
ಮಂಗಳೂರು: ಸೀಮಂತದ ದಿನ ನಿಗದಿಯಾಗಿದ್ದ ಗರ್ಭಿಣಿ ಮಹಿಳೆ ಹಾಗೂ ಆಕೆಯ ಗಂಡನ ಮೃತದೇಹ ಪತ್ತೆ ಆಗಿರುವ ಘಟನೆ ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಬಡಗುಂಡಿ ಎಂಬಲ್ಲಿ ನಡೆದಿದೆ.
ಸಜೀಪಮೂಡ ಗ್ರಾಮದ ಮಿತ್ತಮಜಲು ನಿವಾಸಿ ತಿಮ್ಮಪ್ಪ ಮೂಲ್ಯ ಹಾಗೂ ಇವರ ಪತ್ನಿ ಜಯಂತಿ ಮೃತರು. ಪೊಲೀಸರು ಘಟನಾ ಸ್ಥಳವನ್ನು ಪರಿಶೀಲನೆ ಮಾಡುವಾಗ ತಿಮ್ಮಪ್ಪ ಮೂಲ್ಯ ಮೃತದೇಹ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆ ಆಗಿದೆ. ಹೆಂಡತಿಯ ಮೃತದೇಹ ಬೆಡ್ ಮೇಲೆ ಬಿದ್ದಿದ್ದು ಕುತ್ತಿಗೆ ಭಾಗದಲ್ಲಿ ಗಾಯದ ಗುರುತುಗಳಿವೆ. ಆದರೆ ಇದಕ್ಕೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.

ಇವರಿಗೆ ಕಳೆದ 15 ವರ್ಷಗಳ ಹಿಂದೆ ಮದುವೆಯಾಗಿತ್ತು. ಆದರೆ ಈವರೆಗೆ ದಂಪತಿಗೆ ಮಕ್ಕಳು ಆಗಿರಲಿಲ್ಲ. ಪ್ರಸ್ತುತ ಪತ್ನಿ ಜಯಂತಿ ಗರ್ಭಿಣಿಯಾಗಿದ್ದರು. ಜುಲೈ 2ಕ್ಕೆ ಸೀಮಂತದ ದಿನಾಂಕವನ್ನು ನಿಗದಿ ಮಾಡಲಾಗಿತ್ತು. ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದ ದಂಪತಿ ಕೊನೆಯುಸಿರೆಳೆದಿದ್ದಾರೆ.
ಆದರೆ ಘಟನೆಗೆ ನಿಖರ ಕಾರಣ ಏನು ಎಂಬುದು ತಿಳಿದಿಲ್ಲ. ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.