Ashraf Kammaje | Updated : Jun 19 2025, 11:28 AM
ಎರಡು ವರ್ಷಗಳ ಕಾಲ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ ಮುಲ್ಲೈ ಮುಹಿಲನ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಮಕ್ಕಳಿಂದ ‘ಚುಟ್ಟಿ ಡಿಸಿ’ ಎಂದೇ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಅವರ ಸರಳತೆ, ಸ್ಪಂದನಶೀಲತೆ ಮತ್ತು ಜನಪರ ಆಡಳಿತಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಎರಡು ವರ್ಷಗಳ ಕಾಲ ಉತ್ತಮ ಕಾರ್ಯ ನಿರ್ವಹಿಸಿದ್ದ ಜಿಲ್ಲಾಧಿಕಾರಿ (ಡಿಸಿ) ಮುಲ್ಲೈ ಮುಹಿಲನ್ (DC Mullai Muhilan) ಅವರನ್ನು ಜೂನ್ 17ರಂದು ವರ್ಗಾವಣೆ ಮಾಡಲಾಗಿದೆ. ಮಕ್ಕಳ ಪ್ರೀತಿಯ ಚುಟ್ಟಿ ಡಿಸಿ (Chutti DC) ಎಂದೇ ಖ್ಯಾತರಾಗಿದ್ದ ಅವರನ್ನು ಮಳೆಗಾಲದ ಸಮಯದಲ್ಲಿ ಹೆಚ್ಚು ಮಕ್ಕಳು ಪ್ರೀತಿಯಿಂದ ನೆನೆಯುತ್ತಿದ್ದರು. ಮಾತ್ರವಲ್ಲ ಜಿಲ್ಲೆಯ ಜನರ ಮನಸ್ಸಲ್ಲಿ ಆಳವಾದ ಪರಿಣಾಮ ಬೀರಿದ್ದ ಡಿಸಿಯಾಗಿ ಸೇವಾ ಅವಧಿಯಲ್ಲಿ ಪರಿಣಾಮಕಾರಿ ಕೆಲಸವನ್ನು ಮಾಡಿದ್ದರು. ಕರಾವಳಿ ಜನತೆಯ ಹೃದಯ ಗೆದ್ದ ಉತ್ತಮ ಆಡಳಿತಕ್ಕೆ ತೆರೆ ಬಿದ್ದಿದೆ. ಅವರ ವಿದಾಯಕ್ಕೆ ಇಡೀ ಸೋಷಿಯಲ್ ಮೀಡಿಯಾದಲ್ಲಿ ಕರಾವಳಿ ಜನ ಇಂದು ನೆನಪಿಸಿಕೊಳ್ಳುತ್ತಿದ್ದಾರೆ.
ಸರಳತೆ ಮತ್ತು ಸ್ಪಂದನೆಗೆ ಮೌಲ್ಯ ನೀಡಿದ ಮುಲ್ಲೈ ಮುಹಿಲನ್, ದಕ್ಷಿಣ ಕನ್ನಡದಲ್ಲಿ ಜನಸಾಮಾನ್ಯರಿಗೆ ಸುಲಭವಾಗಿ ಒದಗಬಹುದಾದ ಆಡಳಿತದ ಮಾದರಿಯನ್ನು ತೋರಿಸಿಕೊಟ್ಟವರು. ಸಮಸ್ಯೆಗಳಿಗೆ ತ್ವರಿತ ಪರಿಹಾರ, ಜನರ ಸಮಸ್ಯೆಯನ್ನು ಆಲಿಸುವ ಶಕ್ತಿ ಹಾಗೂ ಪ್ರಾಮಾಣಿಕ ನಿರ್ಧಾರಗಳ ಮೂಲಕ ಅವರು ಜನಮನದಲ್ಲಿ ಪ್ರೀತಿಯ ಸ್ಥಾನ ಗಳಿಸಿದ್ದರು.
ಚುಟ್ಟಿ ಡಿಸಿ ಹೆಸರೇಕೆ?
ವಿಶೇಷವಾಗಿ ವಿದ್ಯಾರ್ಥಿಗಳ ನಡುವೆ ಅವರು ಅತ್ಯಂತ ಜನಪ್ರಿಯರಾಗಿದ್ದು, ಮಳೆಗಾಲದಲ್ಲಿ ಶಾಲಾ ರಜೆ ಘೋಷಿಸುತ್ತಿದ್ದ ಕಾರಣ ಅವರು ಪ್ರೀತಿಯಿಂದ ‘ಚುಟ್ಟಿ ಡಿಸಿ’ ಎಂದೇ ಮಕ್ಕಳು ಕರೆಯುತ್ತಿದ್ದರು. ಮಕ್ಕಳ ಸುರಕ್ಷತೆಯನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಮುಖ್ಯವಾಗಿ ಮಳೆಗಾಲದಲ್ಲಿ ಅವರ ಮಾನವೀಯ ನೀತಿ ಮತ್ತು ತ್ವರಿತ ನಿರ್ಧಾರಗಳಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಬದಲಾವಣೆಯ ನಾಂದಿ
ಹಲವು ಬದಲಾವಣೆಗಳಿಗೆ ನಾಂದಿ ಹಾಡಿದ ಮುಲ್ಲೈ ಮುಹಿಲನ್, ಜಿಲ್ಲೆಯ ಅಭಿವೃದ್ಧಿ ಹಾಗೂ ಸದುಪಯೋಗವಾಗುವ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಅವರು ಪಡೀಲ್‌ನಲ್ಲಿ ನಿರ್ಮಿಸಲಾದ ಹೊಸ ಡಿಸಿ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡ ಮೊದಲ ಜಿಲ್ಲಾಧಿಕಾರಿ. ಮತ್ತು ಗಮನಾರ್ಹ ಬದಲಾವಣೆಗಳಿಗೆ ಸಾಕ್ಷಿಯಾದ ಡಿಸಿ. ಭೂಕುಸಿತದ ತೀವ್ರತೆಯನ್ನು ಕಡಿಮೆಗೊಳಿಸುವ ಕ್ರಮಗಳಿಂದ ಹಿಡಿದು, ಈಜುಕೊಳ ಉದ್ಘಾಟನೆ, ಕರಾವಳಿ ಉತ್ಸವ ಯಶಸ್ವಿ ಆಯೋಜನೆ, ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಆರೋಗ್ಯ ಸೌಲಭ್ಯಗಳ ಸುಧಾರಣೆ ಇತ್ಯಾದಿ ಹಲವು ಸಾಧನೆಗಳು ಅವರ ಅಧಿಕಾರಾವಧಿಯಲ್ಲಿ ನಡೆದಿದೆ.
ಗೋಳಿಬಜೆ ಫೇವರೆಟ್
ತಮ್ಮ ವಿದಾಯದ ಬಗ್ಗೆ ಮಾತನಾಡಿದ ಅವರು “ದಕ್ಷಿಣ ಕನ್ನಡ ಎಂದೆಂದಿಗೂ ನನ್ನ ಹೃದಯಕ್ಕೆ ಹತ್ತಿರವಿರುವ ಜಿಲ್ಲೆ. ಇಲ್ಲಿ ಕಳೆದ ಎರಡು ವರ್ಷಗಳು ನನ್ನ ವೃತ್ತಿಪರ ಹಾಗೂ ವೈಯಕ್ತಿಕ ಬದುಕಿನಲ್ಲಿ ದೊಡ್ಡ ಬದಲಾವಣೆ ತಂದಿದೆ. ಜನರಿಂದ ನನ್ನ ಸೇವೆಗೆ ಸಿಕ್ಕ ಗೌರವ, ಪ್ರೀತಿ ಮತ್ತು ಬೆಂಬಲ ಎಂದಿಗೂ ಮರೆಯಲಾಗದು. ಜಿಲ್ಲೆಯ ಬೆಳವಣಿಗೆಗಾಗಿ ಕೈಗೊಂಡ ಹಲವು ಉಪಕ್ರಮಗಳು ನನ್ನ ಜೀವನದಲ್ಲಿ ಸದಾ ನೆನಪಾಗುತ್ತವೆ” ಎಂದು ಹೇಳಿದರು.
ದಕ್ಷಿಣ ಕನ್ನಡ ವೈಯಕ್ತಿಕವಾಗಿ ನನ್ನ ಹೃದಯಕ್ಕೆ ತುಂಬಾ ಹತ್ತಿರವಾದುದು, ಇಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿದ್ದು ನನಗೆ ತುಂಬಾ ಖುಷಿ ಕೊಟ್ಟಿದೆ. ಸಾಕಷ್ಟು ಜನರ ವಿಶ್ವಾಸ ಪ್ರೀತಿ ಸಿಕ್ಕಿದೆ. ಹಲವರ ಬೆಂಬಲದಿಂದ ಸಾಕಷ್ಟು ಕೆಲ ಮಾಡಲು ಅವಕಾಶ ಸಿಕ್ಕಿದೆ. ಕರಾವಳಿಯಲ್ಲಿ ಬಹುತೇಕ ಜಾಗಗಳು, ತಾಣಗಳೂ ನನಗೆ ಇಷ್ಟ. ನನಗೆ ಇಲ್ಲಿನ ಗೋಳಿಬಜೆ ತಿನಿಸು ತುಂಬಾ ಇಷ್ಟ , ಶಶಿಹಿತ್ಲು ಬೀಚ್‌ನಲ್ಲಿ ಸ್ಟ್ಯಾಂಡ್-ಅಪ್ ಸರ್ಫಿಂಗ್ ಮತ್ತು ತಣ್ಣೀರುಬಾವಿ ಬೀಚ್ ಸಹಿತ ಹಲವು ಸ್ಥಳಗಳು ಶಾಂತಿ ಮತ್ತು ಆನಂದ ನೀಡಿದ ತಾಣಗಳಾಗಿವೆ ಎಂದೂ ಹೇಳಿದರು.
ಮಂಗಳೂರು ನನ್ನ ಜೀವನದ ಒಂದು ಭಾಗ
ಶಾಲಾ ಮಕ್ಕಳಿಗೆ ರಜಾ ಘೋಷಣೆ ಮಾಡುವ ನಿರ್ಧಾರ ಸುಲಭವಲ್ಲ, ಆದರೆ ಅದು ಸದಾ ಅವರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಲಾಗುತ್ತಿತ್ತು. ಪರಿಸ್ಥಿತಿಯ ಅವಲೋಕನೆಗಾಗಿ ಕೆಲವು ವೇಳೆ ರಾತ್ರಿ 11ರಿಂದ ಬೆಳಿಗ್ಗೆ 5ರವರೆಗೆ ಕಾಯಬೇಕಾಗಿತ್ತು. ಆದರೆ ಮಕ್ಕಳ ಭದ್ರತೆ ನನ್ನ ಕರ್ತವ್ಯವಾಗಿತ್ತು ಎಂದು ಮಕ್ಕಳಿಗೆ ಕೊಟ್ಟ ಹೆಚ್ಚು ರಜಾದಿನಗಳು ಮತ್ತು ಅವರಿಂದ ಪಡೆದ ಪ್ರೀತಿಯನ್ನು ಗೆದ್ದಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು.
ಮಂಗಳೂರು ಒಂದು ಅದ್ಭುತ ನಗರ, ಇದು ವಿಶೇಷ ಕಲೆ, ವಿಶೇಷ ಸಂಸ್ಕೃತಿ ಹಾಗೂ ಪ್ರತಿಭೆಯಿಂದ ತುಂಬಿರುವ ಸ್ಥಳ. ಇಲ್ಲಿ ಕಳೆದ ಸಮಯ ನನ್ನ ಮನಸ್ಸಲ್ಲಿ ಶಾಶ್ವತ ನೆನಪು ತರುತ್ತದೆ. ಈ ನಗರ ನನ್ನ ಜೀವನದ ಒಂದು ಭಾಗವಾಗಿಬಿಟ್ಟಿದೆ. ಮಂಗಳೂರನ್ನು ಮಿಸ್ ಮಾಡಿಕೊಳ್ಳುತ್ತೇನೆ. ಆದರೆ ಆಗಾಗ ಬರುತ್ತಿರುತ್ತೇನೆ ಎಂದು ಮುಲ್ಲೈ ಮುಹಿಲನ್ ಹೇಳಿದರು.
ತಮಿಳುನಾಡು ಮೂಲದ ಮುಹಿಲನ್ ಎಂಜಿನಿಯರಿಂಗ್ ಪದವಿ ಪಡೆದು ಬಿಟೆಕ್ ಮುಗಿಸಿದ ನಂತರ ಐಎಎಸ್ ಪರೀಕ್ಷೆ ಬರೆದ 2013 ರ ಬ್ಯಾಚ್‌ನ ಐಎಎಸ್ ಅಧಿಕಾರಿ ಮತ್ತು ಪರೀಕ್ಷೆಯಲ್ಲಿ 46 ನೇ ಸ್ಥಾನ ಪಡೆದರು. ಉತ್ತರ ಕರ್ನಾಟಕದ ಜಮಖಂಡಿಯಲ್ಲಿ ಸಹಾಯಕ ಆಯುಕ್ತರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಭಾಷಾ ಸಮಸ್ಯೆ ಇದ್ದರೂ ಅದನ್ನು ಕಲಿತು ಇಂದು ಜನಮೆಚ್ಚುಗೆ ಪಡೆದಿದ್ದಾರೆ.
ಇದೀಗ ದಕ್ಷಿಣ ಕನ್ನಡ ಜಿಲ್ಲೆಗೆ ದರ್ಶನ್ ಕೆ.ವಿ ಅವರನ್ನು ಹೊಸ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದ್ದು, ಮುಲ್ಲೈ ಮುಹಿಲನ್ ಅವರನ್ನು ಬೆಂಗಳೂರಿಗೆ ನೋಂದಣಿ ಮತ್ತು ಅಂಚೆಚೀಟಿಗಳ ಆಯುಕ್ತರಾಗಿ, ಇನ್ಸ್‌ಪೆಕ್ಟರ್ ಜನರಲ್ ಹುದ್ದೆಗೆ ವರ್ಗಾಯಿಸಲಾಗಿದೆ.