ಕರ್ನಾಟಕ ಕರಾವಳಿಯಲ್ಲಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಗಳಲ್ಲಿ ತುಳು ಭಾಷೆ ಬಳಕೆಗೆ ನಿರ್ಬಂಧ ವಿಧಿಸಿರುವುದು ಭಾರೀ ವಿವಾದ ಸೃಷ್ಟಿಸಿದೆ. ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಲಾಗಿದ್ದು, ಪರ ವಿರೋಧದ ಚರ್ಚೆಗೆ ಕಾರಣವಾಗಿದೆ. ಇಷ್ಟಾಗುತ್ತಿದ್ದಂತೆಯೇ ಆದೇಶವನ್ನು ವಾಪಸ್ ಪಡೆಯಲಾಗಿದೆ. ಹಾಗಾದ್ರೆ ಏನಿದು ವಿವಾದ? ಇಲ್ಲಿದೆ ವಿವರ.
ಮಂಗಳೂರು, ಜೂನ್ 21: ತಮಿಳು, ಕನ್ನಡ ಭಾಷೆಗಳಷ್ಟೇ ಪ್ರಾಚೀನವಾದ ಭಾಷೆ ತುಳು (Tulu Language). ಅವಿಭಜಿತ ದಕ್ಷಿಣ ಕನ್ನಡ, ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಗಳಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿರುವ ತುಳು ಭಾಷೆಗೆ ರಾಜ್ಯ ಭಾಷೆಯ ಸ್ಥಾನಮಾನ ನೀಡಬೇಕೆಂಬ ಆಗ್ರಹ, ಹೋರಾಟ ದಶಕಗಳದ್ದು. ಆದರೆ ಇದೀಗ ತುಳು ಭಾಷೆ ಬಳಕೆ ಮಾಡಬಾರದು (Tulu Language Ban) ಎನ್ನುವ ಸರ್ಕಾರಿ ಆದೇಶ ಕರಾವಳಿಯಲ್ಲಿ (Coastal Karnataka) ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮ ಪಂಚಾಯತ್ ಸಾಮಾನ್ಯ ಸಭೆಗಳಲ್ಲಿ ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡುವ ಬಗ್ಗೆ ಆದೇಶವೊಂದನ್ನು ಹೊರಡಿಸಲಾಗಿದೆ.
ತುಳು ಭಾಷೆ ನಿರ್ಬಂಧ ಆದೇಶದಲ್ಲೇನಿದೆ?
ಈ ಆದೇಶದಲ್ಲಿ, ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಚರ್ಚಿಸುವಾಗ ತುಳು ಭಾಷೆ ಬಳಕ ಮಾಡದಂತೆ ಮತ್ತು ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡುವಂತೆ ಪಂಚಾಯತ್ ಅಭಿವೃದ್ಧಿ, ಅಧಿಕಾರಿಯವರಿಗೆ ನಿರ್ದೇಶನ ನೀಡಲು ಮುರಳೀಧರ ಎಂಬವರು ಮನವಿ ಸಲ್ಲಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಮನವಿಯ ಕುರಿತು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲು ಈ ಮೂಲಕ ಸೂಚಿಸಿದೆ ಎಂದು ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್‌ನಿಂದ ಆದೇಶ ಮಾಡಲಾಗಿದೆ. ಈ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ವಿವಾದದ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ: ಸುತ್ತೋಲೆ ವಾಪಸ್
ಈ ಬೆಳವಣಿಗೆ ವಿವಾದಕ್ಕೀಡಾದ ಬೆನ್ನಲ್ಲೇ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್ರನ್ನು ತುಳು ಸಂಘಟನೆಗಳ ಪ್ರಮುಖರು ಭೇಟಿಯಾಗಿದ್ದಾರೆ. ಈ ಸುತ್ತೋಲೆಯನ್ನು ವಾಪಾಸ್ ಪಡೆಯಬೇಕಂದು ಆಗ್ರಹಿಸಿದ್ದಾರೆ. ಭಾರೀ ವಿವಾದದ ಬಳಿಕ ಎಚ್ಚೆತ್ತ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಈ ಸುತ್ತೋಲೆಯನ್ನು ವಾಪಾಸ್ ಪಡೆದಿದೆ.
ಆದೇಶ ಹೊರಡಿಸಿದ ಅಧಿಕಾರಿಯ ಅಮಾನತಿಗೆ ಆಗ್ರಹ
ತುಳು ಸಂಘಟನೆಗಳ ಆಗ್ರಹಕ್ಕೆ ಮಣಿದ ಅಧಿಕಾರಿಗಳು ತುಳು ಭಾಷೆ ಬಳಕೆ ನಿಷೇಧದ ಆದೇಶ ನೀಡಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಹೋರಾಟಗಾರರು, ಆ ಆದೇಶ ಹೊರಡಿಸಿದ ಅಧಿಕಾರಿಯನ್ನು ಅಮಾನತು ಮಾಡುವಂತೆ ಒತ್ತಾಯಿಸಿದ್ದಾರೆ. ತುಳು ಭಾಷೆಯ ವಿರುದ್ಧ ಅವಹೇಳನ ಮಾಡಿದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
2025ರ ಎಪ್ರಿಲ್ 22ರಂದು ಈ ಆದೇಶ ಹೊರಡಿಸಲಾಗಿತ್ತು. ಅದರ ಪ್ರತಿ ಕೆಲವು ದಿನಗಳ ಹಿಂದೆ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಹೀಗಾಗಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಬಿಜೆಪಿ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸೇರಿ ಹಲವು ನಾಯಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸದ್ಯ ಭಾರೀ ಆಕ್ರೋಶದ ಬೆನ್ನಲ್ಲೇ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು ಭಾಷಾ ವಿವಾದವೊಂದು ಬಗೆಹರಿದಂತಾಗಿದೆ.