಟೋ ಇರಿಸಿದ್ದಕ್ಕಾಗಿ ಎರಡು ಬಾರಿ ಸರ್ಕಾರ ಕಾರ್ಯಕ್ರಮವನ್ನು ಬಹಿಷ್ಕರಿಸಿತ್ತು. ಆರಂಭದಲ್ಲಿ ಸಿಎಂ ಪಿಣರಾಯಿ ವಿಜಯನ್ ಕಾರ್ಯಕ್ರಮವೊಂದಕ್ಕೆ ಗೈರಾಗದರೆ, ಎರಡನೇ ಬಾರಿ ಸಚಿವ ಶಿವನ್ಕುಟ್ಟಿ ಕಾರ್ಯಕ್ರಮದಿಂದ ಅರ್ಧದಲ್ಲಿ ನಿರ್ಗಮಿಸಿದ್ದರು.
ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರ ನಡೆ ಕುರಿತು ಎಲ್ಲೆಡೆ ಚರ್ಚೆಯಾಗುತ್ತಿದೆ. ರಾಜಕಾರಣಿಗಳ ನಡುವೆ ವಾಗ್ಯುದ್ಧ ಏರ್ಪಟ್ಟಿದೆ. ಬೀದಿಗಳಲ್ಲಿ ಪ್ರತಿಭಟನೆಗಳು ಆಯೋಜಿಸಲಾಗುತ್ತಿದೆ. ಈ ನಡುವೆ ಸಚಿವ ಶಿವನ್ಕುಟ್ಟಿ ರಾಜ್ಯಪಾಲರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಸಂವಿಧಾನದ ವಿವಿಧ ವಿಧಿಗಳನ್ನು ಉಲ್ಲೇಖಿಸಿದ ಶಿವನ್ಕುಟ್ಟಿ, “ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವವರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಯಾವುದೇ ಧಾರ್ಮಿಕ ಆಚರಣೆಯನ್ನು ಉತ್ತೇಜಿಸುವುದನ್ನು ನಿಷೇಧಿಸಲಾಗಿದೆ. ಈ ವಿಧಿಗಳು ಧಾರ್ಮಿಕ ವಿಷಯಗಳಲ್ಲಿ ರಾಜ್ಯದ ತಟಸ್ಥತೆಯನ್ನು ಆದೇಶಿಸುತ್ತವೆ” ಎಂದಿದ್ದಾರೆ.
“ಆದ್ದರಿಂದ, ರಾಜ್ಯಪಾಲರ ನಡೆಯು ಭಾರತೀಯ ಸಂವಿಧಾನದ ಜಾತ್ಯತೀತ ಸ್ವರೂಪದ ಮೇಲಿನ ಸ್ಪಷ್ಟ ದಾಳಿಯಾಗಿದೆ. ಇದು ಶಿಷ್ಟಾಚಾರದ ಉಲ್ಲಂಘನೆ ಮಾತ್ರವಲ್ಲದೆ, ಸಂವಿಧಾನವು ಖಾತರಿಪಡಿಸಿದ ಜಾತ್ಯತೀತ ಮೌಲ್ಯಗಳನ್ನು ದುರ್ಬಲಗೊಳಿಸುವ ಕೃತ್ಯವಾಗಿದೆ” ಎಂದು ಶಿವನ್ಕುಟ್ಟಿ ಹೇಳಿದ್ದಾರೆ.
ಭಾವಚಿತ್ರ ಪ್ರದರ್ಶನಕ್ಕೆ ಸಂಬಂಧಿಸಿದಂತೆ ರಾಜಭವನದಲ್ಲಿ ನಡೆದ ಅಧಿಕೃತ ಕಾರ್ಯಕ್ರಮವನ್ನು ಬಹಿಷ್ಕರಿಸಿದ ತಮ್ಮ ಇತ್ತೀಚಿನ ನಿರ್ಧಾರವನ್ನು ಸಚಿವರು ಸಮರ್ಥಿಸಿಕೊಂಡಿದ್ದಾರೆ.
“ಇಂತಹ ಸಾಂವಿಧಾನಿಕ ಉಲ್ಲಂಘನೆಗಳಿಗೆ ಸಾಕ್ಷಿಯಾಗಲು ಸಾಧ್ಯವಾಗದ ಕಾರಣ ನಾನು ಹೊರನಡೆದೆ. ಸಂವಿಧಾನವನ್ನು ಎತ್ತಿಹಿಡಿಯುವ ನನ್ನ ಜವಾಬ್ದಾರಿಯನ್ನು ನಾನು ಪೂರೈಸಿದ್ದೇನೆ. ಸಂವಿಧಾನದ ಜಾತ್ಯತೀತ ಸ್ವರೂಪವನ್ನು ರಕ್ಷಿಸಲು ನಾನು ಯಾವುದೇ ಹಂತಕ್ಕೆ ಹೋಗಲು ಬದ್ಧನಾಗಿದ್ದೇನೆ” ಎಂದಿದ್ದಾರೆ.
ವಿವಾದಿತ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ರಾಜ್ಯಪಾಲರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶಿವನ್ಕುಟ್ಟಿ, “ರಾಜ್ಯಪಾಲರು ಸಂವಿಧಾನದ ಜಾತ್ಯತೀತ ಸ್ವರೂಪವನ್ನು ಅವಮಾನಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
ಅಧಿಕೃತ ಸಮಾರಂಭದಲ್ಲಿ ಕೇಸರಿ ಧ್ವಜ ಹೊತ್ತ ಭಾರತ ಮಾತೆಯ ಚಿತ್ರವನ್ನು ಪ್ರದರ್ಶಿಸುವುದು ಮತ್ತು ಪೂಜಿಸುವುದು ದೇಶದ ಜಾತ್ಯತೀತ ಸ್ವರೂಪಕ್ಕೆ ವಿರುದ್ಧವಾಗಿ ನಿರ್ದಿಷ್ಟ ಧಾರ್ಮಿಕ ಚಿಹ್ನೆಯನ್ನು ‘ಅಧಿಕೃತವಾಗಿ ಅನುಮೋದಿಸಿದಂತೆ’ ಎಂದಿದ್ದಾರೆ.
ಅಧಿಕೃತ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಚಿಹ್ನೆಗಳನ್ನು ಹೊರತುಪಡಿಸಿ ಬೇರೆ ಯಾವುದನ್ನಾದರೂ ಬಳಸುವ ಬಗ್ಗೆ ಸರ್ಕಾರದ ಭಿನ್ನಾಭಿಪ್ರಾಯದ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯಪಾಲರಿಗೆ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.