ಮಂಗಳೂರು ನಗರದಲ್ಲಿ ಮಧ್ಯಾಹ್ನದ ಬಳಿಕ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ.
ಮಂಗಳೂರು: ಹವಾಮಾನ ಇಲಾಖೆ ಕರಾವಳಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮಧ್ಯಾಹ್ನದ ಬಳಿಕ ಭಾರಿ ಮಳೆಯಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲಾದ್ಯಂತ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮಂಗಳೂರು ನಗರದಲ್ಲಿ ಮಧ್ಯಾಹ್ನದ ಬಳಿಕ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ನಗರದ ವಿವಿಧೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ನಗರದ ಪಂಪ್ ವೆಲ್ ಫ್ಲೈಓವರ್ನ ಕೆಳಭಾಗದಲ್ಲಿ ಇರುವ ಸರ್ವಿಸ್ ರಸ್ತೆಗಳಲ್ಲಿ ನೀರು ತುಂಬಿ ವಾಹನ ಓಡಾಟಕ್ಕೆ, ಜನ ಸಂಚಾರಕ್ಕೆ ಅಡಚಣೆಯಾಗಿದೆ.
ರಸ್ತೆಯಲ್ಲಿ ನಿಂತ ನೀರಿನಿಂದ ಬಸ್ಸೊಂದು ಕೆಟ್ಟು ನಿಂತಿದ್ದು, ಸಾರ್ವಜನಿಕರು ಬಸ್ಸನ್ನು ರಸ್ತೆ ಬದಿಗೆ ತಳ್ಳಿದ್ದಾರೆ. ಇನ್ನು ಪಡೀಲ್ ರೈಲ್ವೆ ಅಂಡರ್ ಪಾಸ್ನಲ್ಲಿಯೂ ರಸ್ತೆಯಲ್ಲಿ ನೀರು ತುಂಬಿ ವಾಹನ ಓಡಾಟಕ್ಕೆ ಅಡಚಣೆಯಾಗಿದೆ. ನಗರದ ಕಾರ್ಸ್ಟ್ರೀಟ್ನಲ್ಲಿ ಕೃತಕ ನೆರೆಗೆ ರಸ್ತೆಯಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ನಗರದ ತಗ್ಗು ಪ್ರದೇಶಗಳಲ್ಲಿ ಇರುವ ಮನೆಗಳಿಗೆ ನೀರು ತುಂಬಿದ್ದು, ಮನೆಯೊಳಗೆ ನೀರು ನುಗ್ಗಿದೆ.
ಹವಾಮಾನ ಇಲಾಖೆ ಕಳೆದ ಮೂರು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿದ್ದರೂ ಜಿಲ್ಲೆಯಲ್ಲಿ ಭಾರೀ ಮಳೆ ಆಗಿರಲಿಲ್ಲ. ಆದರೆ, ಇಂದು ಮಧ್ಯಾಹ್ನದಿಂದ ಭಾರಿ ಮಳೆ ಸುರಿಯುತ್ತಿದ್ದು, ದಟ್ಟ ಮೋಡಗಳು ಇನ್ನಷ್ಟು ಮಳೆಯ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ 16ರ ಮುಂಜಾನೆ ವರೆಗೆ ರೆಡ್ ಅಲರ್ಟ್ ಎಚ್ಚರಿಕೆ ಇದ್ದು, ಇನ್ನಷ್ಟು ಭಾರಿ ಮಳೆ ಸುರಿಯುವ ಸಾಧ್ಯತೆ ದಟ್ಟವಾಗಿದೆ.