ವಾಷಿಂಗ್ಟನ್ (ಅಮೆರಿಕ) : ಅಮೆರಿಕದ ಇಬ್ಬಗೆ ನೀತಿ ಮತ್ತೊಮ್ಮೆ ಬಯಲಾಗಿದೆ. ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷದಲ್ಲಿ ‘ಕದನ ವಿರಾಮ’ ಮಾಡಿಸಿದ್ದೇ ನಾನು ಎಂದು ಕೊಚ್ಚಿಕೊಳ್ಳುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಾಕ್ನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ಗೆ ಇಂದು ಶ್ವೇತಭವನದಲ್ಲಿ ಭೋಜನಕೂಟ ಆಯೋಜಿಸಿದ್ದಾರೆ.
ಭಾರತ ‘ಉತ್ತಮ ವ್ಯಾಪಾರಿ ಸ್ನೇಹ ರಾಷ್ಟ್ರ’ ಎಂದು ಹೇಳುವ ಅಮೆರಿಕ, ಪಾಕಿಸ್ತಾನದ ಬಗ್ಗೆಯೂ ಮೃದು ಧೋರಣೆ ಹೊಂದಿದೆ. ಭಾರತ- ಪಾಕ್ ನಡುವೆ ಉಗ್ರವಾದದ ಕುರಿತು ಸಂಬಂಧ ಹದಗೆಟ್ಟಿರುವಾಗ ಆ ದೇಶದ ಸೇನಾ ಮುಖ್ಯಸ್ಥನಿಗೆ ಶ್ವೇತಭವನದಲ್ಲಿ ಭೋಜನಕೂಟ ಆಯೋಜನೆ ಮಾಡಿದೆ.
ಶ್ವೇತಭವನದ ‘ಭೋಜನ’ ಆಹ್ವಾನವನ್ನೇ ದೊಡ್ಡದು ಎಂದು ಪರಿಭಾವಿಸಿರುವ ಇಸ್ಲಾಮಾಬಾದ್ನ ಅಧಿಕಾರಿಗಳು ‘ಇದು ರಾಜತಾಂತ್ರಿಕ ಗೆಲುವು’ ಎಂದು ಬಿಂಬಿಸುವ ಮೂಲಕ ಭಾರತವನ್ನು ಪರೋಕ್ಷವಾಗಿ ಕೆಣಕಿದ್ದಾರೆ.
“ಕೆನಡಾದಲ್ಲಿ ನಡೆಯುತ್ತಿರುವ ಜಿ7 ರಾಷ್ಟ್ರಗಳ ಶೃಂಗಸಭೆಯಿಂದ ನಿರ್ಗಮಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಂದು ಮಧ್ಯಾಹ್ನ 1 ಗಂಟೆಗೆ ಶ್ವೇತಭವನದ ಕ್ಯಾಬಿನೆಟ್ ಕೊಠಡಿಯಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ಗೆ ಭೋಜನ ಕೂಟ ಆಯೋಜಿಸಿದ್ದಾರೆ” ಎಂದು ಶ್ವೇತಭವನ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.