ಶುಕ್ರವಾರ ಇರಾನ್ ಮೇಲೆ ಇಸ್ರೇಲ್ ಭಾರೀ ವೈಮಾನಿಕ ದಾಳಿ ನಡೆಸಿತ್ತು. ಇದಕ್ಕೆ ಪ್ರತೀಕಾರ ತೀರಿಸಿಕೊಂಡಿರುವ ಇರಾನ್ ಇಸ್ರೇಲ್‌ನ ಎರಡು ಎಫ್-35 ಜೆಟ್‌ಗಳನ್ನು ಹೊಡೆದುರುಳಿಸಿದೆ ಎಂದು ಇರಾನ್ ಹೇಳಿಕೊಂಡಿದೆ. ಇಂದು ಇಸ್ರೇಲ್ ಒಳಗೆ ನುಗ್ಗಿರುವ ಇರಾನ್ ಸೇನೆ ಕ್ಷಿಪಣಿ ದಾಳಿಯನ್ನು ಆರಂಭಿಸಿದೆ. ಇಸ್ರೇಲಿ ತಾಣಗಳನ್ನು ಗುರಿಯಾಗಿಸಿಕೊಂಡು ಇರಾನ್ 100ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹಾರಿಸಿತು. ಅವುಗಳಲ್ಲಿ ಹೆಚ್ಚಿನವು ಇಸ್ರೇಲ್‌ನ ವಾಯು ರಕ್ಷಣಾ ವ್ಯವಸ್ಥೆಗಳಿಂದ ತಡೆಹಿಡಿಯಲ್ಪಟ್ಟವು.
ಟೆಲ್ ಅವಿವ್, ಜೂನ್ 14: ಶುಕ್ರವಾರ (ಜೂನ್ 13) ಇರಾನ್ (Iran) ಮೇಲೆ ಇಸ್ರೇಲ್ ವೈಮಾನಿಕ ದಾಳಿ (Israel Air Strike) ನಡೆಸಿ ಸುಮಾರು 80 ಜನರನ್ನು ಕೊಂದಿತ್ತು. ಈ ದಾಳಿಯಲ್ಲಿ 400ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿತ್ತು. ಈ ದಾಳಿಗೆ ಅರಬ್ ರಾಷ್ಟ್ರಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಇಸ್ರೇಲ್‌ನ ದಾಳಿಗೆ ಪ್ರತೀಕಾರ ತೀರಿಸಿಕೊಂಡಿರುವ ಇರಾನ್ ಇಂದು ಇಸ್ರೇಲ್ ಒಳಗೆ ನುಗ್ಗಿದೆ. ಇಸ್ರೇಲ್ ನ ರಾಜಧಾನಿ ಟೆಲ್ ಅವಿವ್ನಲ್ಲಿ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಇದರಲ್ಲಿ 3 ನಾಗರಿಕರು ಮೃತಪಟ್ಟಿದ್ದಾರೆ.
ಶುಕ್ರವಾರ ನಡೆದ ಮಾರಕ ಇಸ್ರೇಲಿ ದಾಳಿಗೆ ಪ್ರತೀಕಾರವಾಗಿ ಎರಡು ಇಸ್ರೇಲಿ F-35 ಸ್ಟೆಲ್ತ್ ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಿರುವುದಾಗಿ ಇರಾನ್ ಹೇಳಿಕೊಂಡಿದೆ. ಈ ದಾಳಿಯಲ್ಲಿ ಹಲವಾರು ಉನ್ನತ ಇರಾನಿನ ಮಿಲಿಟರಿ ಕಮಾಂಡರ್‌ಗಳು, ಪರಮಾಣು ವಿಜ್ಞಾನಿಗಳು ಮತ್ತು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇರಾನ್‌ನ ವಾಯು ರಕ್ಷಣಾ ಇಲಾಖೆ ನೇರ ದಾಳಿ ನಡೆಸಿರುವುದಆಗಿ ಹೇಳಿಕೊಂಡಿದೆ.

ಇರಾನ್‌ನ ಸೇನಾ ಸಾರ್ವಜನಿಕ ಸಂಪರ್ಕ ಕಚೇರಿ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ, ದೇಶದ ವಾಯು ರಕ್ಷಣಾ ಘಟಕಗಳು ಎರಡು ಇಸ್ರೇಲಿ ಫೈಟರ್ ಜೆಟ್‌ಗಳನ್ನು ಮತ್ತು ಬಹು ಡ್ರೋನ್‌ಗಳನ್ನು ಯಶಸ್ವಿಯಾಗಿ ಗುರಿಯಾಗಿಸಿ ನಾಶಪಡಿಸಿವೆ ಎಂದು ದೃಢಪಡಿಸಲಾಗಿದೆ. ಯುನೈಟೆಡ್ ಸ್ಟೇಟ್ಸ್ ಅಭಿವೃದ್ಧಿಪಡಿಸಿದ ಮತ್ತು ಇಸ್ರೇಲ್ ಬಳಸುತ್ತಿರುವ F-35 ಸ್ಟೆಲ್ತ್ ಫೈಟರ್ ಅನ್ನು ವಿಶ್ವದ ಅತ್ಯಂತ ಮುಂದುವರಿದ ಐದನೇ ತಲೆಮಾರಿನ ಯುದ್ಧ ವಿಮಾನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಅಂತಹ ಜೆಟ್ ಅನ್ನು ಹೊಡೆದುರುಳಿಸುವುದು ಇರಾನ್ ಮಿಲಿಟರಿ ಸಾಮರ್ಥ್ಯದ ಗಮನಾರ್ಹ ಪ್ರದರ್ಶನವೆಂದು ಪರಿಗಣಿಸಲಾಗಿದೆ. ಇರಾನ್‌ನ ಹೇಳಿಕೆ ನಿಜವಾದರೆ ಅದು ಯುದ್ಧದಲ್ಲಿ F-35 ಅನ್ನು ಹೊಡೆದುರುಳಿಸಿದ ಮೊದಲ ರಾಷ್ಟ್ರವಾಗಲಿದೆ.
ಭಾರತದಲ್ಲಿನ ಇರಾನಿನ ರಾಯಭಾರ ಕಚೇರಿಯು ತನ್ನ ಅಧಿಕೃತ ಎಕ್ಸ್ (ಹಿಂದಿನ ಟ್ವಿಟರ್) ಹ್ಯಾಂಡಲ್‌ನಲ್ಲಿ ಈ ಕುರಿತು ಹೇಳಿಕೆಯನ್ನು ಹಂಚಿಕೊಂಡಿದ್ದು, “ಇರಾನ್‌ನ ವಾಯು ರಕ್ಷಣಾ ಪಡೆ ಎರಡು ಇಸ್ರೇಲಿ F-35 ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಿತು ಮತ್ತು ಹಲವಾರು ಶತ್ರು ಡ್ರೋನ್‌ಗಳನ್ನು ತಡೆಹಿಡಿಯಿತು” ಎಂದು ಪೋಸ್ಟ್ ಮಾಡಿದೆ.