ನೆಲಮಂಗಲದ ಹಳೇ ನಿಜಗಲ್ ಬಳಿ ಸೋಮವಾರ ರಾತ್ರಿ ಕಾರು ಓವರ್ಟೇಕ್ ಮಾಡುವ ವಿಚಾರದಲ್ಲಿ ನಡೆದ ಗಲಾಟೆ ಸಂಬಂಧ ಉತ್ತರ ಕನ್ನಡದ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಅವರ ಪುತ್ರ ಅಶುತೋಷ್, ಚಾಲಕ ಮತ್ತು ಗನ್‌ಮ್ಯಾನ್ ಮೇಲೆ ಹಲ್ಲೆ ಆರೋಪ ಕೇಳಿಬಂದಿದೆ. ನಾಲ್ವರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಈ ಸಂಬಂಧ ಹಲ್ಲೆಗೊಳಗಾದವರು ನೀಡಿದ ದೂರಿನ ಮೇರೆಗೆ ದಾಬಸ್ಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನೆಲಮಂಗಲ, ಜೂನ್ 24: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ (Nelamangala) ತಾಲೂಕಿನ ಹಳೇ ನಿಜಗಲ್ ಬಳಿ ಇನ್ನೋವಾ ಕಾರಿನಲ್ಲಿದ್ದ ನಾಲ್ವರ ಮೇಲೆ ಹಲ್ಲೆ, ಗೂಂಡಾಗಿರಿ ನಡೆಸಿದ ಆರೋಪದಲ್ಲಿ ಕೇಂದ್ರದ ಮಾಜಿ ಸಚಿವ, ಉತ್ತರ ಕನ್ನಡ ಕ್ಷೇತ್ರದ ಮಾಜಿ ಸಂಸದ ಅನಂತ ಕುಮಾರ್ ಹೆಗಡೆ ಅವರ ಕಾರು ಚಾಲಕ ಹಾಗೂ ಗನ್‌ಮ್ಯಾನ್ ಮೇಲೆ ಎಫ್ಐಆರ್ ದಾಖಲಾಗಿದೆ. ಅನಂತ ಕುಮಾರ್ ಹೆಗಡೆ ಪುತ್ರ ಅಶುತೋಷ್, ಗನ್‌ಮ್ಯಾನ್ ಶ್ರೀಧರ್, ಚಾಲಕ ಮಹೇಶ್ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿದ್ದು ಆ ಸಂಬಂಧ ದೂರು ದಾಖಲಾಗಿದೆ. ಘಟನೆ ವೇಳೆ ಅನಂತ ಕುಮಾರ್ ಹೆಗಡೆ ಸಹ ಕಾರಿನಲ್ಲಿದ್ದು, ಅವರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಏನಿದು ಘಟನೆ? ನಿಜಗಲ್ ಬಳಿ ನಡೆದಿದ್ದೇನು?
ಅನಂತ್ ಕುಮಾರ್ ಹೆಗಡೆ ಅವರು ತೆರಳುತ್ತಿದ್ದ ಕಾರನ್ನು, ಓವರ್ ಟೇಕ್ ಮಾಡಲಾಯಿತು ಎಂಬ ಕಾರಣಕ್ಕೆ ಇನ್ನೋವಾ ಕಾರಿನಲ್ಲಿದ್ದ ನಾಲ್ವರ ಮೇಲೆ, ಅನಂತ್ ಕುಮಾರ್ ಹೆಗಡೆ ಪುತ್ರ ಅಶುತೋಷ್, ಚಾಲಕ ಹಾಗೂ ಗನ್‌ಮ್ಯಾನ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನೋವಾ ಕಾರಿನಲ್ಲಿ ಸಲ್ಮಾನ್, ಸೈಫ್, ಇಲಿಯಾಜ್ ಖಾನ್ ಹಾಗೂ ಉನ್ನೀಸಾ ಎಂಬವರ ಮೇಲೆ ಹಲ್ಲೆ ನಡೆದಿದ್ದು, ಅವರಿಗೆ ದಾಬಸ್‌ಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅನಂತಕುಮಾರ್ ಹೆಗಡೆ ಹೇಳಿದ್ದೇನು?
ಘಟನೆ ಬಳಿಕ ನೆಲಮಂಗಲ ಗ್ರಾಮಾಂತರ ಠಾಣೆಯ ಡಿವೈಎಸ್ಪಿ ಕಚೇರಿಯಲ್ಲಿ ಅನಂತ್ ಕುಮಾರ್ ಹೆಗಡೆ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಇದೇ ವೇಳೆ ಅವರು, ಓವರ್ ಟೇಕ್ ವೇಳೆ ಕಾರಿಗೆ ಮತ್ತೊಂದು ಕಾರ್ ಟಚ್ ಆಗಿದ್ದಕ್ಕೆ ಗಲಾಟೆ ನಡೆದೆ ಎಂದು ತಿಳಿಸಿದ್ದಾರೆ.
ದಾಬಸ್ಪೇಟೆ ಪೊಲೀಸ್ ಠಾಣೆ ಬಳಿ ರಾತ್ರಿ ಹೈಡ್ರಾಮಾ
ಘಟನೆ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ಪೊಲೀಸ್ ಠಾಣೆ ಬಳಿ ರಾತ್ರಿಯೇ ಜನರು ದೌಡಾಯಿಸಿದರು. ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಕೂಡ ಆಗಮಿಸಿದರು. ಠಾಣೆ ಎದುರು ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿತ್ತು.
ಹಲ್ಲೆಗೊಳಗಾಗಿದ್ದ ಸೈಫ್ ನೀಡಿದ ದೂರಿನ ಮೇರೆಗೆ ದಾಬಸ್ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಅನಂತಕುಮಾರ್ ಹೆಗಡೆ A1, ಗನ್‌ಮ್ಯಾನ್ ಶ್ರೀಧರ್ A2, ಕಾರು ಚಾಲಕ ಮಹೇಶ್ A3 ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಬಿಎನ್ಎಸ್ ಕಾಯ್ದೆಯ 6 ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.