ಮನೆಯ ಸುತ್ತಲಿನ ಗುಡ್ಡ ಕುಸಿಯುವ ಅಪಾಯವಿದ್ದರೂ, ಈ ಬಗ್ಗೆ ಕಳೆದ ಮೂರು ವರ್ಷಗಳಿಂದ ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ದೂರು ಸಲ್ಲಿಸುತ್ತಿದ್ದರೂ ಯಾವುದೆ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಮಹಿಳೆ ಸಾರಮ್ಮ ಅವರು ದೂರಿದ್ದಾರೆ. “ಪಂಚಾಯತ್ ಪ್ರತಿನಿಧಿಗಳು ಸ್ಥಳೀಯ ಬಿಜೆಪಿ ಬೆಂಬಲಿತ ವ್ಯಕ್ತಿಯೊಂದಿಗೆ ಸೇರಿ ನಮ್ಮ ಕುಟುಂಬದ ಬಲಿಗಾಗಿ ಕಾಯುತ್ತಿದ್ದಾರೆ” ಎಂದು ಅವರು ಗಂಭೀರವಾಗಿ ಅರೋಪಿಸಿದ್ದಾರೆ. ಬಂಟ್ವಾಳ | ಭೂ ಕುಸಿತದ
ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಷದ ಮೇ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಗುಡ್ಡ ಕುಸಿದು ಸಾವು ನೋವುಗಳ ಎರಡು ಪ್ರತ್ಯೇಕ ಘಟನೆಗಳು ವರದಿಯಾಗಿದ್ದವು. ಈ ಎರಡೂ ಘಟನೆಗಳು ಜಿಲ್ಲೆಯ ಉಳ್ಳಾಲ ತಾಲೂಕಿನಲ್ಲಿ ನಡೆದಿದ್ದು, ಒಂದು ಘಟನೆ ತಾಲೂಕಿನ ಮೊಂಟೆಪದವು ಎಂಬಲ್ಲಿ ಸಂಭವಿಸಿದ್ದು ಇದರಲ್ಲಿ ಒಂದೆ ಕುಟುಂಬದ ಇಬ್ಬರು ಮಕ್ಕಳು ಸೇರಿ ಮೂವರು ಮೃತಪಟ್ಟರೆ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದವು. ಅದೇ ದಿನ ನಡೆದ ಮತ್ತೊಂದು ಘಟನೆಯಲ್ಲಿ ದೇರಳಕಟ್ಟೆ ಬಳಿ ಗುಡ್ಡ ಜರಿದು 6 ವರ್ಷದ ಬಾಲಕಿ ಸಾವನ್ನಪ್ಪಿದ್ದರು.
ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಸಾರಮ್ಮ ಅವರು, “ನಮ್ಮ ಮನೆಯ ಮೂರು ದಿಕ್ಕಿನಲ್ಲಿ ಗುಡ್ಡಿವಿದ್ದು, ಜೋರಾಗಿ ಮಳೆ ಬಂದರೆ ಕುಸಿಯುವ ಅಪಾಯದ ಸ್ಥಿತಿಯಲ್ಲಿದೆ. ಈ ಬಗ್ಗೆ ನಾವು ಗ್ರಾಮ ಪಂಚಾಯತ್ ಕಚೇರಿಗೆ ಮೂರು ವರ್ಷಗಳಿಂದ ಪತ್ರ ಬರೆಯುತ್ತಲೆ ಇದ್ದೇವೆ. ಆದರೆ ಗುಡ್ಡವನ್ನು ವಶದಲ್ಲಿ ಇಟ್ಟುಕೊಂಡಿರುವ ಸ್ಥಳೀಯ ವ್ಯಕ್ತಿಯು ಪಂಚಾಯತ್‌ನ ಅಧಿಕಾರಿಗಳನ್ನು ಮತ್ತು ಪ್ರತಿನಿಧಿಗಳನ್ನು ತನ್ನ ಹಣ ಬಲದಿಂದ ನಮಗೆ ಸಹಾಯ ಮಾಡದಂತೆ ತಡೆಯುತ್ತಿದ್ದಾರೆ” ಎಂದು ಅರೋಪಿಸಿದ್ದಾರೆ.
“ಮಳೆ ಬಂದರೆ ನಮ್ಮ ಮನೆಯ ಮೇಲಿನ ಗುಡ್ಡದ ನೀರು ಅಂಗಳಕ್ಕೆ ಬಂದು ಬೀಳುತ್ತಿವೆ. ಹಾಗಾಗಿ ಅಲ್ಲಿನ ಮಣ್ಣು ಕರಗಿ ಕುಸಿಯುವ ಅಪಾಯವಿದೆ. ಈ ಬಗ್ಗೆ ನಾವು ಪದೇ ಪದೇ ಪಂಚಾಯತ್‌ನಲ್ಲಿ ದೂರಿದಾಗ ನಮ್ಮ ಮನೆಗೆ ಬರುವ ರಸ್ತೆಯನ್ನು ಮಣ್ಣು ಹಾಕಿ ಮುಚ್ಚಿದ್ದಾರೆ. ಗುಡ್ಡದಿಂದ ಬಂದ ನೀರು ಅಂಗಳದಲ್ಲೆ ಬಾಕಿಯಾಗಿದ್ದು ನೀರು ಹೊರಗೆ ಹೋಗದಂತೆ ತೊಂದರೆ ನೀಡುತ್ತಿದ್ದಾರೆ. ಇತ್ತ ಕುಸಿಯುವ ಭೀತಿಯಲ್ಲಿರುವ ಗುಡ್ಡವಿದ್ದರೆ, ಮತ್ತೊಂದೆಡೆ ಮನೆಗೆ ಬರಬಹುದಾದ ರಸ್ತೆಯನ್ನು ಮಣ್ಣು ಹಾಕಿ ಮುಚ್ಚಿದ್ದಾರೆ.” ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೆ ಅವರೂ ಸಹಾಯ ಮಾಡುತ್ತಿಲ್ಲ, ಪಂಚಾಯತ್ ಪ್ರತಿನಿಧಿಗಳು ಗುಡ್ಡವನ್ನು ವಶದಲ್ಲಿ ಇಟ್ಟುಕೊಂಡಿರುವ ವ್ಯಕ್ತಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಅವರು ಅಸಾಯಕಾರಿ ಹೇಳಿದ್ದಾರೆ. “ಸ್ಥಳೀಯ ಪ್ರತಿನಿಧಿಗಳು ನಮ್ಮ ಕುಟುಂಬದ ಬಲಿಗಾಗಿ ಕಾಯುತ್ತಿದ್ದಾರೆ” ಎಂದು ಸಾರಮ್ಮ ಅವರು ಆರೋಪಿಸಿದ್ದಾರೆ.
“ಗುಡ್ಡವನ್ನು ವಶದಲ್ಲಿ ಇಟ್ಟುಕೊಂಡಿರುವ ಉಲ್ಲಾಸ್ ರೈ, ಉತ್ತಮ್ ರೈ ಮತ್ತು ಉದಯ ರೈ ಎಂಬವರ ತಂದೆಯಾದ ತ್ಯಾಂಪಣ್ಣ ರೈ ಎಂಬವರ ಕೈಯ್ಯಿಂದ 2007ರಲ್ಲಿ 10 ಸೆಂಟ್ಸ್ ಭೂಮಿಯನ್ನು ಖರೀದಿ ಮಾಡಿ ಮನೆ ನಿರ್ಮಿಸಿದ್ದವು. ಜಮೀನು ಖರೀದಿ ಮಾಡುವ ವೇಳೆ ವಾಹನ ಬರುವ ರಸ್ತೆಯನ್ನು ಉಪಯೋಗಿಸುವ ಹಕ್ಕು ಕೂಡಾ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಈಗ ತ್ಯಾಂಪಣ್ಣ ರೈ ಅವರ ಮಕ್ಕಳು ಆ ರಸ್ತೆಯನ್ನು ಬಂದ್ ಮಾಡಿ ನಮ್ಮ ಅಂಗಳದಲ್ಲಿ ನೀರು ನಿಲ್ಲುವಂತೆ ಆಗಿದೆ.” ಎಂದು ಸಾರಮ್ಮ ಅವರು ಹೇಳಿದ್ದಾರೆ.
ಈ ಬಗ್ಗೆ ಅವರು ಭೂಮಿ ಖರೀದಿ ವೇಳೆ ಮಾಡಿರುವ ದಾಖಲೆಯನ್ನು ನಾನುಗೌರಿ.ಕಾಂಗೆ ನೀಡಿದ್ದಾರೆ. ಇಷ್ಟೆಲ್ಲಾ ದಾಖಲೆಯಿದ್ದರೂ ಪಂಚಾಯತ್ ಸ್ಥಳೀಯ ಪ್ರತಿನಿಧಿಗಳು ಗುಡ್ಡವನ್ನು ವಶದಲ್ಲಿ ಇಟ್ಟುಕೊಂಡಿರುವ ವ್ಯಕ್ತಿಗಳಿಗೆ ಬೆಂಬಲ ನೀಡುತ್ತಾ ನಮಗೆ ಅನ್ಯಾಯ ಎಸಗುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ಮಾತನಾಡಿದ ಬಾಳ್ತಿಲ ಗ್ರಾಮ ಪಂಚಾಯತ್ ಪಿಡಿಒ ಸಂಧ್ಯಾ ಅವರು, “ಈ ಬಗ್ಗೆ ಪಂಚಾಯತ್‌ಗೆ ದೂರು ಬಂದಿದೆ. ಆದರೆ ಸಮಸ್ಯೆ ಏನೆಂದರೆ, ಕುಸಿಯುವ ಭೀತಿಯಲ್ಲಿರುವ ಗುಡ್ಡವೂ ಉದಯ್ ರೈ ಮತ್ತು ಉತ್ತಮ್ ರೈ ಎಂಬವರ ಖಾಸಗಿ ಭೂಮಿಯಾಗಿದ್ದು, ಸರ್ಕಾರಿ ಭೂಮಿಯಲ್ಲ. ಈ ಹಿಂದೆಯೆ ನಾವು ಅಪಾಯದಂಚಿನಲ್ಲಿರುವ ಮಣ್ಣನ್ನು ತೆರವು ಮಾಡುವಂತೆ ಅವರಿಗೆ ತಿಳಿಸಿದ್ದೆವು. 6 ತಿಂಗಳ ಒಳಗೆ ಅದನ್ನು ತೆರವು ಮಾಡುತ್ತೇವೆ ಎಂದು ಅವರು ಹೇಳಿದ್ದರೂ, ಈವರೆಗೆ ಅದನ್ನು ಮಾಡಿಲ್ಲ.” ಎಂದು ಹೇಳಿದರು.
“ಅದರ ನಂತರ, ಇತ್ತಿಚೆಗೆ ಗ್ರಾಮ ಪಂಚಾಯತ್ ಅಧ್ಯಕ್ಷರೊಂದಿಗೆ ಮತ್ತೆ ಸ್ಥಳಕ್ಕೆ ಭೇಟಿ ನೀಡಿ ಅವರಿಗೆ ಹೇಳಿದ್ದೆವು. ಖಾಸಗಿ ಭೂಮಿ ಆಗಿರುವುದರಿಂದ, ಬಂಟ್ವಾಳ ತಹಶಿಲ್ದಾರ್ ಅವರಿಗೆ ಪತ್ರ ಕೂಡಾ ಬರೆದು ಮಣ್ಣು ತೆರವು ಮಾಡಿಸುವಂತೆ ಕೇಳಿಕೊಂಡಿದ್ದೇವೆ. ಜೊತೆಗೆ ರಸ್ತೆ ಬಂದ್ ಮಾಡಿರುವ ವಿಚಾರದ ಬಗ್ಗೆ ಕೂಡಾ ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ನಾವು ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದರು.
ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, “ಈ ಬಗ್ಗೆ ಕಂದಾಯ ನಿರೀಕ್ಷಕರು ಬಂದು ಪರಿಶೀಲನೆ ಮಾಡಿದ್ದಾರೆ. ಗುಡ್ಡವು ಖಾಸಗಿ ಜಮೀನಾಗಿದ್ದು ಉತ್ತಮ್ ರೈ ಮತ್ತು ಸಹೋದರರ ಜಂಟಿ ಆಸ್ತಿ ಎಂದು ಪ್ರತಿಪಾದನೆ ಮಾಡುತ್ತಿದ್ದಾರೆ. ಅಪಾಯದಂಚಿನಲ್ಲಿರುವ ಮಣ್ಣು ತೆರವು ಮಾಡುತ್ತೇವೆ ಎಂದು ಹೇಳಿದ್ದರೂ ಅವರು ಈ ವರೆಗೆ ಅದನ್ನು ಮಾಡಿಲ್ಲ. ಸಧ್ಯ ಯಾವುದೇ ಅಪಾಯವನ್ನು ತಡೆಗಟ್ಟಲು ನಾವು ಸಾರಮ್ಮ ಅವರಿಗೆ ಮನೆಯಿಂದ ಸ್ಥಳಾಂತರಗೊಳ್ಳುವಂತೆ ಕೇಳಿಕೊಂಡಿದ್ದೇವೆ. ಮಳೆ ಕಡಿಮೆಯಾದರೆ ಮಣ್ಣು ತೆರವು ಮಾಡಿಕೊಡುತ್ತೇವೆ” ಎಂದು ಹೇಳಿದರು.
ಬಂಟ್ವಾಳ ತಹಶಿಲ್ದಾರ್ ಅರ್ಚನಾ ಭಟ್ ಅವರು ಮಾತನಾಡಿ, “ಬಾಳ್ತಿಲ ಪಂಚಾಯತ್‌ಗೆ ಭೇಟಿ ನೀಡಿ ಈ ಸಮಸ್ಯೆಯನ್ನು ಪರಿಶೀಲನೆ ಮಾಡಿದ್ದೇನೆ. ಸಧ್ಯ ಭಾರಿ ಮಳೆ ಸುರಿಯುತ್ತಿದ್ದು, ನಮಗೆ ಜನರ ಜೀವ ಮುಖ್ಯವಾಗಿದೆ. ಹಾಗಾಗಿ, ಸಾರಮ್ಮ ಅವರ ಕುಟುಂಬವನ್ನು ಮನೆಯಿಂದ ಸ್ಥಳಾಂತರ ಮಾಡಲು ಸೂಚನೆ ನೀಡಿದ್ದೇನೆ. ಉಳಿದಂತೆ ಅಪಾಯದಂಚಿನಲ್ಲಿರುವ ಮಣ್ಣನ್ನು ಮಳೆ ನಿಂತ ನಂತರ ತೆರವು ಮಾಡುತ್ತೇವೆ. ಉಳಿದಂತೆ ಅವರ ಮನೆಗೆ ಹೋಗುವ ರಸ್ತೆಯ ವಿವಾದವನ್ನು ಮತ್ತೆ ಪರಿಶೀಲನೆ ಮಾಡುತ್ತೇವೆ” ಎಂದು ಹೇಳಿದರು.
ಈ ಬಗ್ಗೆ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ಕಚೇರಿಯು ಈ ಬಗ್ಗೆ ಮಾಹಿತಿ ಪಡೆದಿದ್ದು, ತಹಶಿಲ್ದಾರ್ ಅವರಿಗೆ ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸೂಚಿಸಲಿದ್ದೇವೆ ಎಂದು ತಿಳಿದು ಬಂದಿದೆ
ವರದಿ :ನಾನು ಗೌರಿ