ವಿಜಯಪುರ: ರಾಜ್ಯ ಬಿಜೆಪಿಯಲ್ಲಿ (BJP) ಅಸಮಾಧಾನ ತುಂಬಿ ತುಳುಕುತ್ತಿದ್ದು ಸದ್ಯ ಐಸಿಯುನಲ್ಲಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ವಾಗ್ದಾಳಿ ನಡೆಸಿದರು.
ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಒಂದು ಹೋರಾಟ ಮಾಡಬೇಕೆಂದರೆ ಜನ ಸೇರುವುದಿಲ್ಲ. ಇದಕ್ಕೆ ಕಾರಣ ಎಂದರೆ ರಾಜ್ಯ ಬಿಜೆಪಿ ನಾಯಕತ್ವ. ಇನ್ನೂ ಕುಮಾರಸ್ವಾಮಿಯವರ ಜೊತೆ ಕೂಡ ಹೊಂದಾಣಿಕೆ ಇಲ್ಲ. ಜೆಡಿಎಸ್ (JDS) ನಮ್ಮ ಮಿತ್ರ ಪಕ್ಷವಾಗಿದ್ದರೂ ಕೂಡ ಅದನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಈಗಲಾದರೂ ಅಮಿತ್ ಶಾ ಅವರು ತಿಳಿದುಕೊಳ್ಳಬೇಕು.ಯಡ್ಡಿಯೂರಪ್ಪ ಕುಟುಂಬದ ಬಗ್ಗೆ, ಯಡ್ಡಿಯೂರಪ್ಪ ಅವರ ಅಸ್ತಿತ್ವ ಏನು ಉಳಿದಿಲ್ಲ ಎಂದು ತಿಳಿದುಕೊಳ್ಳಬೇಕು. ಈಗಲೂ ಯಡ್ಡಿಯೂರಪ್ಪನನ್ನ ಜೀ,ಜೀ ಅಂದರೆ ಕರ್ನಾಟಕದಲ್ಲಿ ಬಿಜೆಪಿಗೆ ಬಹಳ ಕಷ್ಟ ಆಗುತ್ತದೆ ಎಂದರು.
ಯಡ್ಡಿಯೂರಪ್ಪ ಕುಟುಂಬವನ್ನ ಬಿಜೆಪಿಯಿಂದ ಮುಕ್ತ ಮಾಡಬೇಕು. ಪ್ರತಿನಿತ್ಯ ಹಿಂದೂ ಕಾರ್ಯಕರ್ತರ ಮೇಲೆ ಕೇಸ್ ಹಾಕುತ್ತಿದ್ದಾರೆ. ಇವರು ಸಿದ್ದರಾಮಯ್ಯ, ಡಿಕೆಶಿ, ಜಮೀರ್ ಅಹ್ಮದ್ ಜೊತೆ ಸಂತೋಷವಾಗಿದ್ದಾರೆ. ಇದು ಕಾರ್ಯಕರ್ತರಿಗೆ ಏನು ಸಂದೇಶ ಕೊಡುತ್ತದೆ. ಅವರೊಂದಿಗೆ ನಿಮಗೆ ಅಷ್ಟೊಂದು ಆತ್ಮೀಯತೆ ಇದ್ದರೆ ಕಾಂಗ್ರೆಸ್ ಪಕ್ಷ ಸೇರಿಕೊಳ್ಳಿ. ಹಿಂದೂ ಕಾರ್ಯಕರ್ತರನ್ನು ಬಲಿ ತಗೆದುಕೊಳ್ಳಬೇಡಿ ಎಂದು ಕಿಡಿಕಾರಿದರು.
ಅಲ್ಪಸಂಖ್ಯಾತರಿಗೆ ವಸತಿಯಲ್ಲಿ 5% ಏರಿಕೆ ವಿಚಾರವಾಗಿ ಮಾತನಾಡಿದ ಅವರು, ಜೈನ್, ಸಿಖ್, ಕ್ರೈಸ್ತರು ಅಲ್ಪಸಂಖ್ಯಾತರಿದ್ದಾರೆ. ಅವರಿಗೆ 10% ಮಾತ್ರ, ಮುಸ್ಲಿಂರಿಗೆ 80% ಕೊಡುತ್ತಾರೆ. ಬೆಳಗಾವಿ ಅಧಿವೇಶನದಲ್ಲಿ ನನಗೆ ಹಾಗೂ ಜಮೀರ್‌ಗೆ ಇದೇ ವಿಷಯದಿಂದ ಜಗಳವಾಗಿತ್ತು. ಮುಸ್ಲಿಂರಿಗೆ 80% ಹಂಚಿಕೆ ಮಾಡಲು ಇರ‍್ಯಾರು? ಹಿಂದೂಗಳಿಗೆ ಇಲ್ಲಿ ಏನಿಲ್ಲ. ಸಿದ್ದರಾಮಯ್ಯ, ಡಿಕೆಶಿ ಬಹುತೇಕ ಮೂರು ವರ್ಷದಲ್ಲಿ ಕರ್ನಾಟಕವನ್ನ ಮತ್ತೊಂದು ಕೇರಳ, ಪಶ್ಚಿಮ ಬಂಗಾಳನಂತೆ ಮುಸ್ಲಿಂ ರಾಜ್ಯ ಮಾಡುತ್ತಾರೆ. ಸಿದ್ದರಾಮಯ್ಯ ತಮ್ಮ ಸಮುದಾಯಕ್ಕೆ ಕೊಡುಗೆ ಕೊಡಲಿ. ಕುರಿಗಾಹಿಗಳಿಗೆ 5 ಲಕ್ಷ ರೂ, ಕೊಡಲಿ. ಮುಸ್ಲಿಂರಿಗೆ ಬಿಟ್ಟು ಬೇರೆ ಯಾರಿಗೂ ಕೊಡುತ್ತಿಲ್ಲ. ಕೇವಲ ಸಾಬ್ರೂ, ಸಾಬ್ರೂ ಎನ್ನುತ್ತಾರೆ. ರಾಜ್ಯದಲ್ಲಿ ಸಾಬ್ರೂ ಬಿಟ್ರೇ ಬೇರೆ ಯಾರು ಇಲ್ವಾ? ಎಂದು ಆಗ್ರಹಿಸಿದರು.