ಮಂಗಳೂರು, ಜೂನ್ 17 : ಅತಿ ವೇಗದಿಂದ ಕಾರು ಚಲಾಯಿಸಿ ಮಳೆಯ ನಡುವೆ ನಿಯಂತ್ರಣ ತಪ್ಪಿದ್ದ ಸ್ಕಿಡ್ ಆಗಿದ್ದರಿಂದ ಕಾರು ಡಿವೈಡರ್ ಬಡಿದು 2-3 ಪಲ್ಟಿಯಾದ ಘಟನೆ ನಗರದ ನಂತೂರಿನ ತಾರೆತೋಟ ಬಳಿಯಲ್ಲಿ ನಿನ್ನೆ ರಾತ್ರಿ ನಡೆದಿದ್ದು, ಕಾರು ಚಲಾಯಿಸುತ್ತಿದ್ದ ಖಾಸಗಿ ಆಸ್ಪತ್ರೆಯ ಫಿಸಿಯೋಥೆರಪಿ ವೈದ್ಯರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.


ಮೂಲತಃ ಕೇರಳದ ಆಲಪ್ಪುಝ ನಿವಾಸಿಯಾಗಿದ್ದು, ದೇರಳಕಟ್ಟೆ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಮುಗಿಸಿ ಅಲ್ಲಿಯೇ ಡ್ಯೂಟಿಗೆ ಸೇರಿದ್ದ ಡಾ.ಮೊಹಮ್ಮದ್ ಅಮಲ್ (29) ಮೃತರು. ನಿನ್ನೆ ರಾತ್ರಿ 11.45ರ ಸುಮಾರಿಗೆ ಇವರು ತನ್ನ ಗೆಳತಿ, ಕಣಚೂರು ಮೆಡಿಕಲ್ ಕಾಲೇಜಿನ ಕೇರಳ ಮೂಲದ ವಿದ್ಯಾರ್ಥಿನಿ ಜೊತೆಗೆ ಕಾರಿನಲ್ಲಿ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ನಂತೂರಿನಿಂದ ಪಂಪ್ವೆಲ್ ಕಡೆಗೆ ತನ್ನ ಸಿಯಾಝ್ ಕಾರಿನಲ್ಲಿ ತೆರಳುತ್ತಿದ್ದಾಗ ಹೆದ್ದಾರಿ ಪ್ರಾಧಿಕಾರದ ಕಚೇರಿ ಬಳಿ ಚಾಲಕನ ನಿಯಂತ್ರಣ ತಪ್ಪಿದ್ದು, ಅತಿ ವೇಗದಿಂದಾಗಿ ಡಿವೈಡರ್ ತಾಗಿ ನಡುವೆ ಹಾಕಿರುವ ಗ್ರಿಲ್ಸ್ ಮೇಲೆ ಹೋಗಿದೆ. ಆನಂತರ ಗ್ರಿಲ್ಸ್ ತಾಗಿಕೊಂಡೇ 2-3 ಪಲ್ಟಿಯಾಗಿ ರಸ್ತೆಯ ಮೇಲೆ ಬಿದ್ದಿದೆ. ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಗಂಭೀರ ಗಾಯಗೊಂಡಿದ್ದು, ಸೀರಿಯಸ್ ಆಗಿದ್ದ ಅವರನ್ನು ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಸಾವನ್ನಪ್ಪಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ವೈದ್ಯನ ಜೊತೆಗಿದ್ದ ವಿದ್ಯಾರ್ಥಿನಿ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾಳೆ. ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.